ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪ್ರಸಿದ್ಧ ಜಾತ್ರೆ ಇಂದಿನಿಂದ ಆರಂಭ

ಒಂಬತ್ತು ದಿನಗಳ ಉತ್ಸವ: ಸಾಗರದ ಸಹಬಾಳ್ವೆಯ ಸಂಕೇತ ಮಾರಿಕಾಂಬಾ ದೇವಿಯ ಜಾತ್ರೆ
Last Updated 7 ಫೆಬ್ರುವರಿ 2023, 5:03 IST
ಅಕ್ಷರ ಗಾತ್ರ

ಸಾಗರ: ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆ ಫೆ. 7ಕ್ಕೆ ಆರಂಭಗೊಳ್ಳುತ್ತಿದೆ. ಫೆ.15ರವರೆಗೂ ನಡೆಯಲಿದೆ. ಜಾತ್ರೆಗಾಗಿ ಸಾಗರ ಸಿಂಗಾರಗೊಂಡು ಸಿದ್ಧವಾಗಿದೆ.

ಮಲೆನಾಡಿನ ಮೂಲೆ, ಮೂಲೆಯಿಂದ ಜನರು ಅಪಾರ ಸಂಖ್ಯೆಯಲ್ಲಿ ಸೇರುವುದು ಜಾತ್ರೆಯ ವಿಶೇಷತೆ. ಇಲ್ಲಿನ ಜನರು ದೂರದ ಊರುಗಳಲ್ಲಿರುವ ತಮ್ಮ ಸ್ನೇಹಿತರು, ನೆಂಟರಿಷ್ಟರು, ಬಂಧು ಬಳಗದವರನ್ನು ಮನೆಗೆ ಬರಮಾಡಿಕೊಂಡು ಉಪಚರಿಸುತ್ತಾರೆ.

ಮೂಲತಃ ಸಾಗರದವರಾದ ಹೆಣ್ಣು ಮಕ್ಕಳು ಮದುವೆಯ ನಂತರ ಬೇರೆ ಕಡೆ ನೆಲೆಸಿದ್ದಲ್ಲಿ ತವರಿಗೆ ತಪ್ಪದೇ ಬಂದು ದೇವಿಗೆ ಉಡಿ ತಂಬುವ ಮೂಲಕ ಧನ್ಯತೆಯ ಭಾವ ಪಡೆಯುತ್ತಾರೆ. ಎಷ್ಟೋ ವರ್ಷಗಳಿಂದ ಭೇಟಿಯಾಗದೆ ಇದ್ದ ಗೆಳೆಯ ಗೆಳತಿಯರ, ಬಂಧುಗಳ ಪುನರ್ ಮಿಲನಕ್ಕೆ ವೇದಿಕೆ ಸೃಷ್ಟಿಯಾಗುವುದು ಜಾತ್ರೆಯ ವಿಶೇಷತೆಗಳಲ್ಲೊಂದು.

ಜನಪದೀಯ ಹಿನ್ನೆಲೆಯ ಸಾಂಪ್ರದಾಯಿಕ ಆಚರಣೆಯ ವಿಧಿ ವಿಧಾನಗಳನ್ನು ಮಾರಿಜಾತ್ರೆ ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ. ಈ ಎಲ್ಲಾ ವಿಧಿ– ವಿಧಾನಗಳನ್ನು ವಿವಿಧ ಸಮುದಾಯದವರು ನೆರವೇರಿಸುತ್ತಾರೆ. ಛಲವಾದಿ, ಉಪ್ಪಾರ, ಗಂಗಾಮತ, ಕೆಂಚಿಗಾರ, ಚಮ್ಮಾರ, ಮಡಿವಾಳ, ಗುಡಿಗಾರ, ಚಾರೋಡಿ ಕೊಂಕಣಿ ಆಚಾರ್, ದೈವಜ್ಙ ಬ್ರಾಹ್ಮಣ... ಹೀಗೆ ಹತ್ತು ಹಲವು ಸಮುದಾಯವರ ಒಳಗೊಳ್ಳುವಿಕೆ ಇರುತ್ತದೆ.

ಈ ಹಿಂದೆ ಪ್ರತಿ ಜಾತ್ರೆಯ ಸಂದರ್ಭದಲ್ಲೂ ಪೂಜಿಸಲ್ಪಡುವ ದೇವಿಯ ವಿಗ್ರಹವನ್ನು ಹೊಸದಾಗಿ ತಯಾರಿಸಲಾಗುತ್ತಿತ್ತು. ಕ್ರಮೇಣ ಈ ಕೆಲಸಕ್ಕಾಗಿ ಒಂದು ಮರವನ್ನು ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕಾಗಿ ಸಿದ್ಧಪಡಿಸಿದ ದೇವಿಯ ವಿಗ್ರಹವನ್ನು ಮರು ಜೋಡಿಸಿ ಬಣ್ಣ ಬಳಿದು ಸಿಂಗರಿಸುವ ಸಂಪ್ರದಾಯ ರೂಢಿಗೆ ಬಂದಿದೆ.

ಜಾತ್ರೆಯ ಮೊದಲ ದಿನ ಬೆಳಿಗ್ಗೆ 5ಕ್ಕೆ ದೇವಿಯ ವಿಗ್ರಹಕ್ಕೆ ಕುಂಕುಮವಿಟ್ಟು ಬೊಟ್ಟು ತೊಡಿಸಿ, ಮಾಂಗಲ್ಯಧಾರಣೆ ಮಾಡಿದ ನಂತರ ಮೊದಲ ಮಂಗಳಾರತಿ ನಡೆಯುತ್ತದೆ. ತದನಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಮೊದಲನೆ ದಿನ ರಾತ್ರಿ ದೇವಿಯನ್ನು ಮೆರವಣಿಗೆ ಮೂಲಕ ಗಂಡನ ಮನೆಗೆ ಕರೆದೊಯ್ಯುವ ಮುನ್ನ ಅಸಾದಿ ಜನಾಂಗದವರಿಂದ ದೇವಿಗೆ ಬೈಯುವ ಶಾಸ್ತ್ರ ನಡೆಯುತ್ತದೆ. ಹೀಗೆ ಬೈಗುಳ ಮಾಡದೆ ಇದ್ದರೆ ದೇವಿ ಹೊರಡುವುದಿಲ್ಲ ಎಂಬ ಪ್ರತೀತಿ ಇದೆ. ಇದೇ ವೇಳೆ ಪೋತರಾಜ (ಗಂಡನ ಮನೆ ದೇವಸ್ಥಾನದ ಅರ್ಚಕ) ನಿಂದ ಚಾಟಿ ಸೇವೆ ನಡೆಯುತ್ತದೆ.

ಜಾತ್ರೆಯ ಎರಡನೇ ದಿನ ಬೆಳಗಿನ ಜಾವದ ಹೊತ್ತಿಗೆ ದೇವಿಯ ವಿಗ್ರಹ ಗಂಡನ ಮನೆ ದೇವಸ್ಥಾನ ತಲುಪುತ್ತದೆ. ಜಾತ್ರೆ ಮುಗಿಯುವವರೆಗೂ ಅಲ್ಲಿ ನಿರ್ಮಿಸಿರುವ ಅಲಂಕೃತ ಮಂಟಪದಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಭಕ್ತರು ತಮ್ಮ ಹರಕೆಯನ್ನು ಅಲ್ಲಿಯೇ ತೀರಿಸುತ್ತಾರೆ.

ಈ ಮೊದಲು ದೇವಿಗೆ ಕೋಣವನ್ನು ಬಲಿ ಕೊಡುವ ಪದ್ಧತಿ ಚಾಲ್ತಿಯಲ್ಲಿತ್ತು. ಈಚಿನ ವರ್ಷಗಳಲ್ಲಿ ಇದರ ಬದಲಾಗಿ ಸಿರಿಂಜ್‌ನ ಮೂಲಕ ಕೋಣದ ರಕ್ತವನ್ನು ತೆಗೆದು ದೇವಿಯ ವಿಗ್ರಹಕ್ಕೆ ಸಿಂಪಡಿಸುವ ಪದ್ಧತಿ ಜಾರಿಗೆ ಬಂದಿದೆ. ಕುರಿಯನ್ನು ದೇವಿಯ ವಿಗ್ರಹದ ಎದುರು ಕೊಚ್ಚಿ ಅದರ ಚರ್ಮವನ್ನು ತೆಗೆಯುವ ಗಾವುಗುರಿ ಎಂಬ ಪದ್ಧತಿ ಕ್ರೂರ ಎನ್ನುವ ಕಾರಣಕ್ಕೆ ತೆರೆಮರೆಗೆ ಸರಿದಿದೆ.

ಜಾತ್ರೆಯ ಕೊನೆಯ ದಿನ ರಾಜಬೀದಿ ಉತ್ಸವದ ಮೂಲಕ ದೇವಿಯ ವಿಗ್ರಹವನ್ನು ವನಕ್ಕೆ ಬಿಡುವ ಮೂಲಕ ಜಾತ್ರೆ ಮುಕ್ತಾಯಗೊಳ್ಳುತ್ತದೆ. ಹೀಗೆ ವನಕ್ಕೆ ಕಳುಹಿಸುವ ಮುನ್ನ ದೇವಿಯ ವಿಗ್ರಹವಿರುವ ರಥವನ್ನು ಒಮ್ಮೆ ಊರಿನ ಕಡೆ ತಿರುಗಿಸಿ ‘ಊರಿನ ಅನಿಷ್ಠ, ಕೇಡುಗಳನ್ನು ನಿನ್ನೊಂದಿಗೆ ಕೊಂಡೊಯ್ಯಬೇಕು’ ಎಂದು ದೇವಿಯನ್ನು ಪ್ರಾರ್ಥಿಸುವ ಸಂಪ್ರದಾಯ ನಡೆಯುತ್ತದೆ.

ಜಾತ್ರೆ ಪ್ರಯುಕ್ತ ಮರಣ ಬಾವಿ, ತೊಟ್ಟಿಲು, ಜಾದೂ ಪ್ರದರ್ಶನ, ಶ್ವಾನ ಪ್ರದರ್ಶನ, ಟೊರಾ ಟೊರಾ
ಸೇರಿದಂತೆ ಹಲವು ಆಟಿಕೆಗಳ ಅಮ್ಯೂಸ್‌ಮೆಂಟ್, ವಿವಿಧ ತಿನಿಸು, ಉತ್ಪನ್ನಗಳ ಮಾರಾಟದ ಮೂಲಕ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ. ಇಲ್ಲಿ ಜಾತಿ, ಧರ್ಮಗಳ ಬೇಧ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಾರೆ. ಹೀಗಾಗಿ ಇಲ್ಲಿನ ಜಾತ್ರೆ ಸಹಬಾಳ್ವೆಯ ಸಂಕೇತವೆಂದೆ ಪ್ರಚಲಿತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT