ಶಿವಮೊಗ್ಗ: ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕೆ ಬಜೆಟ್‌ನಲ್ಲಿ ತೆಗೆದಿಡಲಾಗಿದ್ದ ಎಲ್ಲಾ ಅನುದಾನವನ್ನು ವಾಪಸ್ ಪಡೆದು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಬಳಸಿಕೊಂಡಿದೆ ಎಂದು ಮಾಜಿ ಸಚಿವ, ಬಿಜೆಪಿಯ ಎನ್. ಮಹೇಶ್ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಗುರುವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಪರಿಶಿಷ್ಟ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ ಎಂದರು.
ವಾಲ್ಮೀಕಿ ನಿಗಮದ ₹187 ಕೋಟಿ ಅನುದಾನವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಸರ್ಕಾರ ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಸಚಿವ ನಾಗೇಂದ್ರ ಬಂಧನಕ್ಕೊಳಗಾಗಿ ತನಿಖೆ ಎದುರಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು ಸದನದಲ್ಲಿ ₹187 ಕೋಟಿ ಅಲ್ಲ, ಬದಲಿಗೆ ₹89 ಕೋಟಿ ಎಂದು ಒಪ್ಪಿಕೊಂಡಿದ್ದಾರೆ ಎಂದರು.
ಮೈಸೂರಿನ ಮುಡಾದಿಂದ 14 ನಿವೇಶನಗಳನ್ನು ತನ್ನ ಪತ್ನಿ ಹೆಸರಿಗೆ ಪ್ರತಿಷ್ಟಿತ ಬಡಾವಣೆಯಲ್ಲಿ ಮುಖ್ಯಮಂತ್ರಿಇ ಸಿದ್ದರಾಮಯ್ಯ ಪಡೆದಿದ್ದಾರೆ. ಅಲ್ಲದೇ, ರಾಜ್ಯದ ಎಸ್.ಸಿ., ಎಸ್.ಟಿ ವಿಶೇಷ ಯೋಜನೆ ಹಾಗೂ ಬುಡಕಟ್ಟು ಯೋಜನೆಗಳಿಗೆ ಮೀಸಲಿಟ್ಟ ₹25,800 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಂಡಿದ್ದಾರೆ. ಈ ಮೂರೂ ಹಗರಣಗಳ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳಿಗೆ ಸದನದಲ್ಲಿ ಅವಕಾಶ ನೀಡದೇ ಒಂದು ದಿನ ಮುಂಚಿತವಾಗಿ ಅಧಿವೇಶನ ಬರ್ಕಾಸ್ತು ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ಕ್ರಮ ಎಂದರು.
ಮುಡಾ ಹಗರಣದಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಕಂಡು ಬಂದಿದ್ದರಿಂದ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ತನಿಖೆಯಾಗಲಿ, ಸತ್ಯ ಹೊರಗೆ ಬಂದು ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ. ಅಲ್ಲಿಯವರೆಗೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಆಗ್ರಹಿಸಿದರು.
ಶಾಸಕ ಐವನ್ ಡಿಸೋಜ ಬಾಂಗ್ಲಾದೇಶದ ಪ್ರಧಾನಿಗೆ ಆದ ಗತಿಯೇ ರಾಜ್ಯಪಾಲರಿಗೆ ಆಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಸಚಿವ ಜಮೀರ್ ಅಹಮ್ಮದ್ ಖಾನ್ ಕೂಡ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಾರೆ. ಇಬ್ಬರ ವಿರುದ್ಧವೂ ಬಿಜೆಪಿ ಎಸ್ಸಿ, ಎಸ್ಟಿ ಮೋರ್ಚಾದಿಂದ ರಾಜ್ಯಾದ್ಯಂತ ದೇಶದ್ರೋಹ ಪ್ರಕರಣ ದಾಖಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್, ಶಿವರಾಜ್, ಹರಿಕೃಷ್ಣ, ಕುಪೇಂದ್ರ, ಹರೀಶ್, ಸಂತೋಷ್, ಸಿ. ಮೂರ್ತಿ. ಕೆ.ವಿ. ಅಣ್ಣಪ್ಪ ಇದ್ದರು.