ಭಾನುವಾರ, ಸೆಪ್ಟೆಂಬರ್ 25, 2022
21 °C
ನಿಸರಾಣಿ ಸರ್ಕಾರಿ ಶಾಲೆ: ₹ 80 ಲಕ್ಷ ವೆಚ್ಚದಲ್ಲಿ ಬಿಇಎಲ್ ಸಂಸ್ಥೆಯಿಂದ ಕೊಡುಗೆ

ಶಿವಮೊಗ್ಗ: ಹೊಸ ಕಟ್ಟಡಕ್ಕೆ ಹಳೆಯ ವಿದ್ಯಾರ್ಥಿ ಸಾಥ್‌

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತಾನು ಓದಿ ಉನ್ನತ ಸ್ಥಾನಕ್ಕೆ ಏರಲು ಕಾರಣವಾದ ಸರ್ಕಾರಿ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂದುಕೊಂಡ ಹಳೆಯ ವಿದ್ಯಾರ್ಥಿಯೊಬ್ಬರು, ಶಾಲೆಯ ಅಭಿವೃದ್ಧಿಗೆ ಹೆಗಲು ಕೊಟ್ಟಿರುವುದು ಸೊರಬ ತಾಲ್ಲೂಕಿನ ನಿಸರಾಣಿ ಗ್ರಾಮದಲ್ಲಿ ಕಂಡುಬಂದಿದೆ.

45 ವರ್ಷಗಳ ಹಿಂದೆ ನಿಸರಾಣಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದ ಶ್ರೀನಿವಾಸ ಹೆಗಡೆ ಅವರೇ ಶಾಲೆಯ ನೆರವಿಗೆ ನಿಂತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ, ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಬೆಂಗಳೂರಿನ ಬಿಇಎಲ್‌ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೂ ಏರಿದ ಅವರು, ಬಾಲ್ಯದಲ್ಲಿ ಕಲಿತ ಶಾಲೆಗೆ ನೆರವಾಗಬೇಕು ಎಂಬ ಹಂಬಲಕ್ಕೆ ಚಾಲನೆ ದೊರೆತಿದೆ. ಕಂಪೆನಿ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯ ಚಟುವಟಿಕೆ (ಸಿಎಸ್‌ಆರ್) ಅಡಿ ಶಾಲೆಗೆ ನೆರವು ನೀಡಿದೆ. ಅದರ ಫಲವಾಗಿ,
₹ 80 ಲಕ್ಷ ವೆಚ್ಚದಲ್ಲಿ ನಿಸರಾಣಿ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ದೊರೆತಿದೆ. ಜೊತೆಗೆ ₹ 5 ಲಕ್ಷ ವೆಚ್ಚದ ಪೀಠೋಪಕರಣ ಹಾಗೂ ಬೋಧನಾ ಸಾಮಗ್ರಿಗಳ ಕೊಡುಗೆಯೂ ದೊರೆತಿದೆ.

ಶಾಲೆಯ ಹೊಸ ಕಟ್ಟಡ ಕಳೆದ ಜುಲೈ 22ರಂದು ಉದ್ಘಾಟನೆಯಾಗಿದೆ. ವಿಶೇಷವೆಂದರೆ ಶ್ರೀನಿವಾಸ ಹೆಗಡೆ ಈಗ ಬಿಇಎಲ್ ಸಂಸ್ಥೆಯಿಂದ ನಿವೃತ್ತರಾಗಿದ್ದಾರೆ. ಆದರೆ ಹಳೆಯ ವಿದ್ಯಾರ್ಥಿಯ ಪರಿಶ್ರಮದ ಕುರುಹಾಗಿ ನಿಸರಾಣಿಯ ಶಾಲೆ ಹೊಸತನದಿಂದ ಕಂಗೊಳಿಸುತ್ತಿದೆ.

75 ವರ್ಷಗಳ ಹಿಂದಿನ ಕಟ್ಟಡ: ಈ ಮೊದಲು ಶಾಲೆಗೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ್ದ ಕಟ್ಟಡವಿತ್ತು. ಅದನ್ನು 1946ರಲ್ಲಿ ಊರಿನವರೇ ಮಣ್ಣು, ಗಾರೆಯಲ್ಲಿ ಕಟ್ಟಿಸಿಕೊಟ್ಟಿದ್ದರು. 75 ವರ್ಷಗಳ ಸುದೀರ್ಘ ಅವಧಿಯ ಕಾರಣ ಕಟ್ಟಡ ಸಂಪೂರ್ಣ ಶಿಥಿಲಗೊಂಡಿತ್ತು. ಹೀಗಾಗಿ, ಮಕ್ಕಳಿಗೆ ಹೊಸ ಕಟ್ಟಡದ ಅಗತ್ಯವಿತ್ತು. ‌

‘ಮೊದಲಿಗೆ 2018ರಲ್ಲಿ ಶ್ರೀನಿವಾಸ ಹೆಗಡೆ ಶಾಲೆಗೆ ಬಿಇಎಲ್‌ನಿಂದ ₹ 5 ಲಕ್ಷ ಮೊತ್ತದ ಪೀಠೋಪಕರಣ ಕೊಡಿಸಿದ್ದರು. ಈ ವೇಳೆ ಶಾಲೆಗೆ ಕಟ್ಟಡದ ಅಗತ್ಯವಿರುವ ಬಗ್ಗೆ ಊರಿನ ಹಿರಿಯರು ಹೆಗಡೆ ಅವರ ಗಮನ ಸೆಳೆದಿದ್ದರು. ಅದರ ಫಲವಾಗಿ ಒಂದೇ ವರ್ಷದಲ್ಲಿ ಕಟ್ಟಡ ತಲೆ ಎತ್ತಿದೆ. ನೆಲ ಅಂತಸ್ತಿನಲ್ಲಿ ನಾಲ್ಕು ಕೊಠಡಿಗಳು ಇದ್ದು, ಮೊದಲ ಅಂತಸ್ತಿನಲ್ಲಿ ದೊಡ್ಡ ಸಭಾಂಗಣ ಕಟ್ಟಿಸಿಕೊಟ್ಟಿದ್ದಾರೆ. ಜೊತೆಗ ಹೈಟೆಕ್ ಶೌಚಾಲಯವನ್ನೂ ಕಟ್ಟಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ದೀಪಕ್ ಧೋಂಗಡೇಕರ್ ಹೇಳುತ್ತಾರೆ.

‘ಬಿಇಎಲ್‌ನಿಂದ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ನೆರವು ನೀಡಲಾಗಿದೆ. ಅದೇರೀತಿ, ಮಲೆನಾಡು ಪ್ರದೇಶದಲ್ಲಿ ಶಾಲೆಯೊಂದಕ್ಕೆ ನೆರವಾಗುವ ಉದ್ದೇಶವಿತ್ತು. ನಿಸರಾಣಿ ಶಾಲೆಯ ಪರವಾಗಿ ಸೊರಬ ಬಿಇಒ ಅವರಿಂದ ಮನವಿ ಕೂಡ ಬಂದಿತ್ತು. ಸಂಸ್ಥೆಯ ತಾಂತ್ರಿಕ ಪರಿಶೀಲನಾ ಸಮಿತಿ ಅದನ್ನು ಪರಿಶೀಲಿಸಿ ಶಾಲೆಯನ್ನು ಆಯ್ಕೆ ಮಾಡಿ ಕಟ್ಟಡ ಕಟ್ಟಿಸಿಕೊಟ್ಟಿದೆ’ ಎಂದು ಶ್ರೀನಿವಾಸ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು