ಸೋಮವಾರ, ಜನವರಿ 17, 2022
20 °C
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಹಾಫೀಜ್ ಕರ್ನಾಟಕಿ

ಶಿವಮೊಗ್ಗ | ಉರ್ದು ಸಾಹಿತ್ಯಕ್ಕೆ ಷಾದ್‌ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಕನ್ನಡ ಕೃತಿಗಳನ್ನು ಉರ್ದು ಸಾಹಿತ್ಯಕ್ಕೆ ತರ್ಜುಮೆ ಮಾಡಿದ ಕವಿ ಷಾದ್ ಬಾಗಲಕೋಟೆ ಕಾರ್ಯ ಶ್ಲಾಘನೀಯವಾಗಿದೆ ಎಂದು ರಾಜ್ಯ ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಡಾ.ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಹೇಳಿದರು.

ಪಟ್ಟಣದ ಜುಬೇದಾ ವಿದ್ಯಾಸಂಸ್ಥೆಯಲ್ಲಿ ಈಚೆಗೆ ದಿವಂಗತ ಷಾದ್ ಬಾಗಲ್‌ಕೋಟೆ ಅವರು ಬರೆದ ‘ಮಕ್ಕಿ ಮದಿನಿ ಪೀಕಿ ಬತಿಯಾ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದದರು.

ಕನ್ನಡ, ಹಿಂದಿ, ಉರ್ದು, ಅರೇಬಿಕ್, ಪರ್ಷಿಯಾ, ಇಂಗ್ಲಿಷ್ ಸೇರಿ ವಿವಿಧ ಭಾಷೆಗಳಲ್ಲಿ ಸಾಕಷ್ಟು ಅನುಭವ ಹೊಂದಿದ್ದ ಷಾದ್ ಬಾಗಲಕೋಟೆಯವರು ಬಹು ಭಾಷಾ ಕವಿಯಾಗಿದ್ದರು. ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಕನಕದಾಸ, ಪುರಂದರದಾಸರ ಹಾಗೂ ಕುವೆಂಪು ಅವರ ಕುರಿತಾದ ಕನ್ನಡ ಕೃತಿಗಳನ್ನು ಉರ್ದುಗೆ ತರ್ಜುಮೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಎಲ್ಲಾ ಭಾಷೆಯ ಬಗ್ಗೆ ಅಧ್ಯಯನ ಮಾಡಿದ್ದ ಅವರು ಬಹುಭಾಷಾ ಕವಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಪ್ರೊ.ಸೈಯದ್ ಷಾಮ್ ದಾರ್ ಅಖಿಲ್, ‘ಷಾದ್ ಬಾಗಲ್‌ಕೋಟೆ ಅವರ ಮಾತೃ ಭಾಷೆ ಉರ್ದುವಾಗಿದ್ದರೂ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಹಲವು ಭಾಷೆಯನ್ನು ಅತ್ಯಂತ ಸುಲಲಿತವಾಗಿ ಮಾತಾನಾಡುವ ಹಾಗೂ ಬರೆಯುವ ಜ್ಞಾನ ಹೊಂದಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಹಲವು ಕನ್ನಡ ಭಾಷೆಯ ಪುಸ್ತಕಗಳನ್ನು ಉರ್ದುಗೆ ತರ್ಜುಮೆ ಮಾಡಿದ್ದರು. ಅವರು ಇನ್ನಷ್ಟು ಕಾಲ ಬದುಕಿದ್ದರೆ ಸಾಹಿತ್ಯಕ್ಕೆ ಹೆಚ್ಚು ಕೊಡುಗೆ ನೀಡುತ್ತಿದ್ದರು’ ಎಂದು ಹೇಳಿದರು.

ಷಾದ್ ಬಾಗಲಕೋಟೆ ಅವರ ಪತ್ನಿ ದಿಲಾಷಾದ್ ಬಾನು ಅವರನ್ನು ಸಾಹಿತಿ ಡಾ.ಹಾಫೀಜ್ ಕರ್ನಾಟಕಿ ಅವರು ಸನ್ಮಾನಿಸಿದರು.

ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಮಕ್ಬೂಲ್ ಸಾಬ್, ಫಯಾಜ್ ಅಹಮ್ಮದ್, ಅಬಿದ್ ವುಲ್ಲಾ, ಅತ್ತರ್ ಸಾಬ್, ಕಿಜರ್ ಬೇಗ್, ಡಾ. ಅಫಾಕಲಂ, ರಹಮತ್‌ವುಲ್ಲಾ, ಸಮಿವುಲ್ಲಾ, ಕೆ.ಎಸ್. ಹುಚ್ಚರಾಯಪ್ಪ, ನವೀದ್, ಅನಿಸ್ ಉರ್ ರೆಹಮಾನ್, ಹಬೀಬ್‌ ವುಲ್ಲಾ, ಅರ್ಕಮ್ ಮದಾರಿ, ಡಾ. ಶಬಿನ್ ತಲತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.