ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ | ನೀರಿನ ಪ್ರಮಾಣ ಕುಸಿತ: ಲಾಂಚ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಒತ್ತಾಯ

Published 17 ಜನವರಿ 2024, 15:33 IST
Last Updated 17 ಜನವರಿ 2024, 15:33 IST
ಅಕ್ಷರ ಗಾತ್ರ

ಸಾಗರ: ಈ ವರ್ಷ ಮಳೆಗಾಲದಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಗ್ಗುತ್ತಿದ್ದು ಮುಂಬರುವ ದಿನಗಳಲ್ಲಿ ಇಲ್ಲಿ ಲಾಂಚ್‌ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ದಟ್ಟವಾಗಿದ್ದು ಈಗಲೇ ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕರೂರು ಭಾರಂಗಿ ಹೋಬಳಿಯ ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಪ್ರಸನ್ನ ಕೆರೆಕೈ ಒತ್ತಾಯಿಸಿದ್ದಾರೆ.

ಲಿಂಗನಮಕ್ಕಿ ಜಲಾಶಯದಲ್ಲಿ ಈಗ ನೀರಿನ ಮಟ್ಟ 1,774 ಅಡಿ ಇದೆ. ವಿದ್ಯುತ್ ಉತ್ಪಾದನೆಗೆ ಈ ನೀರನ್ನು ಬಳಸಿ ಇನ್ನು 13 ಅಡಿ ನೀರು ಕಡಿಮೆಯಾದರೆ ಹಿನ್ನೀರಿನಲ್ಲಿ ಈಗಿರುವ ಲಾಂಚ್ ಸಂಚಾರ ಸಾಧ್ಯವಿಲ್ಲದಂತಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ತೀರಾ ಕಡಿಮೆ ಇರುವುದರಿಂದ ವಿದ್ಯುತ್ ಉತ್ಪಾದನೆಗೆ ಆ ನೀರನ್ನು ಬಳಸುತ್ತಿರುವುದರಿಂದ ನದಿಪಾತ್ರದಲ್ಲಿ ಹಿನ್ನೀರು ಕೂಡ ಕಡಿಮೆಯಾಗುತ್ತದೆ. ಇದರಿಂದ ಲಾಂಚ್ ಸಂಚಾರ ನಿಂತರೆ ಕರೂರು-ಭಾರಂಗಿ ಹೋಬಳಿಯ ಜನ ತಾಲ್ಲೂಕು ಕೇಂದ್ರಕ್ಕೆ ಬರಲು ತೀವ್ರ ಸಂಕಷ್ಟ ಎದುರಾಗುತ್ತದೆ ಎಂದು ಅವರು ಹೇಳಿದರು.

ಈಗಾಗಲೆ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಲಾಂಚ್ ನಿಲುಗಡೆಗೆ ತೊಂದರೆ ಎದುರಾಗಿದೆ. ಲಿಂಗನಮಕ್ಕಿ ನೀರನ್ನು ಬಳಸಿಕೊಂಡು ಬೇರೆ ಬೇರೆ ವಿದ್ಯುದ್ದಾಗಾರಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಕಡಿವಾಣ ಹಾಕಿದರೆ ಹಿನ್ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಮಟ್ಟ ಇರುತ್ತದೆ. ಈ ಸಂಬಂಧ ಕ್ಷೇತ್ರದ ಶಾಸಕರು ಇಂಧನ ಸಚಿವರ ಜೊತೆ ಚರ್ಚೆ ನಡೆಸಿ ಹಿನ್ನೀರಿನ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

ಮುಂದಿನ ಮಳೆಗಾಲ ಆರಂಭವಾಗುವವರೆಗೂ ಹಿನ್ನೀರಿನಲ್ಲಿ ಲಾಂಚ್ ಸಂಚಾರ ನಿಲ್ಲದಂತೆ ನೋಡಿಕೊಳ್ಳವುದು ಆಡಳಿತದ ಜವಾಬ್ಧಾರಿಯಾಗಿದೆ. ಮುಂದೆ ಉಂಟಾಗಬಹುದಾದ ಅಡಚಣೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈಗಲೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಲಾಂಚ್ ಸಂಚಾರ ನಿಂತರೆ ನಮ್ಮ ವೇದಿಕೆ ವತಿಯಿಂದ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಜಲವಿದ್ಯುತ್ ಯೋಜನೆ ಅನುಷ್ಠಾನಕ್ಕಾಗಿ ತಮ್ಮ ಬದುಕನ್ನೆ ತ್ಯಾಗ ಮಾಡುವ ಮೂಲಕ ಕರೂರು-ಭಾರಂಗಿ ಹೋಬಳಿಯ ಜನರು ನಾಡಿಗೆ ಬೆಳಕು ನೀಡಿದ್ದಾರೆ. ಅವರ ಬದುಕಿನಲ್ಲಿ ಕತ್ತಲು ಮೂಡದಂತೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರಮುಖರಾದ ಮಂಜಯ್ಯ ಜೈನ್, ಶ್ರೀಧರ ಚುಟ್ಟಿಕೆರೆ, ಜಿ.ಪಿ.ಶ್ರೀನಿವಾಸ್, ಅನಿಲ್ ಕುಮಾರ್, ಸಚಿನ್, ರಾಘವೇಂದ್ರ, ಗಣಪತಿ ಹಿನ್ಸೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT