ಶಿವಮೊಗ್ಗ: ಶರಾವತಿ ನೀರನ್ನು ಬೆಂಗಳೂರು ಮಹಾನಗರಕ್ಕೆ ಕೊಂಡೊಯ್ಯುವ ಯೋಜನೆಯನ್ನು ಕೈ ಬಿಡುವಂತೆ ಅರಣ್ಯ, ಜೀವಿಶಾಸ್ತ್ರ ವಿಜ್ಞಾನ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಶಿವಮೊಗ್ಗ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಗುರುವಾರ ನಡೆದ ಸುತ್ತೂರು ಮಠದ 23ನೆಯ ಪೀಠಾಧಿಪತಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೆಯ ಜಯಂತಿಯ ಸಂದರ್ಭದಲ್ಲಿ ಅವರು ವೇದಿಕೆಯಲ್ಲಿದ್ದ ಸಚಿವ ಈಶ್ವರ ಖಂಡ್ರೆ ಅವರಿಗೆ ಕೋರಿದರು.
ಮಲೆನಾಡಿನ ಪಶ್ಚಿಮಘಟ್ಟಗಳ ಜೀವವೈವಿಧ್ಯಕ್ಕೆ ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವುದರಿಂದ ತೊಂದರೆಯಾಗಲಿದೆ. ಅರಣ್ಯ ನಾಶವಾಗಲಿದೆ. ಹೀಗಾಗಿ ಯೋಜನೆಯನ್ನು ಕೈಬಿಡಿ ಎಂದು ಆಶೀರ್ವಚನದಲ್ಲಿ ಹೇಳಿದರು.
ವೇದಿಕೆಯಲ್ಲಿ ನಿವೃತ್ತ ಪೋಲಿಸ್ ಮಹಾನಿರ್ದೇಶಕ ಎಲ್. ರೇವಣಸಿದ್ಧಯ್ಯ, ಕೆಎಸ್ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ಸೋಮಶೇಖರ್ ಇದ್ದರು.