ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಇತಿಹಾಸದಲ್ಲಿ ಮಠಗಳ ಪಾತ್ರ ಹಿರಿದು: ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ

ಶೀಲಸಂಪಾದನಾ ಮಠದ ತಪೋನುಷ್ಠಾನ ಸಮಾರೋಪ
Last Updated 6 ಸೆಪ್ಟೆಂಬರ್ 2021, 9:11 IST
ಅಕ್ಷರ ಗಾತ್ರ

ಭದ್ರಾವತಿ: ‘ರಾಜ್ಯದ ಇತಿಹಾಸದಲ್ಲಿ ಮಠಗಳು ತಮ್ಮದೇ ವಿಶಿಷ್ಟ ಸೇವೆಯನ್ನು ನೀಡುವ ಮೂಲಕ ಹಿರಿತನದ ಪಾತ್ರ ವಹಿಸಿವೆ’ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಗೋಣುಬೀಡು ಶೀಲಸಂಪಾದನಾಮಠ ಸಿದ್ಧಲಿಂಗ ಸ್ವಾಮೀಜಿಯ 23 ತಿಂಗಳ ತಪೋನುಷ್ಠಾನ ಸಮಾರೋಪ ಹಾಗೂ ದಾಸೋಹ ಮಂದಿರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತ್ರಿವಿಧ ದಾಸೋಹ ಸೇವೆ ಮೂಲಕ ಮಠಗಳು ಮನುಷ್ಯನ ಅಗತ್ಯತೆ ಪೂರೈಸುವ ಕೆಲಸವನ್ನು ಮಾಡುತ್ತಿವೆ. ಮನುಕುಲದ ಒಳಿತನ್ನು ಬಯಸಿ ಕೆಲಸ ಮಾಡುತ್ತಿರುವುದು ಬಹುತೇಕ ಜನರ ಬವಣೆಯನ್ನು ನೀಗಿಸಿದೆ ಎಂದರು.

‘ಎಲ್ಲ ಶಕ್ತಿಗಿಂತ ಆತ್ಮಶಕ್ತಿ ದೊಡ್ಡದು ಎಂದು ಅರಿತಿರುವ ಸಿದ್ದಲಿಂಗ ಸ್ವಾಮೀಜಿ ಅಕ್ಕನಾಗಮ್ಮ ನೆಲೆಸಿರುವ ಕ್ಷೇತ್ರದಲ್ಲಿ 23 ತಿಂಗಳ ಕಾಲ ಬಾಹ್ಯ ಪ್ರಪಂಚ ಮರೆತು ಸಂಪೂರ್ಣ ಅಂತರ್ಮುಖಿಯಾಗಿ ತಪಸ್ಸು ಮಾಡುವ ಮೂಲಕ ಸಮಾಜಕ್ಕೆ ಬೆಳಕು ನೀಡುವ ಕೆಲಸ ಮಾಡುತ್ತಿರುವುದು ಈ ಭಾಗದ ಜನರ ಆಧ್ಯಾತ್ಮಿಕ ಬದುಕಿಗೆ ನೆರವಾಗಿದೆ’ ಎಂದರು.

ಶಾಸಕ ಬಿ.ಕೆ.ಸಂಗಮೇಶ್ವರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಂಸದ ಬಿ.ವೈ.ರಾಘವೇಂದ್ರ ದಾಸೋಹಮಂದಿರ ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ್ರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೈಗಾರಿಕೋದ್ಯಮಿ ಬಿ.ಕೆ.ನಂಜುಂಡಶೆಟ್ಟರು ಆಶಯ ನುಡಿ ಹೇಳಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀಕಾಂತ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ವಿವಿಧ ಎಡೆಯೂರು ಕ್ಷೇತ್ರದ ರೇಣುಕು ಶಿವಾಚಾರ್ಯ ಸ್ವಾಮೀಜಿ, ತಿಪಟೂರು ಗುರುಕುಲಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಬಿಳಿಕಿ ಹಿರೇಮಠದ ರಾಚೋಟೇಶ್ವರ ಸ್ವಾಮೀಜಿ, ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಬಸವಮಂದಿರ ಬಸವ ಮರುಳಸಿದ್ದ ಚನ್ನಗಿರಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮಹಾಂತ ಸ್ವಾಮೀಜಿ, ತಾವರಕೆರೆ ಡಾ.ಅಭಿನವ ಸಿದ್ದಲಿಂಗ ಸ್ವಾಮೀಜಿ, ಶಿಕಾರಿಪುರ ಚನ್ನಬಸವ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಇದಕ್ಕೂ ಮುನ್ನ 23 ತಿಂಗಳು ತಪೋನುಷ್ಠಾನ ಮೌನವ್ರತದಲ್ಲಿದ್ದ ಗೋಣಿಬೀಡು ಸಿದ್ಧಲಿಂಗ ಸ್ವಾಮೀಜಿ ಯನ್ನು ನಿಷ್ಟಾ ಮಂದಿರದಿಂದ ವೇದಿಕೆ ಯಲ್ಲಿದ್ದ ಶಿವಾಚಾರ್ಯರು ವೇದಿಕೆಗೆ ಕರೆತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT