ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಉಪಚುನಾವಣೆ: ವಾಮಮಾರ್ಗದಲ್ಲಿ ಬಿಜೆಪಿ ಗೆಲುವು–ಹುಲ್ಮಾರ್ ಮಹೇಶ್ ಆರೋಪ

ಸುದ್ದಿಗೋಷ್ಠಿಯಲ್ಲಿ ಪುರಸಭೆ ಕಾಂಗ್ರೆಸ್ ಸದಸ್ಯ ಹುಲ್ಮಾರ್ ಮಹೇಶ್ ಆರೋಪ
Last Updated 9 ಏಪ್ರಿಲ್ 2021, 13:16 IST
ಅಕ್ಷರ ಗಾತ್ರ

ಶಿಕಾರಿಪುರ: ‘ಮಾರ್ಚ್‌ 29ರಂದು ನಡೆದ ಪುರಸಭೆ ಉಪಚುನಾವಣೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ವಾಮಮಾರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದಾರೆ’ ಎಂದು ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ನ ಮೂವರು ಸದಸ್ಯರಿಗೆ ಆಮಿಷ ಒಡ್ಡಿ ರಾಜೀನಾಮೆ ಕೊಡಿಸಿದರು. ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಟ್ಟಣದಲ್ಲಿ ಪುರಸಭೆ ಉಪಚುನಾವಣೆ ನಡೆಯಲು ಕಾರಣರಾಗಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ 20ನೇ ವಾರ್ಡ್ ಆಶ್ರಯ ಬಡಾವಣೆ ಹಾಗೂ 9ನೇ ವಾರ್ಡ್ ಜಯನಗರ ಮತದಾರರ ಪಟ್ಟಿಯಲ್ಲಿ, ಆ ಬಡಾವಣೆಯಲ್ಲಿ ವಾಸ ಮಾಡದ, ಬಿಜೆಪಿಗೆ ಮತ ಹಾಕುವಂತಹ ಬೇರೆ ವಾರ್ಡ್‌ಗಳ ಸುಮಾರು 150ಕ್ಕೂ ಹೆಚ್ಚು ಮತದಾರರ ಹೆಸರನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮೂಲಕ ಸೇರ್ಪಡೆ ಮಾಡಿಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ದೇವರಾಜು ಅರಸು ನಗರದಲ್ಲಿ ನೆಲೆಸಿರುವ ಪುರಸಭೆ ಸದಸ್ಯ ಜೀನಳ್ಳಿ ಪ್ರಶಾಂತ್ ತಾಯಿ ಹೆಸರು ಸೇರಿದಂತೆ ಬೇರೆ ವಾರ್ಡ್‌ಗಳ ಮತದಾರರನ್ನು ಉಪಚುನಾವಣೆ ನಡೆಯುವ ಜಯನಗರ ಬಡಾವಣೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಆಶ್ರಯ ಬಡಾವಣೆಗೆ ವಿನಾಯಕ ನಗರದ ಮತದಾರರನ್ನು ಸೇರ್ಪಡೆ ಮಾಡಿದ್ದಾರೆ. ಕಾಂಗ್ರೆಸ್ ಪರ ಓಟು ಹಾಕುವ ಮತದಾರರ ಹೆಸರನ್ನು ಆ ವಾರ್ಡ್‌ನ ಮತದಾರರ ಪಟ್ಟಿಯಿಂದ ತೆಗೆಸಿಸಿದ್ದಾರೆ. ಮತದಾರರ ಪಟ್ಟಿ ದೋಷದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ’ ಎಂದು ದೂರಿದರು.

‘ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುವ ಸಂಸದ ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಒಬ್ಬ ಮತದಾರರಿಗೆ ₹ 3 ಸಾವಿರ ಹಂಚುವ ಅಗತ್ಯತೆ ಏನಿತ್ತು’ ಎಂದು ಪ್ರಶ್ನಿಸಿದ ಅವರು, ‘ಚುನಾವಣೆಗೂ ಮುನ್ನ 20ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ವಿಜಯಲಕ್ಷ್ಮಿ ಸುರೇಶ್ ಅವರಿಗೆ ನಾಮಪತ್ರ ಹಿಂಪಡೆಯಬೇಕು ಎಂದು ಭದ್ರಾವತಿ ಹಾಗೂ ಶಿವಮೊಗ್ಗ ಕ್ರೈಸ್ತ ಸಮುದಾಯದ ಮುಖಂಡರಿಂದ ಒತ್ತಡ ಹಾಕಿಸುವ ಪ್ರಯತ್ನ ಮಾಡಿದ್ದರು’ ಎಂದು ಆರೋಪಿಸಿದರು.

ಮಾಜಿ ಸದಸ್ಯ ಉಮೇಶ್ ಮಾರವಳ್ಳಿ, ‘ಜಯನಗರ ಬಡಾವಣೆ ಬಿಜೆಪಿ ಅಭ್ಯರ್ಥಿ ರಮೇಶ್ ಗುಂಡಾ ಅಲ್ಲಿ ನೆಲೆಸದ ಕಾರಣ ಈ ಹಿಂದೆ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಸಿ ಹಾಕಿದ್ದರು. ಉಪಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಎರಡೇ ದಿನಗಳಲ್ಲಿ ಮತದಾರರ ಪಟ್ಟಿಗೆ ಪುನಃ ಹೆಸರು ಸೇರ್ಪಡೆ ಮಾಡಿಸಿದ್ದಾರೆ. ಚುನಾವಣಾ ನಿಯೋಗದ ನಿಯಮಗಳನ್ನು ಗಾಳಿಗೆ ತೂರಿ ಅಭ್ಯರ್ಥಿ ರಮೇಶ್ ಹೆಸರು ಸೇರ್ಪಡೆ ಮಾಡಿದ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇವೆ’ ಎಂದರು.

ಪುರಸಭೆ ಸದಸ್ಯ ರೋಶನ್, ಮಾಜಿ ಸದಸ್ಯ ಬಡಗಿ ಫಾಲಾಕ್ಷ, ಪುರಸಭೆ ಉಪಚುನಾವಣೆ ಪರಾಜಿತ ಅಭ್ಯರ್ಥಿ ವಿಜಯಲಕ್ಷ್ಮಿ ಸುರೇಶ್, ಮುಖಂಡರಾದ ಗುಡ್ಡಳ್ಳಿ ಸಂತೋಷ್, ಸುರೇಶ್ ಧಾರಾವಾಡ, ರೇಣುಕಾಸ್ವಾಮಿ, ಯು.ಬಿ.ವಿಜಯಕುಮಾರ್, ನಗರದ ಮಾಲತೇಶ್, ಎಸ್.ಎನ್. ನರಸಿಂಹಸ್ವಾಮಿ, ಜೋಸೆಫ್, ಬೋಗಿ ಚೇತನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT