ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷ ತಾಯಿಗೆ ವಿಧಾನಸಭಾ ಟಿಕೆಟ್ ಕೊಡಿ: ಬಿಜೆಪಿಗೆ ಮುಜುಗರ ತಂದ ‘ಎಂಎಲ್‌ಎ ಅಭಿಯಾನ’

ಹರ್ಷ ತಾಯಿಗೆ ವಿಧಾನಸಭಾ ಟಿಕೆಟ್‌ ನೀಡಲು ಒತ್ತಾಯ
Last Updated 24 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ ಬೆನ್ನಲ್ಲೇ ‘ದೇಶಭಕ್ತರ ಕುಟುಂಬದ ಸದಸ್ಯರಿಗೆ ಎಂಎಲ್‌ಎ ಟಿಕೆಟ್‌ ನೀಡಬೇಕು’ ಎಂಬ ಹೊಸ ಅಭಿಯಾನವನ್ನು ದೇಶಭಕ್ತ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದು, ಬಿಜೆಪಿಗೆ ಮುಜುಗರ ತಂದಿದೆ.

‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ ಅವರ ಕುಟುಂಬದವರಿಗಷ್ಟೇ ಮೀಸಲಾಗಬಾರದು. ನಮ್ಮ ಬೇಡಿಕೆ ಈಡೇರಿಸಿದರೆ ಬಿಜೆಪಿಗೊಂದು ಸಲಾಂ’ ಎಂದು ಪೋಸ್ಟರ್‌ಗಳನ್ನು ಶೇರ್‌ ಮಾಡಲಾಗುತ್ತಿದೆ.

ಇದುವರೆಗೂ ಹಿಂದೂಗಳ ಮತಗಳನ್ನು ಪಡೆದು ಅಧಿಕಾರ ಅನುಭವಿಸಿದವರಿಗೇ ಮತ್ತೆ ಅಧಿಕಾರ ನೀಡುವುದು ಬೇಡ. ದೇಶಭಕ್ತರ ಕುಟುಂಬದ ಸದಸ್ಯರಿಗೆ ಅವಕಾಶ ದೊರೆಯಬೇಕು. ಕೊಲೆಯಾಗುತ್ತಿರುವುದು ಶಾಸಕ, ಸಂಸದ, ಸಚಿವರ ಮಕ್ಕಳಲ್ಲ. ಬಡವರ ಮಕ್ಕಳು. ಹಿಂದುತ್ವಕ್ಕಾಗಿ ಹೋರಾಡುವ ಬಡವರ ಕುಟುಂಬಗಳಿಗೆ ಇನ್ನಾದರೂ ಗೌರವ, ಸ್ಥಾನಮಾನ ಸಿಗಬೇಕು ಎಂಬಂತಹ ಪೋಸ್ಟರ್‌ಗಳು ಹರಿದಾಡುತ್ತಿರುವುದು ಬಿಜೆಪಿ ನಾಯಕರಿಗೆ ಇರಿಸುಮುರಿಸು ಮೂಡಿಸಿದೆ.

ಗಾಯಗೊಂಡವರಿಗೆ ಸಾಂತ್ವನ: ಮೆರವಣಿಗೆ ವೇಳೆ ಗಾಯಗೊಂಡ ಹಿಂದೂ ಸಂಘಟನೆಗಳ ಮೂವರು ಕಾರ್ಯಕರ್ತರನ್ನು ಮೃತ ಹರ್ಷ ಅವರ ಕುಟುಂಬದ ಸದಸ್ಯರು ಗುರುವಾರ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು. ‘ನೀವು ನಮ್ಮ ಮಗ ಹರ್ಷ ಇದ್ದಂತೆ. ನಿಮ್ಮ ಯೋಗಕ್ಷೇಮ ನಮ್ಮ ಜವಾಬ್ದಾರಿ’ ಎಂದು ಹಣಕಾಸಿನ ನೆರವುನೀಡಿದರು.

ಎಸ್‌ಪಿ ವರ್ಗಾವಣೆ ಊಹಾಪೋಹ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ವರ್ಗಾವಣೆ ಸುದ್ದಿ ಊಹಾಪೋಹವಷ್ಟೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದರು.

ಮುಂದುವರಿದ ನೆರವು: ಮೃತ ಹರ್ಷನ ಕುಟುಂಬಕ್ಕೆ ನೆರವು ನೀಡುವ ಕಾರ್ಯ ಮುಂದುವರಿದಿದೆ. ಸಚಿವರಾದ ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಅರ್ಚಕ ವೃಂದ ಸೇರಿ ಹಲವರು ಗುರುವಾರ ಹಣಕಾಸಿನ ನೆರವು ನೀಡಿದರು.

ಹರ್ಷ ಹತ್ಯೆ ಹಿಂದೆ ಯುವತಿಯರಿಲ್ಲ: ತನಿಖೆಯಿಂದ ದೃಢ

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಘಟನೆಗೂ, ಫೆ.20ರ ರಾತ್ರಿ ಅವರ ಹತ್ಯೆಗೂ ಮೊದಲು ಕರೆ ಮಾಡಿದ್ದ ಯುವತಿಯರಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ತನಿಖೆ ವೇಳೆ ದೃಢಪಟ್ಟಿದೆ.

‘ಕೊಲೆಗೂ ಮೊದಲು ಯುವತಿಯು ಕರೆ ಮಾಡಿರುವುದು ಕೇವಲ ಕಾಕತಾಳೀಯ. ಅವರು ಅನ್ಯಕೋಮಿಗೆ ಸೇರಿದವರಲ್ಲ. ಹಂತಕರಿಗೂ ಅವರಿಗೂ ಸಂಬಂಧ ಇಲ್ಲ. ಈ ಕುರಿತು ಹೆಚ್ಚಿನ ವಿವರ ಕಲೆ ಹಾಕುತ್ತಿದ್ದೇವೆ’ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹರ್ಷ ಅವರ ಮೊಬೈಲ್‌ ಸಿಕ್ಕಿದೆ. ತನಿಖಾ ತಂಡ ಪರಿಶೀಲಿಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಚಿತಪಡಿಸಿದರು.

ಶಾಲಾ, ಕಾಲೇಜು ನಾಳೆ ಆರಂಭ:

ನಗರದಲ್ಲಿ ಬಂದ್‌ ಮಾಡಲಾಗಿದ್ದ ಶಾಲಾ, ಕಾಲೇಜುಗಳನ್ನು ಫೆ.26ರಿಂದ ಪುನರಾರಂಭಿಸುವಂತೆ ಜಿಲ್ಲಾಧಿಕಾರಿ ಸೆಲ್ವಮಣಿ ಸೂಚಿಸಿದ್ದಾರೆ.

ಫೆ.26ರ ಬೆಳಿಗ್ಗೆ 6ಕ್ಕೆ ಕರ್ಫ್ಯೂ ಅಂತ್ಯವಾಗಲಿದೆ. ನಗರ ಶಾಂತವಾಗಿದೆ. ಯಾವುದೇ ಅಹಿತಕರ ಘಟನೆಗಳು ಮರುಕಳಿಸಿಲ್ಲ. ಅಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲಾ, ಕಾಲೇಜುಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.

ಮತ್ತಿಬ್ಬರ ಬಂಧನ

ಹರ್ಷ ಹತ್ಯೆ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಭದ್ರಾವತಿ ಹೊಸಮನೆಯ ಅಬ್ದುಲ್‌ ರೋಶನ್‌ (24), ವಾದಿ ಎ ಹುದಾ ನಗರದ ಜಾಫರ್ ಸಾದಿಕ್ ಅಲಿಯಾಸ್‌ ಭದ್ರಿ (55) ಬಂಧಿತ ಆರೋಪಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT