ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೊಳವೆ ಬಾವಿ ಕೊರೆಯಿಸಲು ದರ ದುಪ್ಪಟ್ಟು

Published 23 ಮಾರ್ಚ್ 2024, 6:22 IST
Last Updated 23 ಮಾರ್ಚ್ 2024, 6:22 IST
ಅಕ್ಷರ ಗಾತ್ರ

ಶಿವಮೊಗ್ಗ: ಮಳೆಯ ತೀವ್ರ ಕೊರತೆಯಿಂದಾಗಿ ಬರ ಆವರಿಸಿದ್ದು, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಅಡಿಕೆ ತೋಟಗಳಲ್ಲಿರುವ ಕೊಳವೆಬಾವಿಗಳು (ಬೋರ್‌ವೆಲ್) ಬತ್ತುತ್ತಿವೆ. ಹೊಸ ಬೋರ್‌ವೆಲ್‌ ಕೊರೆಯಿಸಲು ಬೆಳೆಗಾರರು ಪೈಪೋಟಿಗೆ ಬಿದ್ದಿದ್ದಾರೆ. ಆದರೆ, ಕೊಳವೆಬಾವಿ ಕೊರೆಯಲು ಸರ್ಕಾರ ಸೂಕ್ತ ದರ ನಿಗದಿಪಡಿಸದ್ದರಿಂದ  ಬೆಳೆಗಾರರು ಹೈರಾಣಾಗಿದ್ದಾರೆ.

ಜಿಲ್ಲೆಯ ಸಾಗರ, ಭದ್ರಾವತಿ, ಸೊರಬ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೊಳವೆಬಾವಿಗಳು ಬತ್ತುತ್ತಿವೆ. ತೋಟಗಳಲ್ಲಿನ ಗಿಡ–ಮರ ಉಳಿಸಿಕೊಳ್ಳುವುದು ಸವಾಲಾಗಿದೆ. ಎಷ್ಟೇ ಬೆಲೆ ತೆತ್ತಾದರೂ, ಎಲ್ಲಿಂದಲಾರೂ ನೀರು ತಂದು ತೋಟ ಉಳಿಸಿಕೊಳ್ಳಬೇಕು ಎಂಬ ಉಮೇದಿಯೊಂದಿಗೆ ಹೊಸ ಕೊಳವೆಬಾವಿ ಕೊರೆಸಲು ಪೈಪೋಟಿಗೆ ಇಳಿದಿದ್ದಾರೆ.

ದುಬಾರಿ ದರ ನಿಗದಿ:

ಈ ಮೊದಲು ಕೊಳವೆಬಾವಿ ಕೊರೆಯಲು ಪ್ರತಿ ಅಡಿಗೆ ₹ 84ರಿಂದ 90 ದರ ಇತ್ತು. ಆದರೆ ಈಗ ದಿಢೀರನೆ ದರ ಹೆಚ್ಚಳಗೊಂಡಿದೆ. ಪ್ರತಿ ಅಡಿಗೆ ₹ 105 ರಿಂದ ₹ 130ರವರೆಗೆ ಹಣ ಪಡೆಯಲಾಗುತ್ತಿದೆ. ಜೊತೆಗೆ 300 ಅಡಿಗಿಂತ ಹೆಚ್ಚು ಆದರೆ ಅದಕ್ಕೆ ಬೇರೆ, 600 ಅಡಿ ದಾಟಿದರೆ ಮತ್ತೊಂದು ದರ ಹೀಗೆ ರೈತರ ಜೇಬಿಗೆ ಕತ್ತರಿ ಬೀಳುತ್ತಲೇ ಹೋಗುತ್ತಿದೆ.

ಕೇಸಿಂಗ್ ಪೈಪ್ ಖರೀದಿ ಕಡ್ಡಾಯ:

ಕೊಳವೆಬಾವಿ ಕೊರೆದರೆ ತಮ್ಮ ಬಳಿಯೇ ಕೇಸಿಂಗ್ ಪೈಪ್ ಖರೀದಿಸಬೇಕು ಎಂಬ ಷರತ್ತನ್ನು ಬಹಳಷ್ಟು ಬೋರ್‌ವೆಲ್ ಏಜೆನ್ಸಿಯವರು ವಿಧಿಸುತ್ತಿದ್ದಾರೆ. ಅದಕ್ಕೆ ಒಪ್ಪಿದರೆ ಮಾತ್ರ ಕೊರೆಯಲು ಒಪ್ಪುತ್ತಾರೆ. ಇಲ್ಲದಿದ್ದರೆ ಬರುವುದಿಲ್ಲ ಎಂಬುದು ರೈತರ ಅಳಲು. 20 ಅಡಿಯ ಕಬ್ಬಿಣದ ಕೇಸಿಂಗ್ ದರ ಈ ಮೊದಲು ₹ 2800ರಿಂದ ₹ 3000 ಇತ್ತು. ಅದು ಈಗ ₹ 7000ಕ್ಕೆ ಏರಿಕೆಯಾಗಿದೆ. ದುಪ್ಪಟ್ಟು ದರದ ಜೊತೆಗೆ ಅವರು ಕಳಪೆ ಗುಣಮಟ್ಟದ ಪೈಪ್ ಅಳವಡಿಸಿದರೂ ಒಪ್ಪಿಕೊಳ್ಳಬೇಕು ಎಂಬುದು ಅವರ ದೂರು.

ಮುಂಗಡ ಬುಕ್ಕ್ಕಿಂಗ್‌ ಕಡ್ಡಾಯ:

ಕೊಳವೆಬಾವಿ ಕೊರೆಯಲು ಅಗತ್ಯವಿದ್ದಾಗ ಲಾರಿಗಳು ಸಿಗುವುದಿಲ್ಲ. 15 ದಿನ, ತಿಂಗಳು ಮೊದಲೇ ಬುಕ್ಕಿಂಗ್ ಮಾಡಬೇಕು ಎಂದು ಸೊರಬ ತಾಲ್ಲೂಕಿನ ಗೇರುಕೊಪ್ಪದ ಅಡಿಕೆ ಬೆಳೆಗಾರ ಡಿ.ಆರ್. ಬಸವರಾಜ ಹೇಳುತ್ತಾರೆ.

‘ಎಂಟು ಎಕರೆ ಅಡಿಕೆ ತೋಟದಲ್ಲಿರುವ ಮೂರು ಕೊಳವೆಬಾವಿಗಳ ಪೈಕಿ ಎರಡು ವಿಫಲವಾಗಿವೆ. ಮತ್ತೊಂದು ಕೊರೆಸಿದ್ದೇನೆ. ಅದರಲ್ಲಿ ಎರಡು ಇಂಚು ನೀರು ಬಿದ್ದಿದೆ‘ ಎಂದರು.

‘ಒಂದು ತೋಟಕ್ಕೆ ಹೋದ ಲಾರಿ ಒಂದು ಕೊಳವೆ ಬಾವಿ ಕೊರೆದು ವಾಪಸ್ ಬರುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಒಂದು ವಿಫಲ ಆದರೆ ಮತ್ತೊಂದು, ಮಗದೊಂದು ಹೀಗೆ ಕೊಳವೆಬಾವಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನೀರು ಬೀಳದಿದ್ದರೆ ತೋಟ ಒಣಗುವ ಭೀತಿ ಬೆಳೆಗಾರರದ್ದು. ಹೀಗಾಗಿ ಮುಂಗಡ ಬುಕ್ಕಿಂಗ್ ಮಾಡಿದರೂ ಕಾಯುತ್ತಲೇ ಇರಬೇಕು. ಅತ್ತ ಲಾರಿ ಕಾಯುತ್ತಾ, ಇತ್ತ ಕಣ್ಣೆದುರೇ ತೋಟದಲ್ಲಿನ ಗಿಡಗಳು ಒಣಗುವುದನ್ನು ನೋಡುತ್ತಾ ಕೂರಬೇಕಿದೆ‘ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ನಾವು ಹೆಚ್ಚಿನ ದರ ಆಕರಿಸುತ್ತಿಲ್ಲ. ಬೇಡಿಕೆ ಹೆಚ್ಚಿರುವುದರಿಂದ ಹೊರಗಿನಿಂದ ಲಾರಿ ತರುವ ಏಜೆನ್ಸಿಯವರು ಪಡೆಯುತ್ತಿರಬಹುದು’ ಎಂದು ಶಿರಾಳಕೊಪ್ಪದ ಬೋರ್‌ವೆಲ್‌ ಏಜೆನ್ಸಿ ಮಾಲೀಕರೊಬ್ಬರು ಹೇಳುತ್ತಾರೆ.

‘ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುವ ನೆಪದಲ್ಲಿ ಅಕ್ಷರಶಃ ಬೆಳೆಗಾರರನ್ನು ಸುಲಿಗೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ರಕ್ಷಣೆ ಮಾಡಲಿ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸುತ್ತಾರೆ.

ಮಾರ್ಚ್ 26ರಂದು ಸಭೆ: ಡಿ.ಸಿ

‘ಬೋರ್‌ವೆಲ್‌ ಏಜೆನ್ಸಿಯವರು ಅಧಿಕ ದರ ನಿಗದಿಪಡಿಸಿ ರೈತರಿಂದ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ನಮಗೂ ದೂರುಗಳು ಬಂದಿವೆ. ಹೀಗಾಗಿ ಮಾರ್ಚ್ 26ರಂದು ಬೋರ್‌ವೆಲೆ ಏಜೆನ್ಸಿ ಮಾಲೀಕರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದಿದ್ದೇನೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ’ಪ್ರಜಾವಾಣಿ‘ಗೆ ತಿಳಿಸಿದರು. ನ್ಯಾಯಯುತ ಬೆಲೆ ನಿಗದಿಪಡಿಸಿ ಅಷ್ಟು ಪಡೆಯಬೇಕು. ಹೆಚ್ಚಿನ ದರ ನಿಗದಿಮಾಡಿದ್ದು ಗೊತ್ತಾದರೆ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆಯಡಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT