ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮನೆಗಳಿಗೆ ನುಗ್ಗಿ ದಾಂದಲೆ

ಸಚಿವ, ಸಂಸದ, ಪೊಲೀಸ್ ಅಧಿಕಾರಿಗಳ ಎದುರಲ್ಲೇ ಗುಂಪಿನಿಂದ ಕಲ್ಲು ತೂರಾಟ
Last Updated 21 ಫೆಬ್ರುವರಿ 2022, 20:10 IST
ಅಕ್ಷರ ಗಾತ್ರ

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗೆ ಇಳಿದವರು ಸೋಮವಾರ ಅಕ್ಷರಶಃ ಇಲ್ಲಿ ದಾಂದಲೆ ನಡೆಸಿದರು. ಮನೆಗಳಿಗೆ ನುಗ್ಗಿ ಭೀತಿಯ ವಾತಾವರಣ ಸೃಷ್ಟಿಸಿದರು. ಪರಿಸ್ಥಿತಿಯು ಒಂದು ಹಂತದಲ್ಲಿ ಪೊಲೀಸರ ಕೈಮೀರಿದಂತೆ ಕಂಡಿತು.

ಮೃತ ಹರ್ಷನ ಪಾರ್ಥಿವ ಶರೀರದ ಮೆರವಣಿಗೆಯು ನಾಯಕ ವೃತ್ತದಿಂದ ಪಿ.ಬಿ.ರಸ್ತೆಗೆ ಮೆರವಣಿಗೆ ತಲುಪಿದಾಗ ಮತ್ತೆ ಪರಿಸ್ಥಿತಿಯು ಕೈಮೀರಿದ್ದು, ಕಲ್ಲು ತೂರಾಟ ನಡೆಯಿತು. ಮೆರವಣಿಗೆಯಲ್ಲಿ ಇದ್ದವು ದಾರಿಯ ಉದ್ದಕ್ಕೂ ‘ಜೈಶ್ರೀರಾಮ್’ ಘೋಷಣೆ ಮೊಳಗಿತು.

ರೋಟರಿ ಚಿತಾಗಾರದ ಸಮೀಪವೇ ಇರುವ ರಾಜೀವ್‌ಗಾಂಧಿ ಬಡಾವಣೆಯ ಬಡವರ್ಗದ ಜನರ ಮನೆಗಳಿಗೆ ನುಗ್ಗಿದ 500ಕ್ಕೂ ಹೆಚ್ಚು ಯುವಕರಿದ್ದ ಗುಂಪು ಎರಡು ಮನೆಗಳನ್ನು ಅಕ್ಷರಶಃ ಲೂಟಿ ಮಾಡಿತು. ಸಾಮಗ್ರಿಗಳನ್ನು ಬೀದಿಗೆ ಎಸೆದು ಕೇಕೆ ಹಾಕಿತು. ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿತು. ಗುಂಪಿನ ಆರ್ಭಟಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಚಿವರಾದ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಸೆಲ್ವಮಣಿ, ಎಡಿಜಿಪಿ ಎಸ್‌.ಮುರುಗನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್‌ ಅವರೇ ದಂಗಾಗಿ ಹೋದರು.

ಕೊರೊನಾ ಸಂಕಷ್ಟದಿಂದ ನಲುಗಿದ್ದ ಬೀದಿ ವ್ಯಾಪಾರಿಗಳು, ಹಣ್ಣು, ತರಕಾರಿ ಅಂಗಡಿಗಳ ಮಾಲೀಕರು ಜೀವನಕ್ಕೆ ಆಸರೆಯಾಗಿದ್ದ ಸಾಮಗ್ರಿ ಕಳೆದುಕೊಂಡು ರೋದಿಸಿದರು. ಕೆಲಹೊತ್ತಿನ ನಂತರ ಅಳಿದುಳಿದ ಸಾಮಗ್ರಿ ಜೋಪಾನ ಮಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

20ಕ್ಕೂ ಹೆಚ್ಚು ಜನರಿಗೆ ಗಾಯ: ಮೆರವಣಿಗೆಗೂ ಮೊದಲು ಆಜಾದ್‌ ನಗರ, ಬಿ.ಬಿ.ರಸ್ತೆ, ಸೀಗೆಹಟ್ಟಿ, ಆರ್‌ಎಂಎಲ್‌ ನಗರ, ಸೀಗೆಹಟ್ಟಿ ಸುತ್ತಮುತ್ತ ಕಲ್ಲುತೂರಾಟ ನಡೆದಿತ್ತು. ಇಬ್ಬರು ಛಾಯಾಗ್ರಾಹಕರೂ ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರಿಗೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಸಂಜೆ ರೋಟರಿ ಚಿತಾಗಾರದಲ್ಲಿ ಮೃತ ಯುವಕನ ತಂದೆ ನಾಗರಾಜ್ ಅಂತ್ಯಸಂಸ್ಕಾರ ನೆರವೇರಿಸಿದರು.

‘ಮುಸ್ಲಿಂ ಗೂಂಡಾಗಳ ಕೃತ್ಯ’

ಶಿವಮೊಗ್ಗ: ಹರ್ಷ ಕೊಲೆ ಹಾಗೂ ಮೆರವಣಿಗೆ ಸಮಯದಲ್ಲಿ ನಡೆದ ದೊಂಬಿ ನಗರದ ಹೊರಗಿನ ಮುಸ್ಲಿಂ ಗೂಂಡಾಗಳ ಕೃತ್ಯ. ಘಟನೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ, ನಗರದ ಶಾಸಕ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ, ಗಲಭೆಯ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಹರ್ಷ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹೋದಾಗಲೇ ಹೊರಗಿನ ಹೆಚ್ಚಿನ ಶಕ್ತಿಗಳು ಅಲ್ಲಿರುವುದು ಗಮನಕ್ಕೆ ಬಂತು. ತಕ್ಷಣವೇ ಅವರ ಕುಟುಂಬದವರಿಗೆ ತಿಳಿಸಿದೆ. ಮೆರವಣಿಗೆಯಲ್ಲಿ ಭಾಗವಹಿಸಿದವರು ಹಿಂದೂಗಳ ಅಂಗಡಿ, ಮನೆಗಳ ಮೇಲೂ ದಾಳಿ ನಡೆಸಿರುವುದು ಸಂಶಯಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ ಎಂದರು.

ಹರ್ಷನ ವಿರುದ್ಧ ನಾಲ್ಕು ಪ್ರಕರಣ

ಶಿವಮೊಗ್ಗ: ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಮೃತ ಹರ್ಷ ವಿರುದ್ಧ ಇಲ್ಲಿನ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಇತರೆ ಕೋಮಿನ ಯುವಕರ ಜತೆ ಸಂಘರ್ಷ, ಇತರೆ ಕೋಮುಗಳ ಭಾವನೆ ಕೆರಳಿಸುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ ಆರೋಪ ಅವರ ಮೇಲಿತ್ತು. ಜೀವ ಬೆದರಿಕೆ ಇದ್ದ ಬಗ್ಗೆ ಸಂಘಟನೆಯ ಗಮನಕ್ಕೆ ತಂದರೂ ಯಾರೂ ಜೀವ ಉಳಿಸಲಿಲ್ಲ ಎಂದು ಮೃತನ ಸಂಬಂಧಿಕರು ದೂರಿದರು.

ಹರ್ಷ ಶಿವಮೊಗ್ಗ ನಗರದ ಎಂಜಿನಿಯರ್‌ ಬಳಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಹಿಂದುತ್ವ, ಗೋ ರಕ್ಷಣೆಯಂತಹ ವಿಚಾರಗಳಲ್ಲಿ ಸದಾ ಧ್ವನಿ ಎತ್ತುತ್ತಿದ್ದರು.

‘ಹರ್ಷ ಎಂದು ಹಿಂದೂ ಹೆಸರು ಇಟ್ಟಿದ್ದೇ ತಪ್ಪಾಯ್ತಾ? ಜೈಶ್ರೀರಾಮ್ ಎಂದುಕೊಂಡೇ ಸತ್ತುಹೋದ. ಆರೋಪಿಗಳು ಯಾರೇ ಆಗಲಿ ಅವರಿಗೆ ಶಿಕ್ಷೆ ಆಗಬೇಕು. ಕುಟುಂಬಕ್ಕೆ ಸಹಾಯ ಮಾಡಬೇಕು’ ಎಂದು ಮೃತನ ಅಕ್ಕ ಅಶ್ವಿನಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮುಂದೆ ಕಣ್ಣೀರು ಹಾಕಿದರು.

* ಹರ್ಷ ಹತ್ಯೆಯ ಹಿಂದೆ ಸಂಘಟನೆಗಳು ಇರುವ ಯಾವುದೇ ಮಾಹಿತಿಲ್ಲ. ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಶೀಘ್ರ ಸ್ಪಷ್ಟಚಿತ್ರಣ ದೊರಕಲಿದೆ.

-ಆರಗ ಜ್ಞಾನೇಂದ್ರ, ಗೃಹ ಸಚಿವ

* ಹರ್ಷ ಹತ್ಯೆ ಸಂಬಂಧ ಮಾಹಿತಿ ಪಡೆದಿದ್ದೇನೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಜೊತೆ ಕೂಡ ಮಾತನಾಡಿದ್ದೇನೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ.

-ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT