ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಗ್ರಾ.ಪಂ. ಸ್ಥಾಪನೆಗೆ ಆಗ್ರಹಿಸಿ ಮನವಿ

ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನ ಚುನಾವಣೆ ಬಹಿಷ್ಕಾರ ಎಚ್ಚರಿಕೆ
Last Updated 25 ಮೇ 2022, 2:26 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಯಲಸಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಸ್ಥಾಪಿಸಲು ಆಗ್ರಹಿಸಿ ಯಲಸಿ, ಗುಂಡಶೆಟ್ಟಿಕೊಪ್ಪ, ತಾವರೆಹಳ್ಳಿ ಹಾಗೂ ಕರಡಿಗೇರಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯಿತಿಯಿಂದ ಸೊರಬ ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಹಳೇ ಸೊರಬ ಗ್ರಾಮ ಪಂಚಾಯಿತಿಯನ್ನು ರದ್ದುಗೊಳಿಸಿ ಇಲ್ಲಿನ ಜಂಗಿನಕೊಪ್ಪ, ಹಳೇಸೊರಬ, ಮರೂರು, ಜಯಂತಿ ಗ್ರಾಮ, ರಾಜೀವನಗರವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೊಂಡು, ಆ ವ್ಯಾಪ್ತಿಯಲ್ಲಿದ್ದ ಯಲಸಿ, ಗುಂಡಶೆಟ್ಟಿಕೊಪ್ಪ, ತಾವರೆಹಳ್ಳಿ ಹಾಗೂ ಕರಡಿಗೇರಿ ಗ್ರಾಮಗಳನ್ನು ಹೆಚ್ಚೆ ಹಾಗೂ ಮುಟುಗುಪ್ಪೆ ಗ್ರಾಮ ಪಂಚಾಯಿತಿಗೆ ಸೇರಿಸಲಾಗಿದೆ. ಆದರೆ ಈ ಗ್ರಾಮ ಪಂಚಾಯಿತಿ ಕೇಂದ್ರಗಳು ಈ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ದೂರವಾಗಿದ್ದು, ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಸುತ್ತಾಡಲು ತೊಂದರೆಯಾಗಿದೆ. ಯಲಸಿ ಗ್ರಾಮದಲ್ಲಿ ಹೊಸದಾಗಿ ಗ್ರಾಮ ಪಂಚಾಯಿತಿ ಸ್ಥಾಪಿಸಿದರೆ ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೆ ಕೇವಲ 1 ಕಿ.ಮೀ. ವ್ಯಾಪ್ತಿಯಲ್ಲಿ ಸೌಲಭ್ಯಗಳು ಜನರಿಗೆ ದೊರಕುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಯಲಸಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೂ ಇರುವುದರಿಂದ ಮೇಲಿನ ಎಲ್ಲ ಗ್ರಾಮಗಳು ಪಡಿತರ ಪಡೆಯಲು ಅನುಕೂಲವಾಗಿದೆ. ಈಗ ಸೇರ್ಪಡೆಗೊಳಿಸಿರುವ ಮುಟುಗುಪ್ಪೆ ಹಾಗೂ ಹೆಚ್ಚೆ ಗ್ರಾಮ ಪಂಚಾಯಿತಿಗೆ ನಾಗರಿಕ ಸೌಲಭ್ಯಗಳನ್ನು ಪಡೆಯಲು ಗ್ರಾಮಸ್ಥರು ಸುಮಾರು 10 ಕಿ.ಮೀ. ದೂರ ಕ್ರಮಿಸಬೇಕು. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆಯುವಂತಾಗಿದೆ. ಸೂಕ್ತ ವಾಹನಗಳ ಸೌಲಭ್ಯಗಳು ಇಲ್ಲ. ಇದರಿಂದ ವಯಸ್ಸಾದವರು, ಅಂಗವಿಕಲರು, ಬಡವರು ಕೇಂದ್ರಸ್ಥಾನಕ್ಕೆ ತೆರಳಲು ದುಸ್ತರವಾಗಿದೆ ಎಂದು
ವಿವರಿಸಿದ್ದಾರೆ.

ಜನಸಂಖ್ಯೆ ಕೊರತೆ ಎದುರಾದರೆ ಮುಟುಗುಪ್ಪೆ ವ್ಯಾಪ್ತಿಯಲ್ಲಿರುವ ಕಕ್ಕರಸಿ, ತಂಡಿಗೆ ಗ್ರಾಮಗಳನ್ನು ಸೇರಿಸಿದರೆ ಅವರಿಗೂ ಅನುಕೂಲವಾಗಲಿದೆ. ಒಂದೊಮ್ಮೆ ಯಲಸಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಸ್ಥಾಪನೆ ಮಾಡಲು ಹಿಂದೇಟು ಹಾಕಿದರೆ ಎಲ್ಲ ಗ್ರಾಮಸ್ಥರು ಒಗ್ಗಟ್ಟು ಪ್ರದರ್ಶಿಸಿ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಯಲಸಿ ಗ್ರಾಮ ಸಮಿತಿ ಅಧ್ಯಕ್ಷ ತೇಕರಪ್ಪ, ಡಿ. ಬುಕ್ಕೇಶ್, ಕೆ.ಎಸ್. ಗಣಪತಿ, ಸಿದ್ದಪ್ಪ ಎಂ.ಬಿ., ಡಿ. ಲೋಕೇಶ್, ಎಂ.ಕೆ. ಕೃಷ್ಣಪ್ಪ, ಕೆ.ಎ. ಕುಮಾರಸ್ವಾಮಿ, ವಿ. ಜಾನಕಪ್ಪ, ರವಿ, ಕನ್ನಪ್ಪ, ವೀರಭದ್ರಪ್ಪ, ಗುಂಡಶೆಟ್ಟಿಕೊಪ್ಪ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ನಾಗರಾಜಪ್ಪ, ಕೆ. ನಿಂಗಪ್ಪ, ಎಂ.ಡಿ. ಬಸವರಾಜ್, ಲೋಕಪ್ಪ, ಹರೀಶ್ ಎಂ., ತಾವರೆಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಶ್ಯಾಮಪ್ಪ, ಈರಪ್ಪ, ಬಿ. ಲಕ್ಷ್ಮಣಪ್ಪ, ಜಾನಕಪ್ಪ, ಕಡರಿಗೇರಿ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ, ಬಸವರಾಜ ಲಕ್ಷ್ಮಣ, ಮಂಜಪ್ಪ, ಹವಳೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT