ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಮುಲ್ ಆಡಳಿತ ಮಂಡಳಿ ಚುನಾವಣೆ; ಆ.14ಕ್ಕೆ ಮತದಾನ

-
Published 2 ಆಗಸ್ಟ್ 2024, 15:36 IST
Last Updated 2 ಆಗಸ್ಟ್ 2024, 15:36 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್‌) ಐದು ವರ್ಷದ ಆಡಳಿತ ಮಂಡಳಿ ಚುನಾವಣೆಗೆ ಜುಲೈ 30ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.  ಶುಕ್ರವಾರ 20 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಆಗಸ್ಟ್‌ 14ರಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಇದಕ್ಕೆ ಪೂರಕವಾಗಿ ಮತದಾನಕ್ಕೆ ಅರ್ಹರಾದವರು ಮತ್ತು ಅನರ್ಹರಾದವರ ಪಟ್ಟಿಯನ್ನು ಶಿಮುಲ್‌ ಆವರಣದಲ್ಲಿ ಪ್ರಕಟಿಸಲಾಗಿದೆ.

ಒಕ್ಕೂಟದಲ್ಲಿ ವಿಭಾಗಗಳು: 14 ನಿರ್ದೇಶಕ ಬಲದ ಒಕ್ಕೂಟದಲ್ಲಿ ಶಿವಮೊಗ್ಗ ಮತ್ತು ಸಾಗರ ವಿಭಾಗದಿಂದ ತಲಾ ಮೂವರು, ದಾವಣಗೆರೆ ಮತ್ತು ಚಿತ್ರದುರ್ಗ ವಿಭಾಗಗಳಿಂದ ತಲಾ ನಾಲ್ವರು ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಸಂಘಗಳ ಸಂಖ್ಯೆಗೆ ಅನುಗುಣವಾಗಿ ಒಕ್ಕೂಟವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ವಿಭಾಗಕ್ಕೆ ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕು ಸೇರಿವೆ. ಸಾಗರ ವಿಭಾಗಕ್ಕೆ ಸೊರಬ, ಸಾಗರ, ಹೊಸನಗರ, ಶಿಕಾರಿಪುರ ತಾಲೂಕು ಸೇರಿವೆ. ದಾವಣಗೆರೆ ವಿಭಾಗಕ್ಕೆ ಹರಿಹರ, ದಾವಣಗೆರೆ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಜಗಳೂರು ತಾಲೂಕುಗಳು ಮತ್ತು ಚಿತ್ರದುರ್ಗ ವಿಭಾಗಕ್ಕೆ ಹೊಳಲ್ಕೆರೆ, ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳು ಸೇರಿವೆ. 

ಮತದಾನ ಹೇಗೆ: ಮತದಾನದ ಹಕ್ಕು ಪಡೆದುಕೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯು ತಮ್ಮ ಸಂಘದ ಒಬ್ಬ ಪ್ರತಿನಿಧಿಯನ್ನು ಮತದಾರನನ್ನಾಗಿ ಆಯ್ಕೆ ಮಾಡುತ್ತವೆ. ಮತದಾರರು ತಮ್ಮ ವಿಭಾಗದಲ್ಲಿ ಸ್ಪರ್ಧಿಸಿದವರಲ್ಲಿ ಒಬ್ಬರನ್ನು ಮತದಾನ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಬಹುದು. ಜಯಶಾಲಿ ಎಂದು ಘೋಷಿಸುವಾಗ ಪ್ರತಿ ತಾಲೂಕಿನಿಂದ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

ಮತದಾರರ ತಲುಪಲು ಪೈಪೋಟಿ: ಸಹಕಾರ ಕ್ಷೇತ್ರವು ಪಕ್ಷಾತೀತವಾದರೂ ಇಲ್ಲಿಪಕ್ಷ ಬೆಂಬಲಿತ ಮುಖಂಡರು ತಂಡ ಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷಗಳ ಬೆಂಬಲಿತರ ಗುಂಪು ಇದ್ದರೆ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪಕ್ಷಾತೀತವಾಗಿ ತಂಡ ಕಟ್ಟಿಕೊಳ್ಳಲಾಗಿದೆ. ಕೆಲವರು ತಂಡ ಸೇರಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧೆ ಬಯಸಿದ್ದಾರೆ. ಮಾಜಿ ಅಧ್ಯಕ್ಷರು, ಹಾಲಿ ಮಾಜಿ ಉಪಾಧ್ಯಕ್ಷರು, ಹಾಲಿ ಮತ್ತು ಮಾಜಿ ನಿರ್ದೇಶಕರೊಂದಿಗೆ ಹೊಸ ಮುಖಗಳೂ ಸ್ಪರ್ಧೆ ಬಯಸಿ ಪ್ರಚಾರ ನಡೆಸುತ್ತಿದ್ದಾರೆ.

ಚುನಾವಣೆಗೆ ಕೇವಲ 12 ದಿನ ಉಳಿದಿರುವುದರಿಂದ ಎಲ್ಲ ಮತದಾರರನ್ನು ತಲುಪಲು ಬಹಳಷ್ಟು ಸಮಯ ಬೇಕು. ಮತದಾರರು ಹಾಲು ಉತ್ಪಾದಕರ ರೈತರಾಗಿರುವುದರಿಂದ ಅವರನ್ನು ಹುಡುಕಿಕೊಂಡು ತೋಟ, ಹೊಲ, ಗದ್ದೆಗಳಿಗೆ ಹೋಗಬೇಕಾದ ಸ್ಥಿತಿಯೂ ಇದೆ. ಹೀಗಾಗಿ ಆಕಾಂಕ್ಷಿಗಳು ವೇಳಾಪಟ್ಟಿ ಘೋಷಣೆಗೂ ಮುನ್ನವೆ ಪ್ರಚಾರ ಆರಂಭಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT