ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಮುಲ್: ಕಾಂಗ್ರೆಸ್ ಬೆಂಬಲಿತರ ಮೇಲುಗೈ

ಶಿಮುಲ್: 14 ಮಂದಿ ನೂತನ ನಿರ್ದೇಶಕರ ಆಯ್ಕೆ; 1,169 ಮಂದಿಯಿಂದ ಮತ ಚಲಾವಣೆ
Published : 14 ಆಗಸ್ಟ್ 2024, 15:19 IST
Last Updated : 14 ಆಗಸ್ಟ್ 2024, 15:19 IST
ಫಾಲೋ ಮಾಡಿ
Comments

ಶಿವಮೊಗ್ಗ: ತೀವ್ರ ಹಣಾಹಣಿಗೆ ಕಾರಣವಾಗಿದ್ದ ಇಲ್ಲಿನ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್‌) ಆಡಳಿತ ಮಂಡಳಿ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆಯಿತು. 14 ಮಂದಿ ನೂತನ ನಿರ್ದೇಶಕರನ್ನೊಳಗೊಂಡ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದರು.

ಮಾಚೇನಹಳ್ಳಿಯ ಶಿಮುಲ್ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ವಿಭಾಗದಿಂದ ಭದ್ರಾವತಿ ತಾಲ್ಲೂಕಿನ ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರತಿನಿಧಿಸಿದ್ದ ಡಿ.ಆನಂದ್, ಶಿವಮೊಗ್ಗ ತಾಲ್ಲೂಕಿನ ಬುಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಎಚ್.ಬಿ.ದಿನೇಶ್ ಹಾಗೂ ತೀರ್ಥಹಳ್ಳಿ ತಾಲ್ಲೂಕು ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರತಿನಿಧಿಸಿದ್ದ ಆರ್.ಎಂ.ಮಂಜುನಾಥಗೌಡ ಗೆಲುವು ಸಾಧಿಸಿದರು.

ಸಾಗರ ವಿಭಾಗ: ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿ ಆಗಿದ್ದ ಟಿ.ಶಿವಶಂಕರಪ್ಪ, ಸೊರಬ ತಾಲ್ಲೂಕಿನ ತ್ಯಾವಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಟಿ.ಎಸ್.ದಯಾನಂದಗೌಡ ಹಾಗೂ ಹೊಸನಗರ ತಾಲ್ಲೂಕು ಕಾರ್ಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿ ಎನ್.ವಿದ್ಯಾಧರ ಗೆಲುವಿನ ನಗೆ ಬೀರಿದರು.

ದಾವಣಗೆರೆ ವಿಭಾಗ: ದಾವಣಗೆರೆ ತಾಲ್ಲೂಕು ಬಿ.ಕಲಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರತಿನಿಧಿಸಿದ್ದ ಚೇತನ್ ಎಸ್.ನಾಡಿಗರ, ಹರಿಹರ ತಾಲ್ಲೂಕು ಹನಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಜಗದೀಶಪ್ಪ ಬಣಕಾರ, ಚನ್ನಗಿರಿ ತಾಲ್ಲೂಕು ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಎಚ್.ಕೆ.ಬಸಪ್ಪ ಹಾಗೂ ಹೊನ್ನಾಳಿ ತಾಲ್ಲೂಕಿನ ಎಂ.ಹನುಮನಹಳ್ಳಿ ಹಾಲು ಉತ್ಪಾದಕರ ಸಂಘದ ಪ್ರತಿನಿಧಿ ಬಿ.ಜಿ.ಬಸವರಾಜಪ್ಪ ಗೆಲುವು ಸಾಧಿಸಿದರು.

ಚಿತ್ರದುರ್ಗ ವಿಭಾಗದಿಂದ ಹೊಸದುರ್ಗ ತಾಲ್ಲೂಕು ಕಬ್ಬಳದ ಬಿ.ಆರ್.ರವಿಕುಮಾರ್, ಚಳ್ಳಕೆರೆ ತಾಲ್ಲೂಕು ನರಹರಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿ ಬಿ.ಸಿ.ಸಂಜೀವಮೂರ್ತಿ, ಚಿತ್ರದುರ್ಗ ತಾಲ್ಲೂಕು ಓಬವ್ವ ನಾಗತಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಜಿ.ಪಿ.ರೇವಣಸಿದ್ದಪ್ಪ ಹಾಗೂ ಹೊಳಲ್ಕೆರೆ ತಾಲ್ಲೂಕು ಟಿ.ನುಲೇನೂರು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿ ಜಿ.ಬಿ.ಶೇಖರಪ್ಪ ಗೆಲುವು ಗಳಿಸಿದರು.

ಶಿಮುಲ್‌ನ 14 ಮಂದಿ ನಿರ್ದೇಶಕರ ಸ್ಥಾನದ ಪೈಕಿ ತೀರ್ಥಹಳ್ಳಿಯಿಂದ ಆರ್‌.ಎಂ.ಮಂಜುನಾಥಗೌಡ ಹಾಗೂ ಹೊಸನಗರದಿಂದ ಎನ್‌.ವಿದ್ಯಾಧರ ಅವಿರೋಧವಾಗಿ ಆಯ್ಕೆಯಾಗಿದ್ದ ಕಾರಣ 12 ಮಂದಿಯ ಆಯ್ಕೆಗೆ ಚುನಾವಣೆ ನಡೆಯಿತು. ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮತದಾನ ಹೇಗೆ: ಮತದಾನದ ಹಕ್ಕು ಪಡೆದುಕೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯು ತಮ್ಮ ಸಂಘದ ಒಬ್ಬ ಪ್ರತಿನಿಧಿಯನ್ನು ಮತದಾರನನ್ನಾಗಿ ಆಯ್ಕೆ ಮಾಡಿತ್ತು. ಮತದಾರರು ತಮ್ಮ ವಿಭಾಗದಲ್ಲಿ ಸ್ಪರ್ಧಿಸಿದವರಲ್ಲಿ ಒಬ್ಬರಿಗೆ ಮತದಾನ ಮಾಡುವ ಮೂಲಕ ಆಯ್ಕೆ ಮಾಡಿದರು. ಪ್ರತಿ ತಾಲ್ಲೂಕಿನಿಂದ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಯಿತು.

ಶೇ 99ರಷ್ಟು ಮತದಾನ: ಇಲ್ಲಿನ ಮಾಚೇನಹಳ್ಳಿಯ ಶಿಮುಲ್‌ ಕೇಂದ್ರ ಕಚೇರಿ ಆವರಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. 1,171 ಮತದಾರರ ಪೈಕಿ 1,169 ಮಂದಿ ಮತ ಚಲಾಯಿಸಿದರು. ಶೇ 99ರಷ್ಟು ಮತದಾನ ನಡೆದದ್ದು ವಿಶೇಷ. ಶಿವಮೊಗ್ಗ ವಿಭಾಗದಲ್ಲಿ 264 ಮತಗಳ ಪೈಕಿ ಅಷ್ಟೂ ಚಲಾವಣೆಯಾದವು. ಸಾಗರದ 256 ಮತದಾರರಲ್ಲಿ 255 ಮಂದಿ ಮತ ಚಲಾಯಿಸಿದರು. ದಾವಣಗೆರೆಯ 362 ಮತದಾರರ ಪೈಕಿ 361 ಮತ್ತು ಚಿತ್ರದುರ್ಗದ 289 ಮತದಾರರ ಪೈಕಿ ಅಷ್ಟೂ ಮಂದಿ ಮತ ಚಲಾಯಿಸಿದರು. ಮತದಾನಕ್ಕೆ ಅರ್ಹರು ಮತ್ತು ಅನರ್ಹರಾದವರ ಪಟ್ಟಿ ಶಿಮುಲ್‌ ಆವರಣದಲ್ಲಿ ಪ್ರಕಟಿಸಲಾಗಿತ್ತು. 

ಮತದಾರರ ಜೊತೆಗೆ ಚುನಾವಣೆಗೆ ಸ್ಪರ್ಧಿಸಿದವರ ಬೆಂಬಲಿಗರು ಬೆಳಿಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಶಿಮುಲ್ ಎದುರು ನೆರೆದಿದ್ದರು. ಹೀಗಾಗಿ ಶಿವಮೊಗ್ಗ–ಭದ್ರಾವತಿ ರಸ್ತೆಯಲ್ಲಿ ಜನ, ವಾಹನ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಯಾರಿಗೆ ಯಾವ ಪಕ್ಷದ ಬೆಂಬಲ?

ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ವಿದ್ಯಾಧರ್ ಟಿ.ಶಿವಶಂಕರಪ್ಪ ಹಾಗೂ ಟಿ.ಎಸ್.ದಯಾನಂದ ಗೌಡ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ವಿಭಾಗದಲ್ಲಿ ಜೆಡಿಎಸ್ ಬೆಂಬಲಿತ ಭದ್ರಾವತಿಯ ಡಿ.ಆನಂದ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ಎಚ್‌.ಬಿ.ದಿನೇಶ್‌ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥಗೌಡ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ಪಕ್ಷಾತೀತ ಗೆಲುವು: ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಒಕ್ಕೂಟದ ಪ್ರತಿನಿಧಿಗಳು ಪಕ್ಷಾತೀತವಾಗಿ ಬಣಗಳ ರಚಿಸಿಕೊಂಡು ಸ್ಪರ್ಧೆ ಮಾಡಿದ್ದರು. ದಾವಣಗೆರೆಯಲ್ಲಿ ಜಗದೀಶಪ್ಪ ಬಣಕಾರ್ ಎಚ್.ಕೆ.ಬಸಪ್ಪ ಅನಿಲ್‌ಕುಮಾರ್ ಪಾಲಾಕ್ಷಪ್ಪ ಒಂದು ಬಣದಿಂದ ಸ್ಪರ್ಧಿಸಿದ್ದರು. ಅದರಲ್ಲಿ ಜಗದೀಶಪ್ಪ ಬಣಕಾರ್ ಹಾಗೂ ಎಚ್.ಕೆ.ಬಸಪ್ಪ ಗೆಲುವು ಸಾಧಿಸಿದ್ದಾರೆ. ಇನ್ನೊಂದು ತಂಡದಲ್ಲಿ ಬಿ.ಜಿ.ಬಸವರಾಜ‍ಪ್ಪ ಚೇತನ್‌ ನಾಡಿಗರ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗದಲ್ಲಿ ಜಿ.ಪಿ.ರೇವಣಸಿದ್ದಪ್ಪ ಬಣದಿಂದ ಸ್ಪರ್ಧಿಸಿದವರಲ್ಲಿ ರೇವಣಸಿದ್ದಪ್ಪ ಸೇರಿದಂತೆ ಬಿ.ಸಿ.ಸಂಜೀವಮೂರ್ತಿ ಹಾಗೂ ಕಾಮಧೇನು ಬಸ್ ಮಾಲೀಕ ಜಿ.ಬಿ.ಶೇಖರ್‌ ಆಯ್ಕೆಯಾಗಿದ್ದಾರೆ. ಹೊಸದುರ್ಗದ ರವಿಕುಮಾರ್ ಬಿ.ಆರ್. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT