ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಜಿಲ್ಲಾ ಬೈಕ್ ಕಳ್ಳತನ ಪ್ರಕರಣ: 17 ಬೈಕ್‌ಗಳ ವಶ

ಭದ್ರಾವತಿ ಹಲ್ಲೆ ಪ್ರಕರಣ, ಎರಡು ಎಫ್‌ಐಆರ್ ದಾಖಲು: ಎಸ್ಪಿ
Published 12 ಡಿಸೆಂಬರ್ 2023, 15:37 IST
Last Updated 12 ಡಿಸೆಂಬರ್ 2023, 15:37 IST
ಅಕ್ಷರ ಗಾತ್ರ

ಶಿವಮೊಗ್ಗ:  ಅಂತರ ಜಿಲ್ಲಾ ಬೈಕ್ ಕಳ್ಳತನ ಪ್ರಕರಣಗಳ ಬೇಧಿಸಿರುವ ಇಲ್ಲಿನ ದೊಡ್ಡಪೇಟೆ ಠಾಣೆ ಪೊಲೀಸರು 17 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಲ್ಲಿ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ. ಮತ್ತೊಬ್ಬ ಆರೋಪಿ ಜಬೀವುಲ್ಲಾ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿನ ಬೈಪಾಸ್ ರಸ್ತೆಯ ದಿಲ್ಲಿ ದರ್ಬಾರ್ ಹೋಟೆಲ್ ಹಿಂದೆ ನಿಲ್ಲಿಸಿದ್ದ ಹೊಂಡಾ ಡಿಯೋ ಸ್ಕೂಟರ್ ನ.18 ರಂದು ಕಳ್ಳತನವಾಗಿತ್ತು. ಆ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಸ್ಕೂಟರ್‌ನ ಮಾಲೀಕ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಗೆ ಇನ್ಸ್ ಪೆಕ್ಟರ್ ರವಿ ಪಾಟೀಲ್, ಅಪರಾಧ ಪತ್ತೆ ದಳದ ಪಿಎಸ್‌ಐ ಶ್ರೀನಿವಾಸ್ ಮುಂದಾಳತ್ವದಲ್ಲಿ ತಂಡ ರಚಿಸಲಾಗಿತ್ತು. ಆ ತಂಡ ಬಾಲಕನ ಪತ್ತೆ ಮಾಡಿ ಬೈಕ್‌ಗಳ ವಶಪಡಿಸಿಕೊಂಡಿದೆ.

ಆರೋಪಿಗಳು ಶಿವಮೊಗ್ಗ ಮಾತ್ರವಲ್ಲದೇ ಸಾಗರ,  ಭದ್ರಾವತಿ, ಹೊನ್ನಾಳಿ, ದಾವಣಗೆರೆ, ಹರ‍ಪನಹಳ್ಳಿ, ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ, ರಾಮನಗರ, ಹಾಸನ, ತುಮಕೂರು, ತಿಪಟೂರು, ಮೈಸೂರು ಹೀಗೆ ಒಟ್ಟು ವಿವಿಧೆಡೆ ಒಟ್ಟು 17 ಬೈಕ್ ಗಳನ್ನು ಕದ್ದಿರುವುದು ಗೊತ್ತಾಗಿದ್ದು, ವಶಪಡಿಸಿಕೊಂಡ ಬೈಕ್‌ಗಳ ಒಟ್ಟು ಬೆಲೆ ₹10.55 ಲಕ್ಷ ಎಂದರು. ಈ ಪ್ರಕರಣ ಭೇದಿಸಲು ಭಾಗಿಯಾದ ತಂಡಕ್ಕೆ ಬಹುಮಾನ ಕೂಡ ನೀಡಲಾಗುವುದು ಎಂದು ತಿಳಿಸಿದರು.

ಭದ್ರಾವತಿಯಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಾಗಿವೆ. ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಗಾಯಾಳು ಗೋಕುಲ ಕೃಷ್ಣ ಮೇಲೂ ಒಂದು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆಟೊ ಮೀಟರ್ ಅಳವಡಿಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಚಾಲಕರು ತೊಂದರೆ ಕೊಟ್ಟಲ್ಲಿ ಅಥವಾ ಸಮವಸ್ತ್ರ ಧರಿಸದೇ ಇದ್ದಲ್ಲಿ ಯಾವುದೇ ದೂರು ಇದ್ದರೂ ಕೂಡ ಸಾರ್ವಜನಿಕರು ಆತಂಕಕ್ಕೆ ಒಳಗಾಗದೇ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿ ಅಥವಾ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ದೂರು ದಾಖಲಿಸುವಂತೆ ಹೇಳಿದರು. ಪ್ರೀಪೇಯ್ಡ್ ಆಟೋ ನಿಲ್ದಾಣ ಆರಂಭಕ್ಕೆ ಸಂಬಂಧಿಸಿದಂತೆ ಆರ್.ಟಿ.ಒ ಕ್ರಮ ಕೈಗೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ರವಿ ಪಾಟೀಲ್ ಇದ್ದರು.

‘ಬಸ್ ನಿಲ್ದಾಣದಲ್ಲಿ ಕಳ್ಳತನ ಗಂಭೀರ ಪರಿಗಣನೆ’

ಶಿವಮೊಗ್ಗದಲ್ಲಿ ಬಸ್‌ ನಿಲ್ದಾಣದಲ್ಲಿ ಪದೇ ಪದೇ ಕಳ್ಳತನ ಆಗುತ್ತಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಎಸ್ಪಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ರಾತ್ರಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ಕೂಡ ಹೆಚ್ಚಿಸಲಾಗಿದೆ. ಅನುಮಾನಾಸ್ಪದವಾಗಿ ಓಡಾಡುವವರನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಕಳ್ಳತನ ಸೇರಿದಂತೆ ಅಪರಾಧ ಕೃತ್ಯಗಳ ತಡೆಯಲು ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT