ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮುಲ್‌: 20ಕ್ಕೆ ಅವಿಶ್ವಾಸ ಗೊತ್ತುವಳಿ

Last Updated 15 ಸೆಪ್ಟೆಂಬರ್ 2021, 4:37 IST
ಅಕ್ಷರ ಗಾತ್ರ

ಶಿವಮೊಗ್ಗ: ಅವಿಶ್ವಾಸ ಗೊತ್ತುವಳಿ ಸಭೆ ವಿರುದ್ಧ ತಡೆಯಾಜ್ಞೆ ಕೋರಿ ಶಿಮುಲ್ ಅಧ್ಯಕ್ಷ ಡಿ.ಆನಂದ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಸೆ.20ರಂದು ಅವಿಶ್ವಾಸ ಗೊತ್ತುವಳಿ ಸಭೆ ನಿಗದಿಯಾಗಿದೆ.

ಶಿಮುಲ್‌ನ 14 ನಿರ್ದೇಶಕರಲ್ಲಿ 10 ನಿರ್ದೇಶಕರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಅವಕಾಶ ಕೋರಿ ನೋಟಿಸ್‍ಗೆ ಸಹಿ ಹಾಕಿದ್ದರು. ಈ ಕಾರಣಕ್ಕೆ ಜುಲೈ 15ರಂದು ಅವಿಶ್ವಾಸ ಗೊತ್ತುವಳಿ ಮಂಡನೆಗೆ ದಿನ ನಿಗದಿಯಾಗಿತ್ತು. ಆನಂದ್ ಅವಿಶ್ವಾಸ ಗೊತ್ತುವಳಿ ಮಂಡನೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಜುಲೈ 12ರಂದು ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್ ಜುಲೈ 19ಕ್ಕೆ ವಿಚಾರಣೆ ಮುಂದೂಡಿತ್ತು. ಅಲ್ಲಿಯವರೆಗೂ ಅವಿಶ್ವಾಸ ಮಂಡನೆ ಸಭೆ ನಡೆಸದಂತೆ ಸೂಚಿಸಿತ್ತು. ಇದಾದ ಬಳಿಕ ನ್ಯಾಯಾಲಯದ ಕಲಾಪ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಈಗ ಶಿಮುಲ್ ಅಧ್ಯಕ್ಷರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಕಾರಣ ಸೆ.20ರಂದು ಅವಿಶ್ವಾಸ ಗೊತ್ತುವಳಿ ಮೇಲೆ ಮತದಾನ ನಡೆಸಲು ತೀರ್ಮಾನಿಸಲಾಗಿದೆ.

ಕೋರ್ಟ್‌ ಮೋರೆ ಹೋಗಿದ್ದೇಕೆ?: ಕೊರೊನಾ ಅವಧಿಯಲ್ಲಿ ಯಾವುದೇ ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಸ್ಥೆಗಳ ಚುನಾವಣೆ ನಡೆಸಬಾರದು ಎಂದು ಸರ್ಕಾರವೇ ಆದೇಶಿಸಿದೆ. ಶಿಮುಲ್‍ನಲ್ಲಿ ಅವಿಶ್ವಾಸ ಮಂಡನೆಗೆ ಅವಕಾಶ ನೀಡಿರುವುದು ಎಷ್ಟು ಸರಿ? ಒಂದು ವೇಳೆ ಅಧ್ಯಕ್ಷರ ಪದಚ್ಯುತಿಯಾದರೆ ಸದ್ಯಕ್ಕೆ ಅಧ್ಯಕ್ಷರ ಆಯ್ಕೆ ಮಾಡುವುದು ಸಾಧ್ಯವಿಲ್ಲ. ಆಡಳಿತಾತ್ಮಕ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ, ಅವಿಶ್ವಾಸ ಮಂಡನೆಗೆ ಅವಕಾಶ ನೀಡಬಾರದು ಎಂದು ಡಿ.ಆನಂದ್ ಕೋರ್ಟ್ ಮೆಟ್ಟಿಲೇರಿದ್ದರು.

ಕಾದು ನೋಡುವ ತಂತ್ರ

‘ನಿರ್ದೇಶಕರ ಇಚ್ಛೆಯಂತೆ ನಾನು ಒಕ್ಕೂಟದ ಅಧ್ಯಕ್ಷನಾದ ಮೇಲೆ ರೈತರ ಸಹಕಾರಿಯಾಗಿ ಕೆಲಸ ಮಾಡಿದ್ದೇನೆ. 4 ಲಕ್ಷ ಲೀಟರ್‌ ಇದ್ದ ಹಾಲಿನ ಉತ್ಪಾದನೆಯನ್ನು 6 ಲಕ್ಷ ಲೀಟರ್‌ವರೆಗೆ ಹೆಚ್ಚಿಸಿದ್ದೇನೆ. ರಾಜ್ಯದ ಇತರೆ ಹಾಲು ಒಕ್ಕೂಟಗಳಿಗಿಂತ ಹೆಚ್ಚು ಬೆಲೆ ನೀಡಿದ್ದೇನೆ. ಇಷ್ಟಾದರೂ ಕೆಲ ನಿರ್ದೇಶಕರು ನನ್ನ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ. ಇದಕ್ಕೆ ಕಾರಣ ನನಗಂತೂ ಗೊತ್ತಿಲ್ಲ. ಗೊತ್ತುವಳಿ ಸಭೆಗೆ ಇನ್ನೂ 5 ದಿನಗಳು ಬಾಕಿ ಇದ್ದು, ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ’ ಎನ್ನುತ್ತಾರೆ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT