ಸೋಮವಾರ, ಜುಲೈ 4, 2022
24 °C
₹ 14.5 ಕೋಟಿ ದಂಡ ಪಾವತಿಸಲು ಸುಪ್ರೀಂ ಕೋರ್ಟ್ ಆದೇಶ

ಕ್ಯಾಂಪಸ್‌ ಉಳಿಸಲು ಕುವೆಂಪು ವಿವಿ ಸರ್ಕಸ್‌

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಯಾಗಿ ನಾಲ್ಕು ದಶಕಗಳು ಕಳೆದರೂ ತನ್ನ ಹೆಸರಿಗೆ ಕ್ಯಾಂಪಸ್‌ ಪ್ರದೇಶ ನೋಂದಾಯಿಸಿಕೊಳ್ಳಲು ವಿಶ್ವವಿದ್ಯಾಲಯ ಹರಸಾಹಸ ಪಡುತ್ತಿದೆ. ಸುಪ್ರೀಂ ಕೋರ್ಟ್‌ ಸೂಚನೆಯಂತೆ ₹ 14.5 ಕೋಟಿ ದಂಡ ಪಾವತಿಸಲು ಸಿದ್ಧವಿದ್ದರೂ, ಕೇಂದ್ರ ಸರ್ಕಾರದ ಅನುಮತಿ ದೊರೆಯದೇ ಪರಿತಪಿಸುತ್ತಿದೆ.

1979ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಆರಂಭವಾಗಿತ್ತು. ರಾಜ್ಯ ಸರ್ಕಾರ ಭದ್ರಾವತಿ ತಾಲ್ಲೂಕು ಶಂಕರಘಟ್ಟದ ಬಳಿ 89 ಹೆಕ್ಟೇರ್‌ ಕಿರು ಅರಣ್ಯ ಪ್ರದೇಶವನ್ನು 20 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿತ್ತು. ಮೂರು ದಶಕಗಳ ಅವಧಿಯಲ್ಲಿ ಆ ಪ್ರದೇಶದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಕಟ್ಟಡಗಳು ತಲೆಎತ್ತಿವೆ. ರಾಜ್ಯ ಸರ್ಕಾರದ ಅಧೀನದಲ್ಲಿದ್ದ ಈ ಕಿರು ಅರಣ್ಯ ಪ್ರದೇಶವನ್ನು 1998ರಲ್ಲಿ ಕೇಂದ್ರ ಸರ್ಕಾರ ಭದ್ರಾ ಹುಲಿ ಸಂರಕ್ಷಿತ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಿತ್ತು. 1999ಕ್ಕೆ ಗುತ್ತಿಗೆ ಅವಧಿ ಮುಗಿದರೂ ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ, ಗುತ್ತಿಗೆ ಅವಧಿ ನವೀಕರಿಸಲು ಕೋರದ ಪರಿಣಾಮ ವಿಶ್ವವಿದ್ಯಾಲಯ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ.

2002ರಲ್ಲಿ ಅರ್ಜಿ ಸಲ್ಲಿಸಿದರೂ, ಗುತ್ತಿಗೆ ಅವಧಿ ಆಗಲೇ ಮುಕ್ತಾಯವಾಗಿದ್ದು, ಹುಲಿ ಸಂರಕ್ಷಿತ ಪ್ರದೇಶವಾದ ಕಾರಣ ಹೊಸದಾಗಿ ಗುತ್ತಿಗೆ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಕ್ಯಾಂಪಸ್‌ ಒಳಗೆ ಯಾವುದೇ ನಿರ್ಮಾಣ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಿತ್ತು. ಅಲ್ಲದೇ ₹ 42 ಕೋಟಿ ದಂಡ ವಿಧಿಸಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ 2008ರಲ್ಲಿ ವಿಶ್ವವಿದ್ಯಾಲಯ ಸುಪ್ರೀಂ ಕೋರ್ಟ್‌ನ ಹಸಿರುಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಪೀಠ ದಂಡದ ಮೊತ್ತವನ್ನು ₹ 14.5 ಕೋಟಿಗೆ ಇಳಿಸಿತ್ತು. ದಂಡದ ಮೊತ್ತ ಪಾವತಿಸಲು ರಾಜ್ಯ ಸರ್ಕಾರ ₹ 11 ಕೋಟಿ ನೆರವು ನೀಡಿತ್ತು. ಆದರೂ, ಕೇಂದ್ರ ಸರ್ಕಾರ ಕೆಲವು ವರ್ಷಗಳ ಕಾಲ ದಂಡ ಪಾವತಿ ಪ್ರಕ್ರಿಯೆಯನ್ನೇ ಆರಂಭಿಸಿರಲಿಲ್ಲ. ಎರಡು ದಿನಗಳ ಹಿಂದೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಕಾರಿ ಅಂಜನ್‌ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ, ಕ್ಯಾಂಪಸ್‌ ಗಡಿ ಪರಿಶೀಲನೆ ನಡೆಸಿದೆ. ದೆಹಲಿಗೆ ತೆರಳಿದ ತಂಡ ವರದಿ ನೀಡಿದ ನಂತರ ಸರ್ಕಾರ ದಂಡ ಕಟ್ಟಲು ಸೂಚಿಸಬೇಕಿದೆ. ವರದಿ ನೀಡುವುದನ್ನೇ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.

‘ಕ್ಯಾಂಪಸ್‌ ಸ್ವಂತವಾಗದ ಕಾರಣ ವಿವಿಧ ಶೈಕ್ಷಣಿಕ ವಿಭಾಗಗಳು, ಹಾಸ್ಟೆಲ್‌, ಕ್ರೀಡಾಂಗಣ ಸೇರಿ ಯಾವುದೇ ಅಭಿವೃದ್ಧಿ ಮಾಡಲು ನಿಯಮಗಳು ಅಡ್ಡಿಯಾಗಿದ್ದವು. ಸಾಕಷ್ಟು ಕಿರಿಕಿರಿ ಅನುಭವಿಸಿದ್ದೇವೆ. ಇನ್ನಾದರೂ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯುವ ನಿರೀಕ್ಷೆ ಮೂಡಿದೆ’ ಎನ್ನುತ್ತಾರೆ ಕೇಂದ್ರ ಸರ್ಕಾರದ ತಂಡದ ಜತೆ ಸಮನ್ವಯ ಸಾಧಿಸಲು ರಚಿಸಿದ್ದ ವಿಶ್ವವಿದ್ಯಾಲಯ ಸಮಿತಿಯ ಸದಸ್ಯ ಪ್ರೊ.ಭೋಜ್ಯಾ ನಾಯ್ಕ.

₹ 3.5 ಕೋಟಿ ನೆರವಿಗೆ ಮೊರೆ

ಸುಪ್ರೀಂ ಕೋರ್ಟ್‌ ಹಸಿರು ಪೀಠದ ಸೂಚನೆಯಂತೆ ಕುವೆಂಪು ವಿಶ್ವವಿದ್ಯಾಲಯ ಕೇಂದ್ರ ಸರ್ಕಾರಕ್ಕೆ ₹ 14.5 ಕೋಟಿ ದಂಡ ಪಾವತಿಸಬೇಕಿದೆ. ದಂಡದ ಮೊತ್ತದಲ್ಲಿ ₹ 11 ಕೋಟಿ ಈಗಾಗಲೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ₹ 3.5 ಕೋಟಿ ನೀಡುವಂತೆ ಮತ್ತೆ ರಾಜ್ಯ ಸರ್ಕಾರವನ್ನು ಕೋರಲು ವಿ.ವಿ. ಆಡಳಿತ ಮಂಡಳಿ ಪ್ರಸ್ತಾವ ಸಿದ್ಧಪಡಿಸಿದೆ.

360 ಹೆಕ್ಟೇರ್‌ ಬದಲಿ ಭೂಮಿ ಹಸ್ತಾಂತರ

ವಿಶ್ವವಿದ್ಯಾಲಯದ 89 ಹೆಕ್ಟೇರ್‌ ಕ್ಯಾಂಪಸ್‌ ಭೂಮಿಗೆ ಪರ್ಯಾಯವಾಗಿ ದಂಡದ ಜತೆಗೆ ನಾಲ್ಕು ಪಟ್ಟು ಬದಲಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಹಸಿರುಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಚಿಕ್ಕಮಗಳೂರು ಜಿಲ್ಲೆ ಎನ್‌ಆರ್‌ ಪುರದ ಬಳಿ 360 ಹೆಕ್ಟೇರ್ ಸರ್ಕಾರಿ ಭೂಮಿಯನ್ನು ಸರ್ಕಾರ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು