ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ | ‘ಈಶ್ವರಪ್ಪ ಬಿಜೆಪಿ ನೆರವಿಲ್ಲದೆ ಸ್ಪರ್ಧಿಸಿ ಸಾಮರ್ಥ್ಯ ತೋರಲಿ‘

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸವಾಲು
Published 23 ಮಾರ್ಚ್ 2024, 15:31 IST
Last Updated 23 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ಸಾಗರ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಹಾಳು ಮಾಡಿದ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ಹಾಗೂ ಯಡಿಯೂರಪ್ಪ ಅವರ ನೆರವಿಲ್ಲದೆ ಚುನಾವಣೆಗೆ ನಿಂತು ನಿಜಕ್ಕೂ ತಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸವಾಲು ಹಾಕಿದರು.

ಲೋಕಸಭೆ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಈಶ್ವರಪ್ಪ ಅವರು 25 ಸಾವಿರಕ್ಕೂ ಹೆಚ್ಚು ಮತ ಪಡೆದರೆ ಮಾತ್ರ ಅವರನ್ನು ನಾಯಕ ಎಂದು ಒಪ್ಪಿಕೊಳ್ಳಬಹುದು. ಸಚಿವರಾಗಿ ಅವರು ಈ ಹಿಂದೆ ಮಾಡಿದ ಕೆಟ್ಟ ಕೆಲಸಗಳಿಗೆ ಉತ್ತರ ನೀಡಲು ಜನರು ಕಾಯುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 6500 ಗ್ರಾಮ ಪಂಚಾಯಿತಿಗಳಿಗೆ ಸೋಲಾರ್ ಸೌಲಭ್ಯ ಒದಗಿಸುವ ಯೋಜನೆಗೆ ರಾಜ್ಯಮಟ್ಟದ ಟೆಂಡರ್ ಕರೆಯುವ ಮೂಲಕ ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪಂಚಾಯಿತಿ ಅನುದಾನದ ಹಣ ಈ ಮೂಲಕ ದುರ್ಬಳಕೆಯಾಗಲು ಅವರು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಪಂಚಾಯಿತಿ ಬದಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ವಹಿಸಿಕೊಡಲು ಈಶ್ವರಪ್ಪ ಮುಂದಾಗಿದ್ದರು. ಆ ಸಂಸ್ಥೆಯ ಸಿಬ್ಬಂದಿಯನ್ನು ಪ್ರತಿ ಪಂಚಾಯಿತಿಗೆ ನೇಮಕ ಮಾಡಿ ಪಂಚಾಯಿತಿಯಿಂದಲೇ ವೇತನ ನೀಡುವ ವ್ಯವಸ್ಥೆ ಸಿದ್ಧವಾಗಿತ್ತು. ಸಾಗರದಲ್ಲಿ ಈ ವ್ಯವಸ್ಥೆಗೆ ಪ್ರಬಲವಾದ ಪ್ರತಿರೋಧ ಬಂದ ನಂತರ ಅಂದಿನ ಬಿಜೆಪಿ ಸರ್ಕಾರ ತನಗೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಈ ವ್ಯವಸ್ಥೆಯನ್ನು ರದ್ದುಗೊಳಿಸಿದ್ದನ್ನು ಮರೆಯುವಂತಿಲ್ಲ ಎಂದರು.

ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛತೆ ಕಾರ್ಯದ ಸಲುವಾಗಿ ಟಿಪ್ಪರ್ ವಾಹನ ಖರೀದಿಸುವ ಯೋಜನೆಗೂ ರಾಜ್ಯಮಟ್ಟದ ಟೆಂಡರ್ ಕರೆಯುವ ಮೂಲಕ ಈಶ್ವರಪ್ಪ ಅವರು ಪಂಚಾಯಿತಿ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಸಕಾಲದಲ್ಲಿ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ಆಗದೆ ಇರಲೂ ಅವರೇ ಕಾರಣ ಎಂದು ಆರೋಪಿಸಿದರು.

ತಮ್ಮ ಮಗನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಕುಟುಂಬ ರಾಜಕಾರಣದ ವಿರುದ್ಧ ಈಶ್ವರಪ್ಪ ಮಾತನಾಡುತ್ತಿರುವುದು ವಿಪರ್ಯಾಸದ ಸಂಗತಿ. ಬಿಜೆಪಿಯಲ್ಲಿನ ಲೋಪಗಳ ಬಗ್ಗೆ ಬಸವರಾಜ ಪಾಟೀಲ ಯತ್ನಾಳ ಅವರು ಧ್ವನಿ ಎತ್ತಿದಾಗ ಈಶ್ವರಪ್ಪ ಅವರೇಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.

ಪ್ರಮುಖರಾದ ಗಣಪತಿ ಹೆನಗೆರೆ, ನಾಗರಾಜ ಮಜ್ಜಿಗೆರೆ, ಸ್ವಾಮಿ ಗೌಡ್ರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT