ಮಂಗಳವಾರ, ಆಗಸ್ಟ್ 11, 2020
24 °C
ಸರ್ಕಾರದ ಆದೇಶ ಉಲ್ಲಂಘಿಸಿ ದುಬಾರಿ ಬೆಲೆಗೆ ಖರೀದಿ: ವಿರೋಧ ಪಕ್ಷಗಳ ಆರೋಪ

ಶಿವಮೊಗ್ಗ | ವೈದ್ಯಕೀಯ ಪರಿಕರಗಳ ಖರೀದಿ: ಪಾಲಿಕೆಯಲ್ಲೂ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊರೊನಾ ನಿಯಂತ್ರಣದ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಸರ್ಕಾರದ ಸುತ್ತೋಲೆಗಳನ್ನು ನಿರ್ಲಕ್ಷಿಸಿರುವ ನಗರ ಪಾಲಿಕೆ ದುಪ್ಪಟ್ಟು ಬೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಖರೀದಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. 

ನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಚ್.ಸಿಯೋಗೀಶ್, ದುಬಾರಿ ಬೆಲೆಯಲ್ಲಿ ಪರಿಕರಗಳನ್ನು ಖರೀದಿ ಮಾಡಲಾಗಿದೆ. ಎನ್ 95 ಗುಣಮಟ್ಟದ ಮಾಸ್ಕ್‌ ದರ ₹ 245 ಇರಬೇಕು. ಪಾಲಿಕೆ ₹ 315, ₹ 385ರಂತೆ ಖರೀದಿಸಲಾಗಿದೆ. ಸ್ಯಾನಿಟೈಸರ್ ₹ 180 ಇದೆ. ₹ 235ಕ್ಕೆ ಅದೇ ರೀತಿ ಕೈಗವುಸು ಬಾಕ್ಸ್ ಒಂದಕ್ಕೆ ₹ 450 ಕೊಟ್ಟು ಖರೀದಿಸಲಾಗಿದೆ. ಹಾಗಾಗಿ, ಕೋವಿಡ್ ನಿರ್ವಹಣೆಗೆ ಖರ್ಚಾದ ಲೆಕ್ಕಪತ್ರ ಸಭೆಯಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಸಿ.ನಾಯ್ಕ್, ರಮೇಶ್ ಹೆಗ್ಡೆ, ಜೆಡಿಎಸ್ ಸದಸ್ಯ ನಾಗರಾಜ ಕಂಕಾರಿ, ಬಿಜೆಪಿ ಸದಸ್ಯರಾದ ಗನ್ನಿಶಂಕರ್, ವಿಶ್ವನಾಥ್  ಅವರು ಖರೀದಿಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ಕೊವೀಡ್ ನಿಯಂತ್ರಣದ ಸಮಯದಲ್ಲಿ ಟೆಂಡರ್ ನಿಯಮದ ಅನುಸಾರವೇ ತ್ವರಿತವಾಗಿ ಖರೀದಿ ಮಾಡಲಾಗಿದೆ.  ಯಾವುದೇ ಲೋಪ ಎಸಗಿಲ್ಲ. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಯುಕ್ತರ ಉತ್ತರಕ್ಕೆ ಒಪ್ಪದ ವಿರೋಧ ಪಕ್ಷದ ಸದಸ್ಯರು ಕೊರೊನಾ ನಿರ್ವಹಣೆಗೆ ಖರ್ಚು ಮಾಡಲಾದ ಲೆಕ್ಕ ಪತ್ರಗಳನ್ನು ಸಭೆಗೆ ಮಂಡಿಸಬೇಕು ಎಂದು ಪಟ್ಟು ಹಿಡಿದರು.

14 ದಿನಗಳು ಸೀಲ್‌ಡೌನ್‌ ಕಡ್ಡಾಯ: ಕೊರೊನಾ ಸೋಂಕು ಪತ್ತೆಯಾದ ಪ್ರದೇಶಗಳನ್ನು 14 ದಿನಗಳು ಸೀಲ್‌ಡೌನ್‌ ಮಾಡಲಾಗುತ್ತಿದೆ.ಆ ಅವಧಿಯಲ್ಲಿ  ಹೊಸ ಪ್ರಕರಣ ಬೆಳಕಿಗೆ ಬಾರದಿದ್ದರೆ  ಸೀಲ್‌ಡೌನ್‌ ತೆರವುಗೊಳಿಸಲಾಗುವುದು. ಸೋಂಕು ಕಂಡುಬಂದ ಮನೆಯ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ಚಟುವಟಿಕೆಗೆ ರಹಿತ ಪ್ರದೇಶ ಎಂದು ಗುರುತಿಸಲಾಗುವುದು. ಸೋಂಕು ಹರಡದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಸಭೆಗೆ ವಿವರಿಸಿದರು.

ಸೀಲ್‌ಡೌನ್‌ ಪ್ರದೇಶದಲ್ಲಿ ಸಿಲುಕಿದ ಬಡವರಿಗೆ ಅಗತ್ಯ  ಜೀವನಾವಶ್ಯಕ ವಸ್ತುಗಳನ್ನು ನೀಡುವಂತೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಒತ್ತಾಯಿಸಿದರು. ಅದೇ ರೀತಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಊಟ ನೀಡುವಂತೆ ಸದಸ್ಯ ನಾಗರಾಜ ಕಂಕಾರಿ ಆಗ್ರಹಿಸಿದರು.

ಮೇಯರ್ ಸುವರ್ಣಾ ಶಂಕರ್,  ಉಪ ಮೇಯರ್ ಸುರೇಖಾ ಮುರಳೀಧರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು