ಶುಕ್ರವಾರ, ಜುಲೈ 30, 2021
20 °C

ಹೆಚ್ಚುತ್ತಲೇ ಇದೆ ಕಾಲುಸಂಕಗಳಿಗೆ ಬೇಡಿಕೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಎರಡು ವರ್ಷಗಳ ಹಿಂದೆ ಶಾಲಾ ವಿದ್ಯಾರ್ಥಿನಿ ಸೇರಿ ಕಾಲುಸಂಕದಿಂದ ಬಿದ್ದು ಇಬ್ಬರು ಮೃತಪಟ್ಟ ನಂತರ ಜಿಲ್ಲೆಯಲ್ಲಿ ಸಾಕಷ್ಟು ಹೊಸ ಸಂಕಗಳು ನಿರ್ಮಾಣವಾಗಿವೆ. ಇನ್ನೂ ಸುಮಾರು 300 ಸಂಕಗಳಿಗೆ ಬೇಡಿಕೆಯಿದೆ.

ಹೊಸನಗರ ತಾಲ್ಲೂಕಿನ ಮುಂಬಾರಿನಲ್ಲಿ ಕೂಲಿ ಕಾರ್ಮಿಕ ವೆಂಕಟನಾಯ್ಕ, ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೆತಾಳು ದೊಡ್ಲಿಮನೆ ಹಳ್ಳದಲ್ಲಿ ಗುಡ್ಡೇಕೇರಿಯ ಶಾಲೆ ವಿದ್ಯಾರ್ಥಿನಿ ಆಶಿಕಾ ಕಾಲುಸಂಕದಿಂದ ಬಿದ್ದು ಮೃತಪಟ್ಟಿದ್ದರು. ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾಲುಸಂಕಗಳ ನಿರ್ಮಾಣಕ್ಕೆ ₹ 3 ಕೋಟಿ ನೀಡಿದ್ದರು. ಆ ಹಣದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 26 ಕಡೆ ಸಂಕಗಳನ್ನು ನಿರ್ಮಿಸಲಾಗಿತ್ತು. ಇನ್ನೂ 274 ಕಾಲುಸಂಕಗಳನ್ನು ನಿರ್ಮಿಸಲು ₹ 14.39 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಉದ್ಯೋಗ ಖಾತ್ರಿ ಹಾಗೂ 14ನೇ ಹಣಕಾಸು ನಿಧಿ ಬಳಸಿಕೊಂಡು 150ಕ್ಕೂ ಹೆಚ್ಚು ಸಂಕಗಳನ್ನು ನಿರ್ಮಿಸಲಾಗಿದೆ.

ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ, ತೊರೆ ದಾಟಲು ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಜನ ಈಗಲೂ ಕಟ್ಟಿಗೆ, ಅಡಿಕೆ ದಬ್ಬೆ, ಮರದ ತುಂಡು, ಹಗ್ಗ, ಚಪ್ಪಡಿಗಳನ್ನು ಬಳಸಿ, ಕಟ್ಟಿಕೊಂಡ ಸಂಕಗಳನ್ನೇ ಅವಲಂಬಿಸಿದ್ದಾರೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಐದಾರು ಇವೆ. ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪರಿಣಾಮ ಸಣ್ಣಪುಟ್ಟ ಹಳ್ಳ, ಝರಿ, ತೊರೆಗಳೂ ಭೋರ್ಗರೆಯುತ್ತವೆ. ಇಂತಹ ಸಮಯದಲ್ಲಿ ಮುಖ್ಯರಸ್ತೆ, ಜಮೀನು, ತೋಟ, ಶಾಲೆ, ಮನೆಗಳನ್ನು ತಲುಪಲು, ಆಸ್ಪತ್ರೆ, ಕಚೇರಿ ಕೆಲಸಗಳಿಗೆ ಪಟ್ಟಣಕ್ಕೆ ಹೋಗಿ ಬರುವ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ಈ ಕಾಲುಸಂಕಗಳೇ ಗತಿ.

‘ಉದ್ಯೋಗ ಖಾತ್ರಿ, 14ನೇ ಹಣಕಾಸು ನಿಧಿಯನ್ನು ಬಳಸಿಕೊಂಡು ಆಯಾ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಕಾಲು ಸಂಕ ನಿರ್ಮಿಸುತ್ತಿವೆ. ಸರ್ಕಾರದ ನೆರವು ದೊರೆತರೆ ದೊಡ್ಡ ಹಳ್ಳ, ನದಿ ಪಾತ್ರದ ಸಂಕಗಳನ್ನು ಪೂರ್ಣಗೊಳಿಸಬಹುದು’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ.

ಮಳೆಗಾಲದ ಮೂರು ತಿಂಗಳು ಸಂಕಗಳ ಆವಶ್ಯಕತೆ ಇರುತ್ತದೆ. ಹಾಗಾಗಿ, ಬಹುತೇಕ ಕಡೆ ಶಾಲೆಗಳಿಗೆ ಮಕ್ಕಳು ಹೋಗಿಬರುವ ಮಾರ್ಗದಲ್ಲಿ ಸಂಕಗಳ ನಿರ್ಮಾಣಕ್ಕೆ ಸ್ಥಳೀಯ ಪಂಚಾಯಿತಿಗಳು ಆದ್ಯತೆ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು