ಬುಧವಾರ, ಜುಲೈ 28, 2021
23 °C
ತಪ್ಪಿಸ್ಥರ ರಕ್ಷಿಸಲು ಸಚಿವರ ಹುನ್ನಾರ: ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪ

ಶಿವಮೊಗ್ಗ: ವಾಜಪೇಯಿ ಬಡಾವಣೆ ಹಗರಣಕ್ಕೆ ಎಳ್ಳುನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರಾಭಿವೃದ್ದಿ ಪ್ರಾಧಿಕಾರ ನಿರ್ಮಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ಹಗರಣದ ತನಿಖೆಯ ವರದಿ ಪರಿಶೀಲಿಸುವ ಮೊದಲೇ ನಗರಾಭಿವೃದ್ಧಿ ಸಚಿವರು ಹಿಂದಕ್ಕೆ ಪಡೆಯುವ ಹೇಳಿಕೆ ಹಗರಣ ಮುಚ್ಚಿ ಹಾಕುವ ಹುನ್ನಾರ  ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.

ವಾಜಪೇಯಿ ಬಡಾವಣೆಯಲ್ಲಿ ನಡೆದಿದ್ದ ಹಗರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲಾಗಿತ್ತು. ಈಗ ಲೋಕಾಯುಕ್ತ ವರದಿ ಬಿಡುಗಡೆಯಾಗಿದೆ. ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿರುವುದು ಸಾಬೀತಾಗಿದೆ. ನಿಯಮಗಳನ್ನು ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಸರ್ಕಾರಕ್ಕೆ ಸಲ್ಲಿಸುವ ಮೊದಲೇ ಪ್ರಕರಣ ವಾಪಸ್‌ ಪಡೆಯುವ ಸಂಚು ನಡೆದಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಈಗಾಗಲೇ ವರದಿಯಲ್ಲಿ ಬೆಚ್ಚಿ ಬೀಳುವ ಸಂಗತಿಗಳು ಬಯಲಾಗಿವೆ. ಬಿಜೆಪಿ ಕಾರ್ಯಕರ್ತರಿಗೆ, ಶ್ರೀಮಂತರಿಗೆ, ಪ್ರಾಧಿಕಾರದ ಸಿಬ್ಬಂದಿಗೆ, ಒಂದೇ ಕುಟುಂಬದ ಹಲವರಿಗೆ, ಅಪ್ರಾಪ್ತರಿಗೆ, ವಿಳಾಸವೇ ಇಲ್ಲದವರಿಗೆ, ಸರ್ಕಾರಿ ನೌಕರರಿಗೆ, ಈಗಾಗಲೇ ಹಲವು ಮಹಲುಗಳು ಇರುವವರಿಗೆ ನಿಯಮಗಳನ್ನು ಗಾಳಿಗೆ ತೂರಿ ಕೊಟ್ಯಂತರ ಬೆಲೆ ಬಾಳುವ ನಿವೇಶನಗಳನ್ನು ಅಕ್ರಮವಾಗಿ ವಿತರಿಸಲಾಗಿದೆ. ವಿವೇಚನಾ ಕೋಟಾದಡಿ 142 ಜನರಿಗೆ ನಿವೇಶನ ನೀಡಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸರ್ಕಾರ ಪ್ರಕರಣ ಹಿಂದಕ್ಕೆ ಪಡೆದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಕಾನೂನು ಮೊರೆ ಹೋಗಲಿದೆ ಎಂದು ಎಚ್ಚರಿಸಿದರು.

ಲೋಕಾಯುಕ್ತ ತನಿಖೆ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಎಸ್.ಜ್ಞಾನೇಶ್ವರ್ ಮತ್ತು ಎಸ್.ದತ್ತಾತ್ರಿ ಅವಧಿಯಲ್ಲಿ ಕಾಲಾವಧಿಯಲ್ಲಿ ಈ ಹಗರಣಗಳು ನಡೆದಿವೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡವೂ ಇದೆ. ತಮ್ಮ ಬೆಂಬಲಿಗರನ್ನು ಹಗರಣದಿಂದ ರಕ್ಷಿಸುವ ಪ್ರಯತ್ನದ ಭಾಗವಾಗಿ ನಗರಾಭಿವೃದ್ಧಿ ಸಚಿವ ಸಚಿವ ಬೈರತಿ ಬಸವರಾಜ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ಹಗರಣದ ವಿವಾದ ಹಿಂಪಡೆದು ಅರ್ಹ ಅರ್ಜಿದಾರರಿಗೆ ನಿವೇಶನ ನೀಡುತ್ತೇವೆ ಎಂದಿದ್ದಾರೆ. ಇದು ಹಗರಣ ಮುಚ್ಚಿ ಹಾಕುವ ಯೋಚನೆ. ತಕ್ಷಣ ಲೋಕಾಯುಕ್ತ ವರದಿ ಸರ್ಕಾರಕ್ಕೆ ಸಲ್ಲಿಸಬೇಕು. ಅದರ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಿಜವಾದ ಫಲಾನುಭವಿಗಳಿಗೆ ನಿವೇಶನ ಸಿಗಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ‘ಸೂಡಾ’ ಮಾಜಿ ಅಧ್ಯಕ್ಷ ಇಸ್ಮಾಯಿಲ್‌ ಖಾನ್, ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಆರ್.ಸಿ.ನಾಯಕ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಶಾಮೀರಾಖಾನ್, ಕಾಂಗ್ರೆಸ್‌ ಮುಖಂಡರಾದ ದೀಪಕ್‌ಸಿಂಗ್, ಆಸೀಫ್, ಸುನೀಲ್, ರಘು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು