ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌ ಸಿಟಿ‘ ಕಾಮಗಾರಿಗಳಿಂದಲೇ ಶಿವಮೊಗ್ಗ ಅದ್ವಾನ

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸುಂದರೇಶ್ ಆರೋಪ
Last Updated 22 ಮೇ 2022, 2:48 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸ್ಮಾರ್ಟ್‌ ಸಿಟಿ’ಯ ಅವೈಜ್ಞಾನಿಕ ಕಾಮಗಾರಿಗಳೇ ನಗರದ ಪ್ರವಾಹ ಪರಿಸ್ಥಿತಿಗೆ ಕಾರಣ. ಕಾಮಗಾರಿಗಳಲ್ಲೂ ಭಾರಿ ಭ್ರಷ್ಟಾಚಾರ ನಡೆದಿದೆ. ನೂರಾರು ಕೋಟಿ ಲೂಟಿಯಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಆರೋಪಿಸಿದರು.

ಮೂರು ದಿನಗಳಿಂದ ಸುರಿದ ಮಳೆಗೆ ಬಹುತೇಕ ಬಡಾವಣೆಗಳಲ್ಲಿ ನೀರು ನುಗ್ಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಸಾಗದೇ ರಸ್ತೆ ಮೇಲೆ ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲವೂ ಅವೈಜ್ಞಾನಿಕವಾಗಿವೆ. ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿವೆ. ಪಾಲಿಕೆ ಸೇರಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಶಾಸಕರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎರಡು ದಿನಗಳ ಸತತ ಮಳೆಗೆ ಹಲವು ಮನೆಗಳು ಕುಸಿದಿವೆ. ಮನೆ ಸಮಗ್ರಿಗಳು ಕೊಚ್ಚಿ ಹೋಗಿವೆ. ಸಾವಿರಾರು ನಾಗರಿಕರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಆದರೆ, ಆಡಳಿತ ನಡೆಸುತ್ತಿರುವ ಬಿಜೆಪಿ ಮಸೀದಿಗಳಲ್ಲಿ ದೇವರ ವಿಗ್ರಹಗಳನ್ನು ಹುಡುಕುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಸುಂದರೇಶ್‌ ಕುಟುಕಿದರು.

ನಗರದ ಜನರು ಚುನಾಯಿತ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಆಡಳಿತ ಯಂತ್ರ ಚುರುಕುಗೊಳ್ಳಬೇಕು. ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು. ಬಡವರಿಗೆ ಆಹಾರದ ಕಿಟ್ ವಿತರಿಸಬೇಕು. ಅವೈಜ್ಞಾನಿಕವಾಗಿ ವಿಧಿಸಿರುವ ಆಸ್ತಿ ತೆರಿಗೆ, ನೀರಿನ ಕಂದಾಯ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಚಂದ್ರಭೂಪಾಲ್, ರಾಮೇಗೌಡ,ವೈ.ಎಚ್. ನಾಗರಾಜ್, ಡಾ.ಶ್ರೀನಿವಾಸ ಕರಿಯಣ್ಣ, ವಿನಾಯಕ ಮೂರ್ತಿ, ಚಂದನ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT