ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜವಾದ ಶಾಶ್ವತ, ವಿಕಸಿತ ಸಿದ್ಧಾಂತ

‘ಗಾಳಿ ಬೆಳಕಿನ ಪಯಣಿಗರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಟರಾಜ್‌ ಹುಳಿಯಾರ್‌
Published 25 ಮೇ 2024, 16:23 IST
Last Updated 25 ಮೇ 2024, 16:23 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಸಮಾಜವಾದ ಜನರ ನಡುವೆ ಮುಕ್ತವಾಗಿ ಸೃಷ್ಟಿಯಾಗಿದೆ. ಹೊಸ ತತ್ವಗಳಿಗೆ ತೆರೆದುಕೊಂಡು ಶಾಶ್ವತವಾಗಿ ವಿಕಸನದ ಹಾದಿಯಲ್ಲಿರುತ್ತದೆ’ ಎಂದು ಸಾಹಿತಿ ನಟರಾಜ್‌ ಹುಳಿಯಾರ್‌ ಅಭಿಪ್ರಾಯಪಟ್ಟರು.

ಬಂಟರ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸುವ್ವಿ ಪಬ್ಲಿಕೇಷನ್ಸ್‌, ಸಾಹಿತ್ಯಾಸಕ್ತರ ಬಳಗದ ಸಹಯೋಗದಲ್ಲಿ ಶನಿವಾರ ಹಿರಿಯ ಸಾಹಿತಿ ಜೆ.ಕೆ.ರಮೇಶ್‌ ಬರೆದಿರುವ ‘ಗಾಳಿ ಬೆಳಕಿನ ಪಯಣಿಗರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಗಾಂಧಿವಾದ, ಸಮಾಜವಾದ ತತ್ವಗಳಿಗೆ ಕೊನೆ ಇಲ್ಲ. ಕೋಮುವಾದ ಸಿದ್ಧಾಂತ ಅದೊಂದು ಮುಚ್ಚಿರುವ ಅಧ್ಯಾಯ. ಅಲ್ಲಿ ಹೊಸ ವಿಚಾರ, ಆದರ್ಶಗಳಿಗೆ ಬೆಲೆ ಇರುವುದಿಲ್ಲ. ನೆಪ ಮಾತ್ರಕ್ಕೆ ದೇಶದಲ್ಲಿ ಶೇಕಡಾ 33 ರಷ್ಟು ಮೀಸಲಾತಿ ಕೊಡುವ ಹುಮ್ಮಸ್ಸು ತೋರಿಸುತ್ತಾರೆ. ಆದರೆ ಪಕ್ಷದೊಳಗೆ ಕೊಡಬೇಕು ಎಂಬ ನಿಯಮಗಳನ್ನು ಮಾತ್ರ ಪ್ರತಿಪಾದಿಸುವುದಿಲ್ಲ’ ಎಂದು ಕುಟುಕಿದರು.

‘ಲೋಹಿಯಾ, ಶಾಂತವೇರಿ ಗೋಪಾಲಗೌಡರು ಸಮಾಜದೊಳಗೆ ದೊಡ್ಡ ಕನಸುಗಳನ್ನು ಬಿತ್ತಿ ಹೋಗಿದ್ದಾರೆ. ಸಮಾಜದೊಳಗಿರುವ ಅಸಮಾನತೆ ನಿವಾರಣೆಗಾಗಿಯೇ ವಿಕೇಂದ್ರೀಕರಣ ವ್ಯವಸ್ಥೆಗಾಗಿ ಪ್ರತಿಪಾದಿಸಿದ್ದರು. ತಮ್ಮ ಜೀವನ ಪರ್ಯಂತ ಅದಕ್ಕಾಗಿಯೇ ಹೋರಾಡಿದರು. ಕರಾವಳಿಯಲ್ಲಿ ಕೋಮು ಸಂಘರ್ಷ ನಡೆದರೆ ವಿಶೇಷ ಎನಿಸುವುದಿಲ್ಲ. ಆದರೆ ಸಮಾಜವಾದದ ಪ್ರಯೋಗಶಾಲೆ ಶಿವಮೊಗ್ಗದಲ್ಲಿ ಕೋಮು ಸಂಘರ್ಷ ನಡೆದರೆ ಅನುಮಾನ ಸೃಷ್ಟಿಯಾಗುತ್ತದೆ’ ಎಂದರು.

‘ಸಮಾಜವಾದಿಗಳ ಕುರಿತ ಪುಸ್ತಕ ಹೊರ ತಂದಿರುವುದು ಖುಷಿಯ ಸಂಗತಿ. ಕಿರಿಯರಿಗೆ ಇದೊಂದು ಸ್ಫೂರ್ತಿಯಾಗಿದೆ. ನಮ್ಮ ಮನೆಗೆ ಬರುತ್ತಿದ್ದ ಹಿರಿಯ ಸಮಾಜವಾದಿಗಳ ಕಥೆ ಕೇಳಿದಾಗ ರೋಮಾಂಚನ ಆಗುತ್ತಿತ್ತು. ಡಿ.ಎಸ್.‌ನಾಗಭೂಷಣ್‌ ಸಂಪಾದಿಸಿದ ‘ನಮ್ಮ ಸಮಾಜವಾದಿಗಳು’ ಪುಸ್ತಕದಲ್ಲಿ ಜಿಲ್ಲೆಯ ಅನೇಕರ ಪರಿಚಯ ಮಾಡಲಾಗಿತ್ತು. ಇದೀಗ ‘ಗಾಳಿ ಬೆಳಕಿನ ಪಯಣಿಗರು’ ಪುಸ್ತಕದಲ್ಲಿ ಅಂತಹ ಅನೇಕರ ಪರಿಚಯ ಇದೆ’ ಎಂದು ಕವಯಿತ್ರಿ ಸವಿತಾ ನಾಗಭೂಷಣ್‌ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ವೇದಿಕೆಯಲ್ಲಿ ಲೇಖಕ ಜೆ.ಕೆ.ರಮೇಶ್‌, ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್‌ ಶೆಟ್ಟಿ, ಪ್ರಕಾಶಕ ಸುನಿಲ್‌ ಕುಮಾರ್‌, ಸಾಹಿತ್ಯಾಸಕ್ತರ ಬಳಗದ ಕಡಿದಾಳ್‌ ದಯಾನಂದ, ಬಿ.ಗಣಪತಿ ಉತ್ತುಂಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT