ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಓದಿದ ಶಾಲೆ ಉಳಿಸಲು ವಿಶೇಷ ಅನುದಾನ: ಶಾಸಕ ಆರಗ ಜ್ಞಾನೇಂದ್ರ

Published 18 ಡಿಸೆಂಬರ್ 2023, 14:47 IST
Last Updated 18 ಡಿಸೆಂಬರ್ 2023, 14:47 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕುವೆಂಪು ಅವರು ಓದಿದ ಶಾಲೆಯನ್ನು ಉಳಿಸಲು ವಿಶೇಷ ಅನುದಾನ ಒದಗಿಸಲಾಗಿದೆ. ತಾಲ್ಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಒಂದೂವರೆ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ 52 ಕೊಠಡಿಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ (ಕುವೆಂಪು) ಶಾಲೆಯಲ್ಲಿ ₹ 51 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕೊಠಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ವ್ಯಕ್ತಿತ್ವವನ್ನು ಯುವ ಪೀಳಿಗೆಗೆ ತಿಳಿಸಿಕೊಡು ಕೆಲಸವಾಗಬೇಕು. ಸರ್ಕಾರಿ ಶಾಲೆಗಳು ಶೇ 100 ಫಲಿತಾಂಶ ನೀಡುತ್ತಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಕುವೆಂಪು ಅವರು ಓದಿದ ಶಾಲೆಯ ವಿನ್ಯಾಸ ಬದಲಾಯಿಸುವುದು ಸರಿಯಲ್ಲ. ಶಿಕ್ಷಣ ಇಲಾಖೆಯು ಶಾಲೆಯನ್ನು ಕುವೆಂಪು ಶಾಲೆಯೆಂದು ಅಧಿಕೃತವಾಗಿ ಘೋಷಿಸಬೇಕು. ಪಾಠಕ್ಕೆ ಸ್ಥಳಾವಕಾಶದ ಕೊರತೆಯಾದರೆ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು. 125 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯನ್ನು ವಸ್ತು ಸಂಗ್ರಹಾಲಯ ಮಾದರಿಯಲ್ಲಿ ಜೋಪಾನ ಮಾಡಬೇಕು. ಜನಪ್ರತಿನಿಧಿಗಳು ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್‌ ತಾಕೀತು ಮಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್‌, ಉಪಾಧ್ಯಕ್ಷ ರಹಮತ್‌ ಉಲ್ಲಾ ಅಸಾದಿ,  ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸಂದೇಶ ಜವಳಿ, ಜ್ಯೋತಿ, ಬಿ.ಗಣಪತಿ, ಮುಖ್ಯೋಪಾಧ್ಯಾಯ ನಾಗರಾಜ್‌, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಗಂಗಮ್ಮ, ನಿವೃತ್ತ ಶಿಕ್ಷಕಿ ಭಾರತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT