ಬುಧವಾರ, ಆಗಸ್ಟ್ 10, 2022
20 °C
ಖಾಸಗಿ ಶಾಲೆಗಳಿಗೆ ತಕ್ಕ ಪಾಠ ಕಲಿಸಲು ಶಿಕ್ಷಣ ಇಲಾಖೆ ಹೊಸ ಅಸ್ತ್ರ

ಶಿವಮೊಗ್ಗ: ಶುಲ್ಕಕ್ಕೆ ಪೀಡಿಸಿದರೆ ಬಿಇಒ ಕಚೇರಿಯಿಂದಲೇ ಪ್ರವೇಶಪತ್ರ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶುಲ್ಕ ಭರಿಸಿಲ್ಲವೆಂಬ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಲ್‌ಟಿಕೆಟ್‌ ನೀಡಲು ನಿರಾಕರಿಸುವ ಖಾಸಗಿ ಶಾಲೆಗಳಿಗೆ ತಕ್ಕ ಪಾಠ ಕಲಿಸಲು ಶಿಕ್ಷಣ ಇಲಾಖೆ ಹೊಸ ಅಸ್ತ್ರ ಪ್ರಯೋಗಿಸಿದೆ.

ಜುಲೈ 19 ಮತ್ತು 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ಜಿಲ್ಲೆಯ 150 ಪರೀಕ್ಷಾ ಕೇಂದ್ರಗಳಲ್ಲಿ 24,771 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ಕಾರಣದಿಂದ ಹಲವು ಮಕ್ಕಳ ಫೋಷಕರು ದುಡಿಮೆ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಮಕ್ಕಳ ಶುಲ್ಕ ಭರಿಸಲು ಸಾಧ್ಯವಾಗಿಲ್ಲ. ಕೆಲವು ಖಾಸಗಿ ಶಾಲೆಗಳು ತರಗತಿಗಳನ್ನು ಸರಿಯಾಗಿ ನಡೆಸದೆ, ಆನ್‌ಲೈನ್‌ ಶಿಕ್ಷಣಕ್ಕೂ ಒತ್ತು ನೀಡದೆ ಇದ್ದರೂ ಶಾಲಾ ಶುಲ್ಕ ವಸೂಲಿ ಮಾಡುತ್ತಿವೆ. ಎರಡು ದಿನಗಳು ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೇ ನೆಪವಾಗಿಟ್ಟುಕೊಂಡು ಬಾಕಿ ಶುಲ್ಕ ಪಾವತಿಸುವಂತೆ ಒತ್ತಡ ಹಾಕುತ್ತಿವೆ. ಪಾವತಿಸದ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಲ್‌ಟಿಕೆಟ್‌ ನೀಡಲು ನಿರಾಕರಿಸುತ್ತಿವೆ.

ಖಾಸಗಿ ಶಾಲೆಗಳ ಇಂತಹ ಧೋರಣೆ ವಿರುದ್ಧ ಜಿಲ್ಲೆಯಲ್ಲೂ ಹಲವು ಪೋಷಕರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇತ್ತ ವಿದ್ಯಾರ್ಥಿಗಳ ಹಾಲ್‌ಟಿಕೆಟ್‌ಗಳನ್ನು ಆಯಾ ಶಾಲೆಯ ಮುಖ್ಯಶಿಕ್ಷಕರ ಮೇಲ್‌ಗೆ ರವಾನಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಲ್‌ಟಿಕೆಟ್‌ ಡೌನ್‌ಲೋಡ್‌ ಮಾಡಿ ಪ್ರತಿ ವಿದ್ಯಾರ್ಥಿಗೂ ನೀಡುವಂತೆ ಸೂಚಿಸಿದೆ. ಶುಲ್ಕ ಕಟ್ಟುವಂತೆ ಸತಾಯಿಸುವ ಶಾಲೆಗಳ ಹಾಲ್‌ಟಿಕೆಟ್‌ಗಳನ್ನು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲೇ ಡೌನ್‌ಲೋಡ್‌ ಮಾಡಿಕೊಂಡು ನೇರವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದರಿಂದ ಶುಲ್ಕ ಕಟ್ಟಲು ಸಾಧ್ಯವಾಗದೆ ಹಾಲ್‌ಟಿಕೆಟ್‌ ಪಡೆಯಲು ಪರಿತಪಿಸುತ್ತಿದ್ದ ಪೋಷಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

‘ಕೊರೊನಾ ಸಮಯದಲ್ಲಿ ಪೋಷಕರು ಸಂಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಇಂತಹ ಸಮಯದಲ್ಲಿ ಶುಲ್ಕವನ್ನೇ ನೆಪವಾಗಿಟ್ಟುಕೊಂಡು ಪರೀಕ್ಷೆ ಬರೆಯಲು ಹಾಲ್‌ಟಿಕೆಟ್‌ ನೀಡದಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ. ದೂರು ಬರುವ ಶಾಲೆಗಳ ವಿದ್ಯಾರ್ಥಿಗಳಿಗೆ ಇಲಾಖೆ ಅಧಿಕಾರಿಗಳೇ ಹಾಲ್‌ಟಿಕೆಟ್‌ ನೀಡುವರು. ವಿದ್ಯಾರ್ಥಿಗಳು ಯಾವ ಒತ್ತಡಕ್ಕೂ ಒಳಗಾಗದೆ ಪರೀಕ್ಷೆ ಬರೆಯಬೇಕು’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಂ.ರಮೇಶ್‌.

ಕೊರೊನಾ ಕಾರಣ ದಿಂದ ಪರೀಕ್ಷೆಯ ಸ್ವರೂಪವೇ ಬದಲಾಗಿದೆ. ಈ ವರ್ಷ ಬಹು ಆಯ್ಕೆ ಮಾದರಿ ಯಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಅಧಿಕಾರಿ, ಸಿಬ್ಬಂದಿ ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. 61 ಮಾರ್ಗಾಧಿಕಾರಿಗಳು, 150 ಸ್ಥಾನಿಕ ಜಾಗೃತದಳ ಅಧಿಕಾರಿಗಳನ್ನು ನೇಮಿಸ ಲಾಗಿದೆ. ಪರೀಕ್ಷಾ ಕಾರ್ಯಕ್ಕೆ 3,967 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಪ್ರಕಾರ ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ವಿಶೇಷ ಕೊಠಡಿಗಳು, ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶದಲ್ಲೇ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಲಾಗಿದೆ. ಅಂದು ಬೆಳಿಗ್ಗೆ 8.30ರಿಂದ ವೈದ್ಯಕೀಯ, ಆಶಾ ಕಾರ್ಯಕರ್ತೆಯರು ತಪಾಸಣೆ ನಡೆಸಲಿದ್ದಾರೆ.

ಪರೀಕ್ಷಾ ಕೊಠಡಿಗಳಲ್ಲಿ ಆರು ಅಡಿ ಅಥವಾ 2 ಮೀಟರ್ ಅಂತರ ಕಾಯ್ದು ಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಯಲ್ಲಿ 12 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರಕ್ಕೆ ಹೋಗದಂತೆ ಸ್ಥಳೀಯವಾಗೇ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಕೆಮ್ಮು, ನೆಗಡಿ, ಜ್ವರ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಪ್ರತಿ ಕೇಂದ್ರದಲ್ಲಿ ಎರಡು ವಿಶೇಷ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು