ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಹಾಗೂ ಪಿಯುನ ಎಲ್ಲ ವಿದ್ಯಾರ್ಥಿಗಳು ಈ ಬಾರಿ ತೇರ್ಗಡೆಯಾಗಿರುವ ಕಾರಣ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು ಸವಾಲಾಗಿದೆ.
ಕೊರೊನಾ ಕಾರಣದಿಂದ ಹೊಸ ಮಾದರಿಯಲ್ಲಿ ಪರೀಕ್ಷೆ ಬರೆದ ಎಲ್ಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗಾಗಿ, ಸಹಜವಾಗಿಯೇ ಪದವಿಪೂರ್ವ ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸರ್ಕಾರಿ ಪಿಯು ಕಾಲೇಜು ಹೌಸ್‌ಫುಲ್: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 22,745 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಎಲ್ಲ ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ. ಹೀಗಾಗಿ ಸರ್ಕಾರ ನಿಗದಿಪಡಿಸಿದ ಪ್ರವೇಶಕ್ಕಿಂತ ಹೆಚ್ಚುವರಿ ಶೇ 20ರಷ್ಟು ಸೀಟುಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದೆ. ಆದರೂ, ಲಭ್ಯ ಸೀಟುಗಳು ಭರ್ತಿಯಾಗಿವೆ. ಕಾಲೇಜಿನಲ್ಲಿ ಪ್ರವೇಶ ಪಡೆಯುವುದಕ್ಕೆ ಪೋಷಕರು ಹರಸಾಹಸ ಮಾಡುತ್ತಿದ್ದಾರೆ.
ಶಿವಮೊಗ್ಗ, ಸಾಗರ, ಸೊರಬ ತಾಲ್ಲೂಕಿನಲ್ಲಿರುವ ಕಾಲೇಜುಗಳಲ್ಲಿ ನಿಗದಿಪಡಿಸಿದ ಸೀಟುಗಳು ಭರ್ತಿಯಾಗಿವೆ. ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಕೋರಿ ಬರುತ್ತಿದ್ದಾರೆ. ಪದವಿಪೂರ್ವ ಶಿಕ್ಷಣದಲ್ಲಿ ಎಲ್ಲ ಕೋರ್ಸ್‌ಗಳಿಗೂ ಸಮಾನ ಬೇಡಿಕೆ ಸೃಷ್ಟಿಯಾಗಿದೆ. ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಬಾರಿ 400 ವಿದ್ಯಾರ್ಥಿಗಳು ಪ್ರಥಮ ಪಿಯುಗೆ ಪ್ರವೇಶ ಪಡೆದಿದ್ದರು. ಈ ಬಾರಿ ಪ್ರವೇಶ ಪಡೆದವರ ಸಂಖ್ಯೆ ಈಗಾಗಲೇ 946 ತಲುಪಿದೆ.
ಎಲ್ಲ ಪ್ರತಿಷ್ಠಿತ ಸರ್ಕಾರಿ ಕಾಲೇಜುಗಳಲ್ಲೂ ಬೇಡಿಕೆ ಇದೆ. ಕಲಾ ಹಾಗೂ ವಾಣಿಜ್ಯ ವಿಭಾಗಗಳಿಗೆ ಹೆಚ್ಚು ವಿದ್ಯಾರ್ಥಿಗಳು ದಾಂಗುಡಿ ಇಟ್ಟಿದ್ದಾರೆ. ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಅರಸಿ ಹೋಗಿದ್ದ ಬಹುಪಾಲು ವಿದ್ಯಾರ್ಥಿಗಳು ಸೀಟು ಸಿಗದೆ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದುಕೊಂಡಿದ್ದಾರೆ ಎನ್ನುತ್ತಾರೆ ಡಿಡಿಪಿಯು ನಾಗರಾಜ್ ಕಾಗಲಕರ್.
***
ಸಂಚಿಯಹೊನ್ನಮ್ಮ ಕಾಲೇಜಿಗೆ ಭಾರಿ ಬೇಡಿಕೆ
ಕೆ.ಎನ್.ಶ್ರೀಹರ್ಷ
ಭದ್ರಾವತಿ: ಈ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸಹಜವಾಗಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಮಾಡಿದೆ.
ತಾಲ್ಲೂಕಿನಲ್ಲಿ ಒಟ್ಟು 7 ಸರ್ಕಾರಿ ಪದವಿಪೂರ್ವ ಕಾಲೇಜುಗಳಿವೆ. ಪ್ರತಿ ವಿಷಯಗಳಿಗೆ ತಲಾ 120 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಅಧಿಕಾರವಿದೆ. ಮೂರು ವರ್ಷಗಳಿಂದ ಕಡಿಮೆ ಇದ್ದ ಪ್ರವೇಶ ಈ ಬಾರಿ ಶೇ 20ರಷ್ಟು ಹೆಚ್ಚಳವಾಗಿದೆ.
ಹಳೇನಗರ ಸಂಚಿಯಹೊನ್ನಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಬೇಡಿಕೆ ಅಧಿಕವಾಗಿದೆ. ಹಿಂದಿನ ಎಲ್ಲ ಸಾಲಿಗಿಂತ ಈ ಬಾರಿ ಶೇ 40ರಷ್ಟು ಅಧಿಕ ಪ್ರವೇಶ ನೀಡಲಾಗಿದೆ ಎನ್ನುತ್ತಾರೆ ಪ್ರಾಂಶುಪಾಲ ಸಿದ್ದಲಿಂಗಮೂರ್ತಿ.
‘ಪೋಷಕರ ಒತ್ತಡ, ಶಿಫಾರಸು ಪತ್ರಗಳು ಅಧಿಕವಾಗಿವೆ. ಆದರೆ, ಪ್ರವೇಶಕ್ಕೆ ತಕ್ಕಂತೆ ಮೂಲಸೌಕರ್ಯ ಹಾಗೂ ಕೊಠಡಿಗಳ ಕೊರತೆ ಇದೆ. ನಿಭಾಯಿಸಲು ಸಿದ್ಧರಿದ್ದೇವೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ 250 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೆಚ್ಚಾದರೆ ಲ್ಯಾಬ್ ಕೊರತೆ ಎದುರಾಗಲಿದೆ. ಬಾಕಿ ಸೀಟ್ ಇರುವ ಇತರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸೇರ್ಪಡೆ ಆಗುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದರು.
ಸೀಟ್ ಹೆಚ್ಚಳಕ್ಕೆ ಅವಕಾಶವಿದೆ: ‘ನ್ಯೂಟೌನ್ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ತಲಾ 120 ಸೀಟ್ ಇವೆ. ಇದರಲ್ಲಿ ಕಲಾ ವಿಭಾಗದಲ್ಲಿ 30, ವಿಜ್ಞಾನ ವಿಭಾಗದಲ್ಲಿ 80 ಹಾಗೂ ವಾಣಿಜ್ಯ ವಿಭಾಗದಲ್ಲಿ 15 ಸೀಟ್ ಇನ್ನು ಉಳಿದಿವೆ’ ಎನ್ನುತ್ತಾರೆ ಪ್ರಾಂಶುಪಾಲ ಡಿ.ಎಫ್.ಕುಟ್ರೆ.
‘ತರೀಕೆರೆ ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ 20ರಷ್ಟು ಪ್ರವೇಶ ಹೆಚ್ಚಾಗಿದೆ. ಮೂರು ವಿಷಯಗಳಿಂದ 150 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ’ ಎಂದು ಪ್ರಾಂಶುಪಾಲ ಹಿರಿಯಣ್ಣ ಹೇಳಿದರು.
ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಕಾಲೇಜಿನ ಕಲಾ ವಿಭಾಗಕ್ಕೆ ಪ್ರವೇಶ ಮುಗಿದಿದೆ. ವಾಣಿಜ್ಯದಲ್ಲಿ 65 ಹಾಗೂ ವಿಜ್ಞಾನದಲ್ಲಿ 13 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇನ್ನೂ ಸ್ಥಳಾವಕಾಶ ಇದೆ ಎನ್ನುತ್ತಾರೆ ಪ್ರಾಂಶುಪಾಲ ಬಸವರಾಜ್.
‘ಅಂತರಗಂಗೆ ಸರ್ಕಾರಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 61 ವಾಣಿಜ್ಯ ವಿಷಯಕ್ಕೆ 50 ಮಂದಿ ಸೇರ್ಪಡೆಯಾಗಿದ್ದಾರೆ. ಪ್ರವೇಶಕ್ಕೆ ಇನ್ನೂ ಅವಕಾಶವಿದೆ’ ಎನ್ನುವ ಪ್ರಾಂಶಪಾಲ ಉದಯಕುಮಾರ್, ‘ತಾಂತ್ರಿಕ ತರಬೇತಿ ಸಂಸ್ಥೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವ ವಿದ್ಯಾರ್ಥಿಗಳು ಸೀಟ್ ಸಿಗದಿದ್ದಲ್ಲಿ ಪಿಯು ಸೇರುವ ಸಾಧ್ಯತೆ ಇದೆ’ ಎನ್ನುತ್ತಾರೆ.
ತಾಲ್ಲೂಕಿನಲ್ಲಿ ಐಟಿಐ, ಡಿಪ್ಲೊಮಾ ಹಾಗೂ ಗ್ರಾಮೀಣ ಭಾಗವಾದ ಕಲ್ಲಿಹಾಳ್, ಆನವೇರಿ ಹಾಗೂ ಹೊಳೆಹೊನ್ನೂರು ಭಾಗದಲ್ಲಿ ಸರ್ಕಾರಿ ಪಿಯು ಕಾಲೇಜು ಇರುವುದು ಸಹಜವಾಗಿ ಪ್ರವೇಶಾತಿ ಒತ್ತಡವನ್ನು ಒಂದಿಷ್ಟು ಮಟ್ಟಿಗೆ ಕಡಿಮೆ ಮಾಡಿದೆ.
***
ಸರ್ಕಾರಿ ಕಾಲೇಜಿಗೆ ಕೊಠಡಿ ಸಮಸ್ಯೆ
ಜಿಲ್ಲೆಯಲ್ಲಿ 51 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಸೇರಿ ಕೊಠಡಿ ಸಮಸ್ಯೆ ಕಾಡುತ್ತಿದೆ.
ಶಿವಮೊಗ್ಗ ನಗರದ ಸೈನ್ಸ್ ಮೈದಾನದ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು 15 ಕೊಠಡಿಗಳಿವೆ. ಆದರೆ, ಈ ಬಾರಿ ಕಾಲೇಜಿನಲ್ಲಿ 936 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೊರೊನಾ ಮಾರ್ಗಸೂಚಿ ಪ್ರಕಾರ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಲೇಜಿಗೆ ಕನಿಷ್ಠ 5 ಹೆಚ್ಚುವರಿ ಕೊಠಡಿ ಅಗತ್ಯವಿದೆ ಎಂದು ಕಾಲೇಜಿನ ಉಪನ್ಯಾಸಕ ವರ್ಗ ಒತ್ತಾಯಿಸಿದೆ. ಸಾಗರ, ತೀರ್ಥಹಳ್ಳಿ, ಸೊರಬದಲ್ಲೂ ಇದೇ ರೀತಿ ಸಮಸ್ಯೆ ಇದೆ.
***
ಪಾಳಿ ವ್ಯವಸ್ಥೆ ಪಾಠ ಬೋಧನೆ
ಪ್ರಥಮ ವರ್ಷದ ಪದವಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಒತ್ತಡ ಹೆಚ್ಚಿದೆ. ಹೆಚ್ಚು ವಿದ್ಯಾರ್ಥಿಗಳು ಬಂದರೆ ಎರಡು ಪಾಳಿಗಳ ಪಾಠಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಶಿವಮೊಗ್ಗ ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಾಗಲೇ ಪಾಳಿಯಲ್ಲಿ ತರಗತಿಗಳು ನಡೆಯುತ್ತಿವೆ.ಮೊದಲ ವರ್ಷದ ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ಬೋಧನೆ ಮಾಡಲಾಗುತ್ತಿದೆ. ಕೊಠಡಿ ಸಮಸ್ಯೆಯಿಂದಾಗಿ ಬಹುತೇಕ ಕಾಲೇಜಿನಲ್ಲಿ ಪಾಳಿ ವ್ಯವಸ್ಥೆ ಮೂಲಕ ಬೋಧನೆ ಮಾಡಲಾಗುತ್ತಿದೆ. ಬಹುತೇಕ ಸರ್ಕಾರಿ ಕಾಲೇಜಿನಲ್ಲಿ ಇದೇ ಸಮಸ್ಯೆ ಇದೆ.
ಉಪನ್ಯಾಸಕರ ಕೊರತೆ
ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರು ಇಲ್ಲ.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಕಾಲೇಜುಗಳಲ್ಲಿ ದೊಡ್ಡ ಕಾಲೇಜುಗಳಲ್ಲಿರುವ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗುತ್ತದೆ. ಆದರೆ, ದೊಡ್ಡ ಪ್ರಮಾಣದ ಕಾಲೇಜುಗಳಲ್ಲಿ ಉಪನ್ಯಾಸಕ ಕೊರತೆಯಾದರೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಕಳೆದ ಬಾರಿ 51 ಸರ್ಕಾರಿ ಕಾಲೇಜುಗಳಿಂದ 55 ಅತಿಥಿ ಉಪನ್ಯಾಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ 120 ಅತಿಥಿ ಉಪನ್ಯಾಸಕರ ಬೇಡಿಕೆ ಇದೆ.
50 ಉಪನ್ಯಾಸಕ ಹುದ್ದೆ ಖಾಲಿ: ಜಿಲ್ಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ 50 ಹುದ್ದೆಗಳು ಖಾಲಿ ಉಳಿದಿವೆ. ಬಹುತೇಕ ಪ್ರಾಂಶುಪಾಲರಿಗೆ ಬಡ್ತಿ ನೀಡಲಾಗಿದೆ. ನಿವೃತ್ತ ಉಪನ್ಯಾಸಕರಿಂದ ತೆರವಾಗಿರುವ ಹುದ್ದೆಗಳು ಖಾಲಿ ಇವೆ. ಸಾಗರದಲ್ಲೇ 20 ಹುದ್ದೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 50 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದರು.
ಸೊರಬ ಕಾಲೇಜುಗಳಲ್ಲಿ ಕೊಠಡಿಗಳ ಕೊರತೆ
ರಾಘವೇಂದ್ರ ಟಿ.
ಸೊರಬ: ಈ ಬಾರಿ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಕೊಠಡಿಗಳ ಕೊರತೆ ಎದುರಾಗಿದೆ.
ವಾಣಿಜ್ಯ, ಕಲಾ ಹಾಗೂ ವಿಜ್ಞಾನ ವಿಭಾಗಕ್ಕೆ 739 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದರಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2019ರಲ್ಲಿ 728 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಬಾರಿ ಶೇ 15ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ವಿಭಾಗವಾರು ತರಗತಿಗಳನ್ನು ಪ್ರಾರಂಭಿಸುವ ಅನಿವಾರ್ಯ ಪ್ರಾಂಶುಪಾಲರ ಮುಂದಿದೆ.
ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ನವೀಕರಣಗೊಳಿಸಲು ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಹೆಚ್ಚುವರಿ ಕಟ್ಟಡ ನಿರ್ಮಾಣದ ಅವಶ್ಯಕತೆ ಇದೆ. ಭೌತಿಕ ತರಗತಿಗಳು ಈಗಾಗಲೇ ಆರಂಭಗೊಡಿವೆ. ಪ್ರಥಮ ಪಿಯು ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವುದರಿಂದ ಮಕ್ಕಳು ಇಕ್ಕಟ್ಟಿನಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಎದುರಾಗಲಿದೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಸಮಸ್ಯೆಯೂ ಇದೆ. ನಿರುಪಯುಕ್ತಗೊಂಡಿದ್ದ ಹಳೆ ಶೌಚಾಲಯವನ್ನು ತೆರವುಗೊಳಿಸಿದ್ದರಿಂದ ಒಂದೇ ಶೌಚಾಲಯವನ್ನು ಬಳಸಿಕೊಳ್ಳುವ ಸ್ಥಿತಿ ಇದೆ. ಹೊಸ ಶೌಚಾಲಯ ನಿರ್ಮಿಸಲು ಶಾಸಕರಿಗೆ ಮನವಿ ಮಾಡಲಾಗಿದೆ.
ಕಾಯಂ ಉಪನ್ಯಾಸಕರ ಕೊರತೆಯೂ ಇದೆ. ಬದಲಿಯಾಗಿ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಿಸಿರುವುದರಿಂದ ಪಾಠ, ಪ್ರವಚನಕ್ಕೆ ಅಡ್ಡಿಯಾಗುವುದಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಕಟ್ಟಡ ಸೇರಿದಂತೆ ಮೂಲಸೌಕರ್ಯ ಒದಗಿಸಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.