ಶುಕ್ರವಾರ, ಮಾರ್ಚ್ 5, 2021
30 °C

ವಾಜಪೇಯಿ ಬಡಾವಣೆ; ಅರ್ಜಿಗಳ ಪರಿಪರಿಶೀಲನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಾಗರ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಸಮಸ್ಯೆಗಳನ್ನು ಮೂರು ತಿಂಗಳ ಒಳಗೆ ಬಗೆಹರಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಹೇಳಿದರು.

ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು 2013ರಲ್ಲಿ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತಕ್ಕೆ ವಹಿಸಿತ್ತು. ತನಿಖಾ ವರದಿ ಸಲ್ಲಿಸಿದ 4 ತಿಂಗಳ ಒಳಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಹಾಗಾಗಿ, ಅರ್ಜಿಗಳ ಪರಿಶೀಲನೆ ಆರಂಭಿಸಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತನಿಖಾ ವರದಿಯಲ್ಲಿ 1,305 ನಿವೇಶನಗಳನ್ನು ಅರ್ಹರಿಗೆ ಹಂಚಲಾಗಿದೆ. 807 ನಿವೇಶನಗಳ ಹಂಚಿಕೆಯಲ್ಲಿ ಲೋಪವಾಗಿದೆ ಎಂದು ತಿಳಿಸಿದೆ. ಅಂತಹ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಅರ್ಹರಲ್ಲದವರ ಅರ್ಜಿಗಳನ್ನು ರದ್ದುಪಡಿಸಿ, ಹಂಚಿಕೆಯಾಗದ ಅರ್ಜಿಗಳನ್ನು  ಜ್ಯೇಷ್ಠತೆ ಪ್ರಕಾರ ಹಂಚಿಕೆ ಮಾಡಲಾಗುವುದು. ಅರ್ಹ 1305 ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಪರವಾನಗಿ ನೀಡಲಾಗುವುದು ಎಂದರು.

ಲೋಕಾಯುಕ್ತ ತನಿಖಾ ವರದಿಯಲ್ಲಿ ಅಂದಿನ ಅಧ್ಯಕ್ಷರಾದ ಎಸ್.ಜ್ಞಾನೇಶ್ವರ್ ಅವರಿಗೆ 4 ವರ್ಷ, ಎಸ್.ದತ್ತಾತ್ರಿ ಅವರಿಗೆ 2 ವರ್ಷ, ‘ಸೂಡಾ’ ಸದಸ್ಯ ಬಿ.ಕೆ.ಶ್ರೀನಾಥ್ ಅವರಿಗೆ ಮೂರು ವರ್ಷ ಯಾವುದೇ ಪ್ರಾಧಿಕಾರ, ನಿಗಮದ ಹುದ್ದೆ ನೀಡಬಾರದು ಎಂದು ತಿಳಿಸಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಅರ್ಜಿಗಳ ಪರಿಪರಿಶೀಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವಿವರ ನೀಡಿದರು.

ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಊರುಗಡೂರಿನ 60 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಅಲ್ಲಿನ 687 ನಿವೇಶನ ಹಂಚಿಕೆ ಮಾಡಲಾಗುವುದು. ಸ್ವಾಮಿ ವಿವೇಕಾನಂದ ಹಾಗೂ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಯುಟಿಪಿ ವಶದಲ್ಲಿದ್ದ ಜಾಗ ವಶಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗುವುದು. ಕಡಿಮೆ ದರದಲ್ಲಿ ಮನೆಗಳನ್ನು ಬಡವರಿಗೆ ನೀಡಲಾಗುವುದು ಎಂದರು.

ಜೆ.ಎಚ್.ಪಟೇಲ್ ಬಡಾವಣೆಯ 1.10 ಎಕರೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ನಗರದಲ್ಲಿರುವ 11 ಕೆರೆಗಳನ್ನು ಹಾಗೂ ಕೆಲವು ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ‘ಸೂಡಾ’ ಸದಸ್ಯರಾದ ಮಂಡೇನಕೊಪ್ಪ ದೇವರಾಜ್, ವಿ.ಕದಿರೇಶ್, ರಾಮಲಿಂಗಯ್ಯ, ಉಮಾ ಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.