ಗಮನ ಸೆಳೆದ ‘ಸೂರ್ಯಥಾನ್’

ಶಿವಮೊಗ್ಗ: ಯುವಜನರಲ್ಲಿ ಯೋಗ-ಆರೋಗ್ಯ, ದೇಹಭಕ್ತಿ-ದೇಶಭಕ್ತಿ ಜಾಗೃತಿಗಾಗಿ ರಥಸಪ್ತಮಿ, ಗಣರಾಜ್ಯೋತ್ಸವ ಪ್ರಯುಕ್ತ ಭಾನುವಾರ ನಡೆದ ಬೃಹತ್ ಸೂರ್ಯಥಾನ್, ಸಾಮೂಹಿಕ 108 ಸೂರ್ಯ ನಮಸ್ಕಾರ ಗಮನ ಸೆಳೆಯಿತು.
ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್, ಸರ್ಜಿ ಫೌಂಡೇಷನ್ ಹಾಗೂ ಪರೋಪಕಾರಂ, ಯೋಗಶಿಕ್ಷಣ ಸಮಿತಿಯಿಂದ ಆದಿಚುಂಚನಗಿರಿ ಶಾಲಾ ಆವರಣದಲ್ಲಿ 8ನೇ ಆವೃತ್ತಿಯ ಸೂರ್ಯಥಾನ್ ನಡೆಯಿತು.
ಸೂರ್ಯ ನಮಸ್ಕಾರ ಕೇವಲ ಆಸನ- ಪ್ರಾಣಾಯಾಮದ ಹೆಸರನ್ನು ಹೇಳುವುದಕ್ಕೆ ಸೀಮಿತಗೊಳಿಸದೆ, ಶಿವಮೊಗ್ಗ ಸುತ್ತಲಿನ ಪ್ರೇಕ್ಷಣೀಯ ಸ್ಥಳ, ಪ್ರವಾಸಿ ತಾಣದ ಮಾಹಿತಿ, ಪ್ರಾಣಿ, ಪಕ್ಷಿ, ಪರಿಸರ ಕಾಳಜಿ, ಕೌಟುಂಬಿಕ, ಸಾಮಾಜಿಕ ಸಂಬಂಧಗಳ ಅರಿವು, ಸಂಸ್ಕಾರ, ಋಷಿಮುನಿಗಳು, ಮಾತೃ ದೇವತೆಗಳ ಬಗ್ಗೆ ಕರ್ನಾಟಕ ಕ್ರೀಡಾರತ್ನ ಪುರಸ್ಕೃತ ಯೋಗಾಚಾರ್ಯ ಅನಿಲ್ ಕುಮಾರ್ ಎಚ್.ಶೆಟ್ಟರ್ ವ್ಯಾಯಾಮ ಪಟುಗಳಿಗೆ ಮಾಹಿತಿ ನೀಡಿದರು.
ಆರೋಗ್ಯಕರ ತಂಪು ಪಾನೀಯ, ದೇಶದ, ಜಿಲ್ಲೆಯ ನದಿಗಳ ಮಾಹಿತಿ, ತರಕಾರಿಗಳ ಮಾಹಿತಿ, ಯೋಗದ ಬಗೆಗಳು ಹಾಗೂ ಯೋಗದಿಂದ ಆಗುವ ಪ್ರಯೋಜನವನ್ನು ಮಕ್ಕಳಿಗೆ ‘ಕೇಳಿ- ಹೇಳಿ’ ಚಟುವಟಿಕೆಯ ಮೂಲಕ ಸೂರ್ಯನಮಸ್ಕಾರಗಳನ್ನು ಮಾಡಿಸುತ್ತ, ಮಾಹಿತಿ ನೀಡಿದ್ದು ಆಕರ್ಪಿಸಿತು.
ಯೋಗಪಟುಗಳಿಗೆ ಆಯಾಸ ಅರಿವಿಗೆ ಬಾರದಂತೆ ನೃತ್ಯ ಕಲಾವಿದ ಎನ್. ಶಶಿಕುಮಾರ್ ಅವರು ವಿವಿಧ ಚಲನಚಿತ್ರ ಗೀತೆಗಳ ತುಣುಕುಗಳಿಗೆ ಯೋಗ ನೃತ್ಯ ಮಾಡಿಸಿ, ಮನರಂಜಿಸಿ, ಎಲ್ಲರಿಗೂ ಹೆಜ್ಜೆ ಹಾಕಿಸಿದರು.
ಸೂರ್ಯಥಾನ್ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಲೆ, ಭಾರತೀಯ ವಿದ್ಯಾಭವನ, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸ್ಯಾನ್ ಜೋಸೆಫ್ ಅಕ್ಷರ ಧಾಮ, ಜ್ಞಾನದೀಪ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಮೇಯರ್ ಎಸ್. ಶಿವಕುಮಾರ್, ಮಾಜಿ ಮೇಯರ್ ಸುವರ್ಣ ಶಂಕರ್, ಪರೋಪಕಾರಂ ಮುಖ್ಯಸ್ಥ ಎನ್.ಎಂ. ಶ್ರೀಧರ್, ಕಣಾದ ಯೋಗ ಮತ್ತು ರಿಸರ್ಚ್ ಸೆಂಟರ್‌ನ ಅಧ್ಯಕ್ಷ ಬೆಲಗೂರು ಮಂಜುನಾಥ್, ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಯೋಗ ಶಿಕ್ಷಣ ಸಮಿತಿಯ ಡಾ.ಸಂಜಯ್, ಯೋಗ ಗುರು ಬಾ.ಸು.ಅರವಿಂದ್, ಯೋಗ ಗುರು ಭ.ಮ.ಶ್ರೀಕಂಠ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.