ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಸಕಾಲಕ್ಕೆ ವಿದ್ಯಾರ್ಥಿಗಳ ಕೈಗೆ ಪಠ್ಯ ಪುಸ್ತಕ

ವಾರದೊಳಗೆ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ರವಾನೆ, ಶಾಲೆ ಆರಂಭಕ್ಕೇ ವಿತರಣೆ
ಮಲ್ಲಪ್ಪ ಸಂಕೀನ್‌
Published 14 ಮೇ 2024, 5:57 IST
Last Updated 14 ಮೇ 2024, 5:57 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರತಿ ವರ್ಷ ‘ಶಾಲೆಗಳು ಪ್ರಾರಂಭವಾದರೂ ಪಠ್ಯಪುಸ್ತಕಗಳು ಬಂದಿಲ್ಲ’ ಎಂಬ ದೂರು ಮಕ್ಕಳು ಮತ್ತು ಪಾಲಕರಿಂದ ವ್ಯಾಪಕವಾಗಿ ಕೇಳಿಬರುತ್ತದೆ. ಆದರೆ, ಈ ಬಾರಿ ಅಂತಹ ಅಪವಾದದಿಂದ ಹೊರಬರಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಲೆ ಆರಂಭಕ್ಕೂ ಮುನ್ನವೇ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಂಡಿದೆ.

2024– 25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಮೇ 29ರಿಂದ ಆರಂಭವಾಗಲಿವೆ. ವಾರದೊಳಗೆ ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಪಠ್ಯ ಪುಸ್ತಕಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲು ಇಲಾಖೆ ಮುಂದಾಗಿದೆ. ಹೀಗಾಗಿಯೇ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ಶಾಲೆ ಆರಂಭದಲ್ಲಿಯೇ ಪುಸ್ತಕಗಳು ದೊರಕಲಿವೆ. 

ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಸರ್ಕಾರರಿಂದ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಉಚಿತ ಪಠ್ಯ ಪುಸ್ತಕಗಳ ಬೇಡಿಕೆ 22,80,658 ಇದೆ. ಅದರಲ್ಲಿ ಸರ್ಕಾರ ಈಗಾಗಲೇ 14,23,934 ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಿದೆ. ಶೇ 62.44ರಷ್ಟು ಪುಸ್ತಕಗಳು ಜಿಲ್ಲೆಗ ಬಂದಿವೆ.

ಆಯಾ ತಾಲ್ಲೂಕು ಕೇಂದ್ರಗಳ ಗೋದಾಮುಗಳಲ್ಲಿ ಪಠ್ಯ ಪುಸ್ತಕ ದಾಸ್ತಾನು ಮಾಡಲಾಗಿದೆ. ವಾರದೊಳಗೆ ಆಯಾ ಶಾಲೆಗಳಿಗೆ ತಲುಪಿಸಲಾಗುವುದು. ಶಾಲೆ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು.
ಪರಮೇಶ್ವರಪ್ಪ ಸಿ.ಆರ್‌., ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಇನ್ನು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಪಠ್ಯ ಪುಸ್ತಕಗಳನ್ನು ಖರೀದಿ ಮಾಡಿದ ಬಳಿಕ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಂದ ಪಠ್ಯ ಪುಸ್ತಕಗಳ ಬೇಡಿಕೆ 10,00,134 ಇದೆ. ಈ ಪೈಕಿ ಈಗಾಗಲೇ 7,40,504 ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಶೇ 74.04ರಷ್ಟು ಪೂರೈಕೆ ಆಗಿದೆ.

‘ಜಿಲ್ಲೆಗೆ ಪೂರೈಕೆ ಆಗಿರುವ ಪಠ್ಯ ಪುಸ್ತಕಗಳನ್ನು ಭದ್ರಾವತಿ, ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ ಮತ್ತು ತೀರ್ಥಹಳ್ಳಿ ತಾಲ್ಲೂಕು ವ್ಯಾಪ್ತಿಯ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ. ಎಲ್ಲ ಪಠ್ಯಪುಸ್ತಕಗಳನ್ನು ವಾರದೊಳಗೆ ಶಾಲೆಗಳಿಗೆ ವಿತರಿಸುವಂತೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲೆ ಆರಂಭದ ವೇಳೆಗೆ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಬಾಕಿ ಉಳಿದ ಪಠ್ಯಪುಕಸ್ತಗಳು ಜೂನ್‌ ಒಂದರೊಳಗೆ ಪೂರೈಕೆ ಆಗುವ ಸಾಧ್ಯತೆ ಇದೆ’ ಎಂದು ಿಲಾಖೆಯ ಉಪನಿರ್ದೇಶಕರು  ‘ಪ್ರಜಾವಾಣಿ’ಗೆ ತಿಳಿಸಿದರು. 

ಕಳೆದ ವರ್ಷ ಪಠ್ಯಪುಸ್ತಕ ಪರಿಷ್ಕರಣೆಯಿಂದ ಪುಸ್ತಕಗಳ ಪ್ರಕಟಣೆ ತಡವಾಗಿ, ಶಾಲೆಗಳನ್ನು ತಲುಪುವುದು ತಡವಾಗಿತ್ತು. ಅದರಲ್ಲೂ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದ ಪುಸ್ತಕಗಳ ಪೂರೈಕೆ ವಿಳಂಬದಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಕಷ್ಟು ತೊಂದರೆ ಅನುಭವಿಸಿದ್ದರು. ವಿದ್ಯಾರ್ಥಿಗಳಿಗೆ ಬೋಧಿಸಲೂ ಆಗಿರಲಿಲ್ಲ. ಆದರೆ, ಸರ್ಕಾರ ಈ ಬಾರಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಇಲ್ಲದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. 

‘ನಿಗದಿತ ವೇಳಾಪಟ್ಟಿಯಂತೆ ಪಾಠ ಬೋಧಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ತುಂಬ ಅನುಕೂಲವಾಗುತ್ತದೆ. ಒಂದು ವೇಳೆ ವಿಳಂಬವಾಗಿದ್ದರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ಆದರೆ, ಸರ್ಕಾರ ಸಕಾಲಕ್ಕೆ ವಿದ್ಯಾರ್ಥಿಗಳ ಕೈಗೆ ಪಠ್ಯ ಪುಸ್ತಕಗಳು ಸೇರುವಂತೆ ಮಾಡಿರುವುದು ಉತ್ತಮ ಬೆಳವಣಿಗೆ’ ಎಂದು ಪಾಲಕರೊಬ್ಬರ ಹರ್ಷ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ೊಟ್ಟು 2,640 ಶಾಲೆಗಳಿವೆ. 1ರಿಂದ 10ನೇ ತರಗತಿವರೆಗೆ ಒಟ್ಟು 4,52,236 ವಿದ್ಯಾರ್ಥಿಗಳು ಇದ್ದಾರೆ. 

‘ಲೋಕಸಭೆ ಚುನಾವಣೆ ಕೆಲಸದ ಒತ್ತಡದ ನಡುವೆಯೂ ಅಧಿಕಾರಿಗಳು ಸರ್ಕಾರದೊಂದಿಗೆ ಸಮನ್ವಯ ಸಾಧಿಸಿಕೊಂಡು ಸಕಾಲಕ್ಕೆ ಪಠ್ಯ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಚುನಾವಣೆ ಕಾರಣಕ್ಕೆ ಈ ವರ್ಷವೂ ವಿಳಂಬವಾಗುತ್ತದೆ ಎಂಬ ಆತಂಕವಿತ್ತು. ಇದೀಗ ಅದು ನಿವಾರಣೆ ಆದಂತಾಗಿದೆ’ ಎಂದು ಪಾಲಕ ಬಸವರಾಜ ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT