ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಿಂಗಳಿಂದ ಕೆಟ್ಟು ನಿಂತ ಲಾಂಚ್

ಚನ್ನಗೊಂಡ ಗ್ರಾಮ ಪಂಚಾಯಿತಿಗೆ ಸಂಪರ್ಕಿಸಲು ಸಿಗ್ಗಲು, ಚಂಬಳಿ ಗ್ರಾಮಸ್ಥರ ಪರದಾಟ
Last Updated 29 ಸೆಪ್ಟೆಂಬರ್ 2022, 6:05 IST
ಅಕ್ಷರ ಗಾತ್ರ

ತುಮರಿ: ಶರಾವತಿ ಎಡದಂಡೆಯ ಕರೂರು ಹೋಬಳಿಯ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಾರು– ಸಿಗ್ಗಲು ಲಾಂಚ್ ಕಳೆದ ನಾಲ್ಕು ತಿಂಗಳಿಂದ ಶರಾವತಿ ಹಿನ್ನೀರಿನ ಮಧ್ಯೆ ಕೆಟ್ಟು ನಿಂತು ಅವ್ಯವಸ್ಥೆ ಉಂಟಾಗಿದೆ.

ಚನ್ನಗೊಂಡ ಗ್ರಾಮ ಪಂಚಾಯಿತಿಗೆ ಸಂಪರ್ಕ ಕಲ್ಪಿಸಲು ಸಿಗ್ಗಲು, ಚಂಬಳಿ ಮುಂತಾದ ಗ್ರಾಮಗಳಿಗೆ ಶರಾವತಿ ಹಿನ್ನೀರಿನ ಮಾರ್ಗದಲ್ಲಿ ಸೇವೆಗೆ ನೀಡಿದ್ದ ಲಾಂಚ್ ಮುಳುಗಿ ಹೋಗಿ ನಾಲ್ಕು ತಿಂಗಳು ಕಳೆದಿವೆ.

ತಮ್ಮ ಪಂಚಾಯಿತಿ ಕೇಂದ್ರ ಮತ್ತು ಬ್ಯಾಂಕ್, ಪಡಿತರ, ವ್ಯಾಪಾರ ವಹಿವಾಟು ಸೇವೆಗೆ ನದಿ ದಾಟಿ ಹೋಗಲು ಲಾಂಚ್ ನೀಡಿ ಎಂದು ಈ ಗ್ರಾಮಸ್ಥರು 2018ರಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದರು. ಸ್ಥಳಕ್ಕೆ ಬಂದ ಉಪ ವಿಭಾಗಾಧಿಕಾರಿ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದ್ದರು.

ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಗಮನಕ್ಕೆ ತಂದು ಮನವಿ ಮಾಡಿಕೊಂಡಿದ್ದರು. ಶಾಸಕರು ಒಳನಾಡು ಜಲಸಾರಿಗೆ ಇಲಾಖೆಯ ಹಸಿರುಮಕ್ಕಿ ಮಾರ್ಗದ ಹಳೆ ಲಾಂಚ್ ಅನ್ನು ಇಲ್ಲಿಗೆ ವರ್ಗಾಯಿಸಿ ಚನ್ನಗೊಂಡ ಗ್ರಾಮ ಪಂಚಾಯಿತಿ ಉಸ್ತುವಾರಿ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿ ಕಳೆದ ಬೇಸಿಗೆಯಲ್ಲಿ ಉದ್ಘಾಟಿಸಿದ್ದರು.

ಮೂರು ತಿಂಗಳು ಸೇವೆ ನೀಡಿದ ಲಾಂಚ್ ಸಮರ್ಪಕ ನಿರ್ವಹಣೆ ಇಲ್ಲದೇ, ಸ್ಥಗಿತಗೊಂಡಿದೆ.

ಒಳನಾಡು ಜಲಸಾರಿಗೆ ಇಲಾಖೆ ಒಡೆತನದ ಈ ಲಾಂಚ್ ಬೆಲೆ ₹25 ಲಕ್ಷಕ್ಕೂ ಹೆಚ್ಚು ಇದ್ದು, ಪಂಚಾಯತ್ ರಾಜ್ ಇಲಾಖೆಗೆ ಅದನ್ನು ಹಸ್ತಾಂತರ ಮಾಡಿ ಇಲಾಖೆ ತನ್ನ ಜವಾಬ್ದಾರಿ ಕಳಚಿಕೊಂಡಿದೆ. ಈಗ ಚನ್ನಗೊಂಡ ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿ ಇದೆ.

ಜನರ ಸೇವೆಗೆ ಸಿಗದ ಈ ಕಡವು(ಲಾಂಚ್) ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಈ ಲಾಂಚ್ ಚನ್ನಗೊಂಡ ಗ್ರಾಮ ಪಂಚಯಿತಿಗೆ ಕೊಡಲಾಗಿತ್ತು. ಗ್ರಾಮ ಪಂಚಾಯಿತಿಯವರು ಇದರ ತಾಂತ್ರಿಕ ನಿರ್ವಹಣೆ ಮಾಡಬೇಕಾಗಿತ್ತು. ಸರಿಯಾಗಿ ನಿರ್ವಹಿಸದ ಕಾರಣ ಈ ಲಾಂಚ್ ಸ್ಥಗಿತಗೊಂಡಿದೆ.

ಧನೇಂದ್ರ, ಕಡವು ನಿರೀಕ್ಷಕ, ಸಾಗರ

ಕೆಸರಿನಲ್ಲಿ ನಿಂತಿರುವ ಲಾಂಚ್ ಹೊರತೆಗೆಯಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಎರಡು ಎಂಜಿನ್ ಹೊಂದಿರುವ ಲಾಂಚ್ ನಿರ್ವಹಣೆ ದುಬಾರಿ ವೆಚ್ಚವಾಗಿದ್ದು, ನಿರ್ವಹಣೆ ಅಸಾಧ್ಯದ ಬಗ್ಗೆ ಇಲಾಖೆಗೆ ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಮಾಡಲಾಗಿದೆ.

ಪದ್ಮರಾಜ, ಚನ್ನಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT