ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗಳಿಗೆ ಲಾಭ ಮಾಡಲು ಲಿಂಗನಮಕ್ಕಿ ಬಳಕೆ

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ
Last Updated 18 ಜನವರಿ 2022, 5:35 IST
ಅಕ್ಷರ ಗಾತ್ರ

ಸಾಗರ: ‘ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಂದ ಲಿಂಗನಮಕ್ಕಿ ಜಲಾಶಯದಿಂದ ಅನಧಿಕೃತವಾಗಿ ವ್ಯಾಪಕ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಈ ಬೆಳವಣಿಗೆಯಲ್ಲಿ ಶಾಸಕ ಹಾಲಪ್ಪ ಹರತಾಳು ಅವರು ಶಾಮೀಲಾಗಿದ್ದಾರೆ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಮರಿ ಸೇತುವೆ ನಿರ್ಮಾಣ ಕಾಮಗಾರಿಗೆ ನೀರಿನ ಪ್ರಮಾಣ ಕಡಿಮೆ ಮಾಡಬೇಕು ಎಂಬ ವಿಷಯವನ್ನು ನೆಪವಾಗಿಟ್ಟುಕೊಂಡು ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಬೇರೆಡೆಗೆ ಹರಿಸಲಾಗುತ್ತಿದೆ. ಇದರ ಲಾಭ ಖಾಸಗಿ ವಿದ್ಯುತ್ ಘಟಕಗಳಿಗೆ ದೊರಕುತ್ತಿದೆ. ಈ ವಿಷಯದಲ್ಲಿ ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಈಚೆಗೆ ಶಾಸಕ ಹಾಲಪ್ಪ ಅವರು ಕಾರ್ಗಲ್‌ನಲ್ಲಿ ಕೆಪಿಸಿ ವಿರುದ್ಧ ಧರಣಿ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಅವರ ಪಕ್ಷದ್ದೇ ಸರ್ಕಾರವಿದೆ. ಜಿಲ್ಲೆಯಲ್ಲಿ ಅವರ ಪಕ್ಷದವರೇ ಉಸ್ತುವಾರಿ ಸಚಿವರಿದ್ದಾರೆ. ಹೀಗಾಗಿ ಹಾಲಪ್ಪ ಅವರು ಧರಣಿ ನಡೆಸುವ ನಾಟಕ ಮಾಡುವ ಉದ್ದೇಶವಾದರೂ ಏನು’ ಎಂದು ಅವರು ಪ್ರಶ್ನಿಸಿದರು.

‘ಕೆಪಿಸಿ ಅಧಿಕಾರಿಗಳಿಂದ ಕಮಿಷನ್ ಬಂದಿಲ್ಲ ಎನ್ನುವ ಕಾರಣಕ್ಕೆ ಶಾಸಕ ಹಾಲಪ್ಪ ಅವರು ಧರಣಿ ನಡೆಸಲು ಮುಂದಾಗಿದ್ದಾರೆಯೇ ಹೊರತು ರೈತರ ಅಥವಾ ಸ್ಥಳೀಯರ ಹಿತ ಕಾಪಾಡಲು ಅಲ್ಲ. ಲಿಂಗನಮಕ್ಕಿ ಜಲಾಶಯದ ನೀರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ವಿಷಯವನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು’ ಎಂದರು.

‘ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಾಯಣ ಗುರುಗಳ ಭಾವಚಿತ್ರವಿರುವ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ ಹಿಂದುಳಿದ ವರ್ಗದವರನ್ನು ಅವಮಾನ ಮಾಡಿದೆ. ಈ ಮೂಲಕ ಹಿಂದುತ್ವಕ್ಕೂ ದ್ರೋಹ ಎಸಗಿದೆ’ ಎಂದುಟೀಕಿಸಿದರು.

‘ನಾಲ್ಕು ವರ್ಷಗಳಲ್ಲಿ ತಾಲ್ಲೂಕಿಗೆ ಕೇವಲ 30 ಆಶ್ರಯ ಮನೆಗಳು ಮಂಜೂರಾಗಿವೆ. ಶಾಸಕ ಹಾಲಪ್ಪ ತಮ್ಮ ಪಕ್ಷದವರಿಗೆ ಮನೆ ಮಂಜೂರು ಮಾಡುವಂತೆ ಪಂಚಾಯಿತಿಗೆ ಪತ್ರ ಬರೆದಿದ್ದು, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ಪ್ರಮುಖರಾದ ಮಹಾಬಲ ಕೌತಿ, ಗಣಪತಿ ಮಂಡಗಳಲೆ, ಸೋಮಶೇಖರ ಲ್ಯಾವಿಗೆರೆ, ಸೈಯದ್ ಅನ್ವರ್, ಚಿನ್ಮಯ್, ಸಂತೋಷ್ ಸದ್ಗುರು, ಚಿಂಟು ಇದ್ದರು.

ಹಾಲಪ್ಪ ಕಾಂಗ್ರೆಸ್ ಮುಖಂಡರಾ?

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ನನಗೆ ಕಾಂಗ್ರೆಸ್ ಟಿಕೆಟ್ ಸಿಗುವುದಿಲ್ಲ ಎಂದು ಶಾಸಕ ಹಾಲಪ್ಪ ಅವರು ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಹೇಳಲು ಅವರು ಕಾಂಗ್ರೆಸ್ ಪಕ್ಷದ ಮುಖಂಡರಾ’ ಎಂದು ಬೇಳೂರು ವ್ಯಂಗ್ಯವಾಡಿದರು.

‘ಮುಂದಿನ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಹಾಲಪ್ಪ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಕಷ್ಟವಿದೆ. ಆರ್‌ಎಸ್ಎಸ್‌ ಹಾಗೂ ಬಜರಂಗದಳ ಅವರ ವಿರುದ್ಧವಿದೆ. ಮೊದಲು ಅವರ ಟಿಕೆಟ್ ಗಟ್ಟಿ ಮಾಡಿಕೊಂಡು ನನ್ನ ಬಗ್ಗೆ ಮಾತಾಡಲಿ’ ಎಂದರು.

‘ನಾನು ರಾತ್ರಿ ಹೊತ್ತು ಕನ್ನಡಕ ಧರಿಸಿ ಓಡಾಡುತ್ತೇನೆ. ಬಣ್ಣ ಬಣ್ಣದ ಬಟ್ಟೆ ಧರಿಸುತ್ತೇನೆ ಎಂದು ಹಾಲಪ್ಪ ಅವರು ಟೀಕಿಸುತ್ತಿದ್ದಾರೆ. ನಾನು ಬಾಡಿಗೆ ಮನೆಯಲ್ಲಿ ವಾಸವಾಗಿರುವುದಕ್ಕೂ ಕೀಳಾಗಿ ಮಾತನಾಡುತ್ತಿದ್ದಾರೆ. ಇದು ನನ್ನ ವೈಯಕ್ತಿಕ ವಿಷಯ. ಮರಳು ದಂಧೆ, ಗಣಪತಿ ಕೆರೆ ಕಾಮಗಾರಿ, ಹೆಂಡದಂಗಡಿ ವಹಿವಾಟಿನಲ್ಲಿ ದುಡ್ಡು ಮಾಡಿದವ ನಾನಲ್ಲ. ಅಧಿಕಾರವಿದ್ದಾಗ ಸಾವಿರಾರು ಕುಟುಂಬಗಳಿಗೆ ನೆರವು ನೀಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT