ಭಾನುವಾರ, ಮೇ 16, 2021
23 °C
ಚಿಕಿತ್ಸೆಗೆ ತೊಡಕಾಗುತ್ತಿರುವ ಕೋವಿಡ್‌ ಪರೀಕ್ಷಾ ಫಲಿತಾಂಶ ವಿಳಂಬ

ಶಿವಮೊಗ್ಗ: ಮೆಗ್ಗಾನ್‌ನಲ್ಲಿವೆ ಆಮ್ಲಜನಕ ಸೌಲಭ್ಯದ 1,100 ಹಾಸಿಗೆಗಳು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಸುತ್ತಲ ಜಿಲ್ಲೆಗಳ ಪ್ರಮುಖ ಕೋವಿಡ್‌ ಚಿಕಿತ್ಸಾ ಕೇಂದ್ರ. ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಆಸ್ಪತ್ರೆಯ ಒಂದು ಭಾಗವನ್ನು ಕೋವಿಡ್‌ ರೋಗಿಗಳ ಆರೈಕೆ, ಚಿಕಿತ್ಸೆಗಾಗಿ ಮೀಸಲಿಡಲಾಗಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ 1,250 ಹಾಸಿಗೆಗಳಿವೆ. 1,100 ಹಾಸಿಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಸದ್ಯ 300 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯತ್ತಿದ್ದಾರೆ. 500 ಹಾಸಿಗೆಗಳು ಸಿದ್ಧವಿವೆ. ಆಸ್ಪತ್ರೆ ಆವರಣದಲ್ಲಿ 16 ಸಾವಿರ ಲೀಟರ್ ಆಮ್ಲಜನಕ ಸಂಗ್ರಹ ಟ್ಯಾಂಕ್ ಸದಾ ತುಂಬಿರುತ್ತದೆ. ಬಳ್ಳಾರಿ ಜಿಲ್ಲೆ ತೋರಣಗಲ್‌ನ ಜಿಂದಾಲ್‌ನಿಂದ ಪ್ರತಿ ಎರಡು ದಿನಗಳಿಗೆ ಮೆಗ್ಗಾನ್‌ ಆವರಣಕ್ಕೆ ಆಮ್ಲಜನಕ ತುಂಬಿದ ಟ್ಯಾಂಕರ್‌ಗಳು ಬರುತ್ತವೆ. 1,100 ಆಮ್ಲಜನಕ ಪೂರೈಕೆಯ ಹಾಸಿಗೆಗಳು ಇದ್ದರೂ ಯಂತ್ರಗಳ ಕೊರತೆ ಇದೆ. ಆಸ್ಪತ್ರೆ ಆಡಳಿತ ಮಂಡಳಿ ಅಗತ್ಯ ಯಂತ್ರಗಳನ್ನು ಖರೀದಿಸಿಲ್ಲ. ಇದರಿಂದ ಎಲ್ಲ ಹಾಸಿಗೆಗಳೂ ರೋಗಿಗಳ ಬಳಕೆಗೆ ಲಭ್ಯವಾಗುತ್ತಿಲ್ಲ.

ಆಸ್ಪತ್ರೆಯಲ್ಲಿ 311 ವೈದ್ಯರು ಇದ್ದಾರೆ. ವೈದ್ಯಕೀಯ ಕಾಲೇಜು ಇರುವುದರಿಂದ ಕಿರಿಯ ವೈದ್ಯರ ಸೇವೆ ಲಭ್ಯವಾಗುತ್ತಿದೆ. 308 ಶುಶ್ರೂಷಕಿಯರು ಇದ್ದಾರೆ. ಕೋವಿಡ್‌ ಕಾರ್ಯದಲ್ಲಿ ಸದ್ಯ 76 ವೈದ್ಯರು, ಅಷ್ಟೇ ಸಂಖ್ಯೆಯ ಶುಶ್ರೂಷಕಿಯರು ತೊಡಗಿಸಿಕೊಂಡಿದ್ದಾರೆ. 4 ಪಾಳಿಗಳಲ್ಲಿ ಕೆಲಸ ಮಾಡುವ ಅವರನ್ನು ಒಂದು ವಾರದ ನಂತರ ಬೇರೆ ಬೇರೆ ವಿಭಾಗಗಳಿಗೆ ನಿಯೋಜಿಸಲಾಗುತ್ತದೆ. ಸರದಿ ಪ್ರಕಾರ ಎಲ್ಲರೂ ಕೋವಿಡ್‌ ಕೆಲಸ ನಿರ್ವಹಿಸುತ್ತಿದ್ದಾರೆ.

ಆಯುರ್ವೇದ ಆಸ್ಪತ್ರೆಯಲ್ಲೇ ವಿಂಗಡಣೆ: ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕಾಯಿಲೆಯ ಸ್ವರೂಪದ ಆಧಾರದ ಮೇಲೆ ಮೆಗ್ಗಾನ್ ಆಸ್ಪತ್ರೆಯ ಬಳಿಯೇ ಇರುವ ಆಯುರ್ವೇದ ಆಸ್ಪತ್ರೆಯಲ್ಲೇ ವಿಂಗಡಣೆ ಮಾಡಲಾಗುತ್ತಿದೆ. ಹೋಂ ಐಸೊಲೇಷನ್‌ಗೆ ಕಳುಹಿಸಲಾಗುತ್ತದೆ. ಸಾಮುದಾಯಿಕ ಕ್ವಾರಂಟೈನ್‌ ವ್ಯವಸ್ಥೆಯೂ ಇದೆ. ಚಿಕಿತ್ಸೆಯ ತೀವ್ರ ಅಗತ್ಯ ಇರುವವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ನೆರೆಯ ಜಿಲ್ಲೆಗಳಿಂದಲೂ ಹೆಚ್ಚಿನ ಕೋವಿಡ್ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುವ ಕಾರಣ ಮೆಗ್ಗಾನ್ ಆಸ್ಪತ್ರೆಯ
ಮೇಲೆ ಒತ್ತಡ ಹೆಚ್ಚಾಗಿದೆ.

ಎರಡು ಕಡೆ ಕೋವಿಡ್‌ ಪರೀಕ್ಷೆ: ಜಿಲ್ಲೆಯ ಎಲ್ಲ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರಗಳು, ಮೆಗ್ಗಾನ್ ಆಸ್ಪತ್ರೆಗಳಲ್ಲಿ ಸಂಗ್ರಹಿಸುವ ಗಂಟಲು ದ್ರವವನ್ನು ಬಿ.ಎಚ್‌. ರಸ್ತೆಯ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರ, ಮೆಗ್ಗಾನ್‌ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿದಿನ ಸರಾಸರಿ 2 ಸಾವಿರಕ್ಕೂ ಹೆಚ್ಚು ಜನರು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. 24 ತಾಸುಗಳ ಒಳಗೆ ಫಲಿತಾಂಶ ಒದಗಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ವಿಳಂಬವಾಗುತ್ತಿದೆ.

ಗುರಿ ಮುಟ್ಟದ ಲಸಿಕೆ ಅಭಿಯಾನ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 4.97 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಲಸಿಕೆ ಕೊರತೆಯ ಪರಿಣಾಮ ಇದುವರೆಗೂ ಎರಡು ಲಕ್ಷ ದಾಟಲು ಸಾಧ್ಯವಾಗಿಲ್ಲ. ಎರಡನೇ ಹಂತದಲ್ಲಿ 21 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ. ಒಂದು ದಿನ ಲಸಿಕೆ ದೊರೆತರೆ ಮೂರು ದಿನ ಬಾಗಿಲು ಮುಚ್ಚುವಂತಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ರಜೆಗಳೂ ಸಿಗದೆ ಹೈರಾಣಾಗಿದ್ದಾರೆ.

***

ತೀರ್ಥಹಳ್ಳಿ: ಸಹಾಯವಾಣಿ 08181-295940

ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಕೊರೊನಾ 2ನೇ ಅಲೆ ತಡೆಗೆ ಟಾಸ್ಕ್‌ಫೋರ್ಸ್ ಆರಂಭಿಸಿ, ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಸೋಂಕಿತರ ಪತ್ತೆಗೆ, ಲಸಿಕೆ ನಿರ್ವಹಣೆಗೆ, ಆಂಬುಲೆನ್ಸ್ ಒದಗಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ತಾಲ್ಲೂಕಿನ ವಾಟಗಾರು ಮೊರಾರ್ಜಿ ವಸತಿಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. 74 ಜನರು ಇರಬಹುದು.

‘ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್‌ಫೋರ್ಸ್ ತಂಡ ರಚಿಸಲಾಗಿದೆ. ಹೊರಗಿನಿಂದ ತಾಲ್ಲೂಕಿಗೆ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಪಡೆಯಲು ಅವಕಾಶ ಮಾಡಲಾಗಿದೆ. ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಕೇತನ್ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸೋಂಕಿಗೆ ತುತ್ತಾದವರ ಮೇಲೆ ನಿಗಾ ವಹಿಸಲಿದ್ದಾರೆ. ಕನ್ನಂಗಿ, ಕೋಣಂದೂರು, ತೀರ್ಥಹಳ್ಳಿ ಆಸ್ಪತ್ರೆಯಲ್ಲಿನ ಆಂಬುಲೆನ್ಸ್‌ಗಳನ್ನು ಕೋವಿಡ್ ರೋಗಿಗಳಿಗೆ ಬಳಸಲಾಗುತ್ತಿದೆ. ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಯ 100 ಹಾಸಿಗೆಗಳಲ್ಲಿ 50 ಹಾಸಿಗೆಯನ್ನು ಸೋಂಕಿತರಿಗೆ ಮೀಸಲಿಡಲಾಗಿದೆ. 50 ಹಾಸಿಗೆಗೂ ಆಕ್ಸಿಜೆನ್ ವ್ಯವಸ್ಥೆ ಕಲ್ಪಿಸಲಾಗಿದೆ. 3 ಐಸಿಯು ಹಾಸಿಗೆಗಳಿದ್ದು ಸದ್ಯಕ್ಕೆ 2 ವೆಂಟಿಲೇಟರ್ ಇದೆ. ಕೋವಿಡ್ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಸಾರ್ವಜನಿಕರು ಸಂಪರ್ಕಿಬಹುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಅನಿಕೇತ್ ಮನವಿ ಮಾಡಿದ್ದಾರೆ.

***

ಕೋವಿಡ್‌ ಎದುರಿಸಲು ಸಜ್ಜಾಗಿದೆ ಆಸ್ಪತ್ರೆ
ಭದ್ರಾವತಿ:
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಸಜ್ಜಾಗಿದೆ. ಅತ್ತ ಕಳೆದ ಬಾರಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಇದ್ದ ವಿಐಎಸ್ಎಲ್ ಆಸ್ಪತ್ರೆಗೆ ಆಮ್ಲಜನಕ ಪೈಪ್‌ಲೈನ್‌ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

‘16 ಆಮ್ಲಜನಕ ಹಾಸಿಗೆಗಳು, ಮೂರು ಚಿಕಿತ್ಸಾ ಹಾಸಿಗೆ ಹಾಗೂ ಮೂರು ಐಸಿಯು ಹಾಸಿಗೆಗಳು ಸಜ್ಜಾಗಿವೆ. ಸ್ಥಳೀಯವಾಗಿ ಎದುರಾಗುವ ಸಮಸ್ಯೆಗಳನ್ನು ನೀಗಿಸುವ ಚೈತನ್ಯ ಹೊಂದಿದೆ. ಸದ್ಯ ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯು ಚಿಕಿತ್ಸೆ ಕೊಡುವಷ್ಟರ ಮಟ್ಟಿಗೆ ಪರಿಸ್ಥಿತಿ ಉಲ್ಬಣಿಸಿಲ್ಲ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಮಾಹಿತಿ ನೀಡಿದರು.

ಹೊರ ರೋಗಿಗಳ ತಪಾಸಣೆ, ಗರ್ಭಿಣಿಯರ ತಪಾಸಣೆ ಮತ್ತು ಹೆರಿಗೆ, ಶಸ್ತ್ರಚಿಕಿತ್ಸೆ ಚಟುವಟಿಕೆ ನಿರಂತರವಾಗಿ ನಡೆದಿದೆ ಎಂದು ತಿಳಿಸಿದರು.

‘ವಿಐಎಸ್ಎಲ್ ಆಸ್ಪತ್ರೆಯಲ್ಲಿ 50 ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಿತ್ತು. ಈ ಬಾರಿ ಅಲ್ಲಿಗೆ ಆಮ್ಲಜನಕ ಅಳವಡಿಸಲು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಒಂದು ವಾರದಲ್ಲಿ ಈ ಕೆಲಸ ಆರಂಭವಾಗಲಿದೆ. ಖಾಸಗಿ ಆಸ್ಪತ್ರೆಗಳ ಜತೆ ಸಂಪರ್ಕದಲ್ಲಿದ್ದು ಅವರೊಂದಿಗೂ ಮಾತುಕತೆ ನಡೆಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ವಿ. ಅಶೋಕ್ ಹೇಳಿದರು.

ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪಕೇಂದ್ರ ಒಳಗೊಂಡಂತೆ ಒಟ್ಟು 38 ಕಡೆ ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದೆ. ಇಲ್ಲಿ ತನಕ 31,562 ಮಂದಿಗೆ ಲಸಿಕೆ ಹಾಕಲಾಗಿದೆ.

***

ಸಾಗರ: ಮುಚ್ಚಿದ ಸಹಾಯವಾಣಿ ಕೇಂದ್ರ
ಸಾಗರ:
ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆಂದು ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದರೂ ಒಟ್ಟಾರೆಯಾಗಿ ಶೇ 40ರಷ್ಟು ಸಿಬ್ಬಂದಿ ಕೊರತೆಯನ್ನು ಆಸ್ಪತ್ರೆ ಎದುರಿಸುತ್ತಿದೆ.

ವೈದ್ಯರು, ಶುಶ್ರೂಷಕಿಯರು, ಫಾರ್ಮಸಿಸ್ಟ್, ಎಕ್ಸರೇ, ‘ಡಿ’ ಗ್ರೂಪ್ ಹೀಗೆ ಪ್ರತಿಯೊಂದು ವಿಭಾಗದಲ್ಲೂ ನಿಗದಿತ ಸಂಖ್ಯೆಯ ಸಿಬ್ಬಂದಿ ಇಲ್ಲದೇ ಇರುವುದು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮೇಲೆ ಒತ್ತಡ ಹೆಚ್ಚಲು ಕಾರಣವಾಗಿದೆ.

ಕಳೆದ ವರ್ಷವೇ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಕೋವಿಡ್ ವಾರ್ಡ್ ತೆರೆಯಲಾಗಿದೆ. ಇಲ್ಲಿನ ಕೋವಿಡ್ ವಾರ್ಡ್‌ನಲ್ಲಿ ರೋಗದ ಲಕ್ಷಣಗಳು ಸಾಮಾನ್ಯ ಸ್ವರೂಪದಲ್ಲಿರುವ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಲಕ್ಷಣ ತೀವ್ರವಾಗಿದ್ದರೆ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

‘ಕೋವಿಡ್ ವಾರ್ಡ್‌ನಲ್ಲಿ 40 ಹಾಸಿಗೆಗಳಿದ್ದು, ಹಾಸಿಗೆ ಕೊರತೆ ಉಂಟಾಗುವ ಸಾಧ್ಯತೆ ನಿಚ್ಚಳವಾಗಿದೆ. ಆಮ್ಲಜನಕ ಪ್ಲಾಂಟ್, ರೋಗಿಗಳ ಗಂಟಲ ದ್ರವ ನಮೂನೆಯ ವರದಿ ನೀಡುವ ಪ್ರಯೋಗಾಲಯ ಇಲ್ಲಿನ ಆಸ್ಪತ್ರೆಯಲ್ಲೆ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಇದೆ.

ಮಾರ್ಚ್ 31ಕ್ಕೆ ಆಸ್ಪತ್ರೆಯಲ್ಲಿದ್ದ ಸಹಾಯವಾಣಿ ಕೇಂದ್ರವನ್ನು ಮುಚ್ಚಲಾಗಿದೆ. ಹೀಗಾಗಿ ರೋಗಿಗಳ ಬಗ್ಗೆ ಮಾಹಿತಿ ಪಡೆಯಲು ಅವರ ಸಂಬಂಧಿಕರು ಹರಸಾಹಸ ಮಾಡಬೇಕಾಗಿದೆ. ರೋಗಿಗಳ ಕುರಿತು ಮಾಹಿತಿ ನೀಡುವ ಸಲುವಾಗಿಯೇ ಸಹಾಯವಾಣಿ ಕೇಂದ್ರವನ್ನು ಆರಂಭಿಸುವ ಚರ್ಚೆ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಅದು ಜಾರಿಗೆ ಬರಬೇಕಿದೆ.

ಕೋವಿಡ್ ನಿರೋಧಕ ಲಸಿಕೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಸಂಗ್ರಹವಿಲ್ಲದೆ ವಾಪಸ್ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದಿಂದ ಲಸಿಕೆ ಪೂರೈಕೆಯಾಗುವವರೆಗೂ ನಾವು ಏನೂ ಮಾಡುವಂತಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

***

ಹೊಸನಗರ: ಕೋವಿಡ್ ಆಸ್ಪತ್ರೆ ಶೀಘ್ರ ಆರಂಭ
ಹೊಸನಗರ:
ತಾಲ್ಲೂಕಿನಲ್ಲಿ  ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ. ಮುಂದೆ ಹೆಚ್ಚು ಪಾಸಿಟಿವ್ ಕಂಡುಬಂದರೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ಆಸ್ಪತ್ರೆ ತೆರೆಯುವ ಚಿಂತನೆ ನಡೆದಿದೆ.

ತಾಲ್ಲೂಕಿನಲ್ಲಿ ದಿನವೂ 25ರಿಂದ 45 ಕೋವಿಡ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಮುಂದೆ ಈ ಪ್ರಮಾಣದಲ್ಲಿ ಏರಿಕೆ ಕಂಡುಬಂದರೆ ತಾಲ್ಲೂಕು ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆ ಆಸ್ಪತ್ರೆ ತೆರೆಯಲು ನಿರ್ಧರಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಮೂವರು ತಜ್ಞವೈದ್ಯರು, 9  ಸಿಬ್ಬಂದಿ ಇದ್ದು, ರೋಗಿಗಳ ಚಿಕಿತ್ಸೆಗೆ ಸಕಲ ವ್ಯವಸ್ಥೆ ಇಲ್ಲಿರುತ್ತದೆ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್.

ಪಾಸಿಟಿವ್ ಬಂದ ರೋಗಿಗಳನ್ನು ಇಲ್ಲಿನ ಟ್ರಯಾಗ್ ಕೇಂದ್ರದಲ್ಲಿ ಚಿಕಿತ್ಸೆಗೆ ಗುರಿಪಡಿಸಲಾಗುತ್ತಿದೆ. ಅವರಲ್ಲಿ ಚೇತರಿಕೆ ಕಂಡು ಬಂದರೆ ಅವರನ್ನು ಹೋಮ್ ಕ್ವಾರೆಂಟೈನ್ ಒಳಪಡಿಸಲಾಗುವದು. ಒಮ್ಮೆ ರೋಗಿ ತೀರ ಅಸ್ವಸ್ಥರಾಗಿದ್ದರೆ ಅವರನ್ನು ಮೆಗ್ಗಾನ್‌ಗೆ ಶಿಫಾರಸು ಮಾಡಲಾಗುತ್ತಿದೆ.

ತಾಲ್ಲೂಕಿನಲ್ಲಿ 30 ಸಾವಿರ ಲಸಿಕೆ ಗುರಿ ಹೊಂದಲಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಆಮ್ಲಜನಕ, ಐಸಿಯು ವ್ಯವಸ್ಥೆ ಮಾಡಲಾಗಿದೆ. ಒಟ್ಟು 28 ಸಿಲಿಂಡರ್ ಇದ್ದು, 3 ಐಸಿಯು ಹಾಸಿಗೆ ಇದೆ. 18 ರೆಮ್‌ಡಿಸಿವಿರ್ ಇಂಜೆಕ್ಷನ್‌ಗಳ ಸಂಗ್ರಹವಿದೆ. ಇಲ್ಲಿನ ಕೆಇಬಿ ರಸ್ತೆಯ ಹಾಸ್ಟೆಲ್‌ನಲ್ಲಿ 30 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ತಹಶೀಲ್ದಾರ್ ಎಸ್.ವಿ. ರಾಜೀವ್ ಮಾಹಿತಿ ನೀಡಿದರು.

***

ಶಿಕಾರಿಪುರ: 40 ಹಾಸಿಗೆಗಳ ಕೋವಿಡ್ ಕೇಂದ್ರ
ಶಿಕಾರಿಪುರ:
ಪಟ್ಟಣದ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿ ಕೊರೊನಾ ಸೋಂಕಿತರಿಗಾಗಿ ಕೋವಿಡ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಸರ್ಕಾರಿ ಆಸ್ಪತ್ರೆಯ ಈ ಘಟಕದಲ್ಲಿ ಒಟ್ಟು 40 ಹಾಸಿಗೆಗಳಿವೆ. 6 ಐಸಿಯು, 3 ವೆಂಟಿಲೇಟರ್ ಸೌಲಭ್ಯವಿದೆ.  ಸೋಂಕು ದೃಢಪಟ್ಟ ರೋಗಿಗಳಿಗೆ ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಸ್ತುತ 25ಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಲಕ್ಷಣ ಹೊಂದಿದವರಿಗೆ ಹಾಗೂ ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಕೋವಿಡ್ ಕೇಂದ್ರದಲ್ಲಿ ದಾಖಲಾತಿ ಮಾಡಿಕೊಳ್ಳುವ ಮೂಲಕ ಕನಿಷ್ಠ 3 ದಿನಗಳು ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದರೆ ಹೋಂ ಕೇರ್‌ಗೆ ಕಳಿಸಲಾಗುಗುತ್ತಿದೆ.

ಸೋಂಕಿತರಿಗೆ ನೀಡುವ ಊಟದ ಗುಣಮಟ್ಟ ಉತ್ತಮವಾಗಿಲ್ಲ ಎಂಬ ದೂರುಗಳು ಈ ಕೋವಿಡ್ ಕೇಂದ್ರದಲ್ಲಿ ಕೇಳಿಬಂದಿದ್ದವು. ಕೆಲವು ದಿನಗಳ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಗುಣಮಟ್ಟದ ಊಟವನ್ನು ಸೋಂಕಿತರಿಗೆ ನೀಡಬೇಕು ಎಂದು ಆಸ್ಪತ್ರೆ ಆಡಳಿತಾಧಿಕಾರಿ ಹಾಗೂ ಊಟ ನೀಡುವ ಗುತ್ತಿಗೆದಾರರನ್ನು ಎಚ್ಚರಿಸಿದ್ದರು.

‘ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಅಗತ್ಯವಾದ ಸೌಲಭ್ಯವನ್ನು ನೀಡಲಾಗುತ್ತಿದೆ. ಸೋಂಕಿತರ ಪ್ರಮಾಣ ಹೆಚ್ಚಾದರೆ, ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್.

***

ರಿಪ್ಪನ್‌ಪೇಟೆ: ಪರೀಕ್ಷಾ ವರದಿ ವಿಳಂಬವೇ ಸಮಸ್ಯೆ
ರಿಪ್ಪನ್‌ಪೇಟೆ:
32 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಂಬುಜ, ನಂಜವಳ್ಳಿ , ಕೋಡೂರು, ಹರತಾಳು, ಜೇನಿ , ಗರತಿಕೆರೆ, ಬಿದರಹಳ್ಳಿ ಸುತ್ತ ಮುತ್ತಲಿನ 65ರಿಂದ 70 ಹಾಗೂ ಮಜರೆ ಹಳ್ಳಿಯ ಹತ್ತಾರು ಜನರು ಪ್ರತಿನಿತ್ಯ ಬೇರೆ ಬೇರೆ ಸಮಸ್ಯೆಗಳ ಚಿಕಿತ್ಸೆಗಾಗಿ  ದಾಂಗುಡಿ ಇಡುತ್ತಾರೆ.

ಇಲ್ಲಿನ ಆಸ್ಪತ್ರೆಯಲ್ಲಿ ನಿತ್ಯ ಆರ್‌ಟಿಪಿಸಿಆರ್‌ ಮಾಡಲು ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳಿಸಿದಲ್ಲಿ ಅದರ ವರದಿಗೆ 3–4 ದಿನ ಕಾಯಬೇಕು.  ಈ ಆರೋಗ್ಯ ಕೇಂದ್ರಕ್ಕೆ ತ್ವರಿತವಾಗಿ ರೋಗ ನಿಯಂತ್ರಣ ಹಾಗೂ ಸೋಂಕಿತರ ಪತ್ತೆಗೆ ಕೋವಿಡ್‌ ತುರ್ತು ನಿರಂತರ ಚಿಕಿತ್ಸಾ ಕೇಂದ್ರ (ಟ್ರಯೇಜ್‌ ಸೆಂಟರ್‌) ಅಗತ್ಯದ ಕುರಿತು ಜಿಲ್ಲಾಧಿಕಾರಿಗೆ ಬೇಡಿಕೆ ಸಲ್ಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು