ಗುರುವಾರ , ಜೂನ್ 30, 2022
23 °C
ರಸ್ತೆ, ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ ವಂಚಿತ ಚಿಪ್ಪಳಿ ಗ್ರಾಮ

ತ್ಯಾಗರ್ತಿ: ಕಟ್ಟಡವಿದ್ದರೂ ಶಾಲೆ ಇಲ್ಲ, ಕಾಲುಸಂಕವೇ ಗತಿ

ಪಾವನಾ ನೀಚಡಿ Updated:

ಅಕ್ಷರ ಗಾತ್ರ : | |

Prajavani

ತ್ಯಾಗರ್ತಿ: ರಸ್ತೆ, ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರಿಗೆ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ ಈ ಗ್ರಾಮಕ್ಕೆ ಮರೀಚಿಕೆ. ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗಲಷ್ಟೇ ನೆನಪಾಗುವ ಗ್ರಾಮ ಆನಂದಪುರ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ.

ಮೂಲಸೌಲಭ್ಯದಿಂದ ವಂಚಿತವಾದ ಕುಗ್ರಾಮ ಇದು. ಶರಾವತಿ ಮುಳುಗಡೆ ಸಂತ್ರಸ್ತರಾದ ಇವರ ಕೂಗು ಯಾರಿಗೂ ಕೇಳುತ್ತಿಲ್ಲ.

ಎರಡು ಕಡೆ ಸಾಗುವಾನಿ ನೆಡುತೋಪು, ಒಂದು ಕಡೆ ನಂದಿಹೊಳೆಯಿಂದ ಕೂಡಿರುವ ದ್ವೀಪದಂತಿರುವ ಈ ಗ್ರಾಮದಲ್ಲಿ 26 ಕುಟುಂಬಗಳಿವೆ. 4 ಪರಿಶಿಷ್ಟ ಜಾತಿ, 5 ಹಿಂದುಳಿದ ವರ್ಗ ಹಾಗೂ 17 ಲಿಂಗಾಯತ ಕುಟುಂಬಗಳಿವೆ.

ಆನಂದಪುರ-ಸಾಗರ ರಾಷ್ಟ್ರೀಯ ಹೆದ್ದಾರಿ 206ರಿಂದ ಸುಮಾರು 3.5 ಕಿ.ಮೀ. ದೂರದಲ್ಲಿ ಚಿಪ್ಪಳಿ ಗ್ರಾಮವಿದೆ. ಗ್ರಾಮವನ್ನು ಸಂಪರ್ಕಿಸುವ ರಸ್ತೆಯು ಮಳೆಗಾಲದಲ್ಲಿ ನೀರಿನಿಂದ ತುಂಬಿ ಹೋಗುತ್ತದೆ. ರಸ್ತೆ ಯಾವುದು, ಚರಂಡಿ ಯಾವುದು ಎಂದು ಗುರುತಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ.

50 ವರ್ಷಗಳಿಂದ ಗ್ರಾಮಕ್ಕೆ ಉತ್ತಮ ರಸ್ತೆ ಕಲ್ಪಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಗ್ರಾಮಕ್ಕೆ 45 ವರ್ಷಗಳ ಹಿಂದೆ ಸರ್ಕಾರಿ ಪ್ರಾಥಮಿಕ ಶಾಲೆ ಮಂಜೂರಾಗಿತ್ತು. ಆದರೆ ಮಕ್ಕಳ ಕೊರತೆಯಿಂದ 17 ವರ್ಷಗಳ ಹಿಂದೆ ಶಾಲೆ ಮುಚ್ಚಿತು. ನಂತರದ ವರ್ಷಗಳಲ್ಲಿ ಶಾಲೆ ನಡೆಸಲು ಅಗತ್ಯ ಮಕ್ಕಳ ಸಂಖ್ಯೆ ಇದ್ದರೂ ಮತ್ತೆ ಶಾಲೆ ಆರಂಭವಾಗಿಲ್ಲ. ಪ್ರತಿವರ್ಷ 1ನೇ ತರಗತಿಯಿಂದ 5ನೇ ತರಗತಿ ವಯೋಮಾನದ ಮಕ್ಕಳು ಶಿಕ್ಷಣಕ್ಕಾಗಿ ದೂರದ ಬ್ಯಾಡರಕೊಪ್ಪ, ಉಳ್ಳೂರು, ಐಗಿನಬೈಲು ಶಾಲೆಗಳಿಗೆ ಅಲೆದಾಡುವಂತಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡವಿದ್ದರೂ ವಿದ್ಯಾಭ್ಯಾಸ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು ಗ್ರಾಮದ ಗುರುನಾಥ ಎಚ್‌. ಆರ್‌.

ಬ್ಯಾಡರಕೊಪ್ಪ ಗ್ರಾಮಕ್ಕೆ ಹೋಗಲು 1.ಕಿ.ಮೀ. ದೂರ ಕ್ರಮಿಸಬೇಕು. ಆದರೆ ಅದು ಕಾಲುಸಂಕದ ದಾರಿ. ಈ ಕಾಲುಸಂಕದಲ್ಲಿ ಚಿಕ್ಕ ಮಕ್ಕಳು ಹೋಗಲು ಪರದಾಡಬೇಕು. ಉಳ್ಳೂರು, ಐಗಿನಬೈಲಿಗೆ 6 ಕಿಲೋ ಮೀಟರ್‌ನಿಂದ 7 ಕಿಲೋ ಮೀಟರ್‌ ಕ್ರಮಿಸಬೇಕು.

ಚಿಪ್ಪಳಿ ಮತ್ತು ಬ್ಯಾಡರಕೊಪ್ಪ ಗ್ರಾಮದ ನಡುವೆ ನಂದಿಹೊಳೆಯಿದೆ ಈ ಹೊಳೆಗೆ ಸೇತುವೆಯಾದರೆ ಚೆನ್ನಶೆಟ್ಟಿಕೊಪ್ಪ, ಗೌತಮಪುರ ಗ್ರಾಮಗಳ ಸಂಪರ್ಕ ಸಮೀಪವಾಗುತ್ತದೆ. ಕಾಸ್ಪಾಡಿ-ತ್ಯಾಗರ್ತಿ ಮಾರ್ಗದ ರಸ್ತೆಯಲ್ಲಿರುವ ಅಡ್ಡೇರಿಯು ಚಿಪ್ಪಳಿ ಗ್ರಾಮದಿಂದ 1 ಕಿ.ಮೀ. ದೂರದಲ್ಲಿದೆ. ಈ ಅಡ್ಡೇರಿ ಮಾರ್ಗದ ಮಧ್ಯೆಯೂ ನಂದಿಹೊಳೆ ಹಾದುಹೋಗಿದೆ. 10 ವರ್ಷಗಳ ಹಿಂದೆ ಕಾಂಕ್ರೀಟಿನ ಕಾಲುಸಂಕ ನಿರ್ಮಿಸಲಾಗಿತ್ತು. ಆದರೆ ಕಾಲುಸಂಕ ನಿರ್ಮಾಣವಾಗಿ ಮೂರೇ ವರ್ಷಕ್ಕೆ ಹೊಳೆಯ ಪ್ರವಾಹಕ್ಕೆ ಕುಸಿದುಹೋಗಿದೆ. ಹೀಗಾಗಿ ಅಡ್ಡೇರಿ ಮತ್ತು ತ್ಯಾಗರ್ತಿ ಸಂಪರ್ಕಿಸಲು ಕಾಸ್ಪಾಡಿ ಮೂಲಕ 10 ಕಿ.ಮೀ. ಸುತ್ತಿ ಹೋಗಬೇಕು. ಕಾಲುಸಂಕದ ದುರಸ್ತಿಗೆ ‌ಜನ‌ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂಬುದು ಗ್ರಾಮಸ್ಥರ ದೂರು.

ಗ್ರಾಮದ ಕುಟುಂಬಗಳಿಗೆ ಗ್ರಾಮ ಪಂಚಾಯಿತಿಯಿಂದ‌ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಒಂದು ಮನೆಯಿಂದ ಇನ್ನೊಂದು ಮನೆಗೆ ಬಹಳ ದೂರದ ಅಂತರ ಇರುವುದರಿಂದ ಕುಡಿಯುವ ನೀರಿನ ಯೋಜನೆ ರೂಪಿಸುವುದು ಸವಾಲಾಗಿದೆ. ಎಲ್ಲ ಕುಟುಂಬಗಳೂ ಬಾವಿ, ಕೆರೆ, ಹೊಂಡದ ನೀರನ್ನು ಅವಲಂಬಿಸಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಈ ಗ್ರಾಮದ ಒಳಗಿನ ರಸ್ತೆ, ಚರಂಡಿ ಇತ್ಯಾದಿ ಕಾಮಗಾರಿ ನಡೆದಿದ್ದರೂ ಕೇವಲ ಸರ್ಕಾರಿ ಕಡತದ ಅಭಿವೃದ್ಧಿ ಸೂಚಕವಾಗಿದೆಯೇ ವಿನಾ ಶಾಶ್ವತವಾಗಿ ಉಳಿಯುವಂತಹ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ದೂರುತ್ತಾರೆ ಶಶಿಭೂಷಣ.

ಗ್ರಾಮದಲ್ಲಿ ಸಾಗುವಾನಿ ನೆಡುತೋಪು ಇದೆ. ಇದರಿಂದ ಪದೇ ಪದೇ ಮರದ ರೆಂಬೆ ಬೀಳುವ ಕಾರಣ ಆಗಾಗ ವಿದ್ಯುತ್ ಸಂಪರ್ಕ ಸ್ಥಗಿತವಾಗುತ್ತದೆ. ಇಡೀ ಗ್ರಾಮಕ್ಕೇ ಒಂದೇ ಒಂದು ವಿದ್ಯುತ್ ಪರಿವರ್ತಕ ಇದೆ. ಮಳೆಗಾಲದಲ್ಲಿ ಗುಡುಗು, ಮಿಂಚು, ಗಾಳಿಮಳೆ ಮತ್ತು ಅತಿಯಾದ ವಿದ್ಯುತ್ ಪ್ರವಾಹವಾದಾಗ ಟಿ.ಸಿ ಸುಟ್ಟು ಹೋದರೆ ಹೊಸ ಟಿಸಿ ಅಳವಡಿಸುವವರೆಗೆ ಇಡೀ ಗ್ರಾಮವೇ ಕಗ್ಗತ್ತಲಿನಲ್ಲಿ ಕಳೆಯಬೇಕಾಗುತ್ತದೆ.

ಬಗರ್‌ಹುಕುಂ ಮಂಜೂರಾತಿ, ಅರಣ್ಯಹಕ್ಕು ಕಾನೂನಿನ ಪ್ರಕಾರ ಸಾಗುವಳಿ ಭೂಮಿಗೆ ಇಲ್ಲಿನ ಜನರು ಅರ್ಜಿ ಸಲ್ಲಿಸಿದ್ದರೂ ಅದು ನನೆಗುದಿಗೆ ಬಿದ್ದಿದೆ. ಮನೆ ಜಾಗದ ಹಕ್ಕುಪತ್ರ ಮಂಜೂರಾಗಿಲ್ಲ. ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಹಕ್ಕುಪತ್ರದ ಸಮಸ್ಯೆ ಎದುರಾಗುತ್ತಿದೆ.

ಸಾರಿಗೆ ಸಂಪರ್ಕ ಇಲ್ಲ: ಸಾರಿಗೆ ಸಂಪರ್ಕ ಕಾಣದ ಕುಗ್ರಾಮ ಇದು. ಪಟ್ಟಣಕ್ಕೆ ಹೋಗಬೇಕೆಂದರೆ ಸಾಗರ-ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರವರೆಗೆ 3.5 ಕಿ.ಮೀ. ದೂರದ ನೇದರವಳ್ಳಿ ಅಥವಾ 1.5 ಕಿ.ಮೀ. ದೂರದ ಐಗಿನಬೈಲು ಬಸ್ ತಂಗುದಾಣ ತಲುಪಬೇಕು. ವೃದ್ಧರು, ಮಹಿಳೆಯರು, ಚಿಕ್ಕಮಕ್ಕಳು ಮತ್ತು ಶಾಲಾ ಮಕ್ಕಳು ನಡೆದು ಸಾಗುವುದು ನಿತ್ಯದ ಗೋಳಾಗಿದೆ.

ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಮರ್ಪಕವಾಗಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಬೇರೆ ಗ್ರಾಮದವರನ್ನು ಸಂಪರ್ಕಿಸಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕುಗ್ರಾಮವಾದ ಕಾರಣ ಸಾರ್ವಜನಿಕರು ಹಮ್ಮಿಕೊಳ್ಳುವ ಸಭೆ ಸಮಾರಂಭಗಳಿಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಿದರೂ ಬರುವುದಿಲ್ಲ. ಈ ಹಿಂದೆ ಜಿಲ್ಲಾ ಪಂಚಾಯಿತಿಯಿಂದ 1 ಕಿ.ಮೀ. ಉದ್ದದ ರಸ್ತೆ ಜಲ್ಲೀಕರಣ ಮಾಡಿಸಿ ಕೊಟ್ಟಿದ್ದು ಬಿಟ್ಟರೆ ಉಳಿದಂತೆ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ದೂರುತ್ತಾರೆ ಗ್ರಾಮದ ವೀರೇಂದ್ರ ಚಿಪ್ಪಳಿ.

*
ಚುನಾವಣೆಯ ಸಂದರ್ಭದಲ್ಲಿ ಗ್ರಾಮದ ಸಮಸ್ಯೆ ಆಲಿಸುವ ಜನಪ್ರತಿನಿಧಿಗಳು ಚುನಾವಣೆಯ ನಂತರ ಇತ್ತ ಸುಳಿಯುವುದಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲದ ಕಾರಣ ಮುಂದಿನ ಪೀಳಿಗೆಯು ಮೂಲಸೌಕರ್ಯಗಳಿಂದ ವಂಚಿತರಾಗುವಂತಾಗಿದೆ.
–ವೀರೇಂದ್ರ ಚಿಪ್ಪಳಿ, ಗ್ರಾಮಸ್ಥ

*
ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ₹ 30 ಲಕ್ಷ ಅನುದಾನ ಇದೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಕಾಲು ಸಂಕವೇ ಗತಿ.
-ಗುರುನಾಥ ಎಚ್‌.ಆರ್‌., ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು