ತೀರ್ಥಹಳ್ಳಿ: ಪ್ರಕೃತಿಯ ಮಡಿಲಲ್ಲಿರುವ ಕವಲೇದುರ್ಗ ಕೋಟೆ ನಿರ್ವಹಣೆಯಿಲ್ಲದೆ ಸೊರಗಿದ್ದು, ಇಲ್ಲಿಗೆ ಭೇಟಿ ನೀಡುವ ನೂರಾರು ಪ್ರವಾಸಿಗರು ಸರ್ಕಾರವನ್ನು ಶಪಿಸುವಂತಾಗಿದೆ.
ಕಸಬಾ ಹೋಬಳಿಯ ಕವಲೇದುರ್ಗ ಗ್ರಾಮದ ಸ.ನಂ. 27ರಲ್ಲಿ 80 ಎಕರೆ ಪ್ರದೇಶವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸುಪರ್ದಿಯಲ್ಲಿದೆ. 9ನೇ ಶತಮಾನದ ಇತಿಹಾಸ ಹೊಂದಿರುವ ಈ ಪ್ರಾಕೃತಿಕ ರಮ್ಯ ತಾಣಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. 1958ರ ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮದಡಿ ಕೋಟೆಯನ್ನು ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿದೆ.
ಕಳೆದ ವರ್ಷ ಉಂಟಾಗಿದ್ದ ಮೇಘಸ್ಫೋಟಕ್ಕೆ ಧರೆ, ಮರ, ಕೋಟೆಯ ಕಲ್ಲುಗಳು ಜರುಗಿದ್ದವು. ಅಲ್ಲಲ್ಲಿ ಬೃಹತ್ ಗಿಡಗಳು ಬೆಳೆದಿದ್ದು ದಾರಿ ಕೂಡ ಮುಚ್ಚುವ ಹಂತಕ್ಕೆ ತಲುಪಿದೆ. ಈವರೆಗೂ ದುರಸ್ತಿ ಕಾಮಗಾರಿ ನಡೆದಿಲ್ಲ. ಸಾಲೂರು ಗ್ರಾಮ ಪಂಚಾಯಿತಿಯು ಕೇವಲ ಲಾಭವನ್ನಷ್ಟೇ ನೋಡುತ್ತಿದ್ದು, ಕೋಟೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
7 ಸುತ್ತಿನ ಭದ್ರ ಕೋಟೆಯಾಗಿದ್ದ ಕವಲೇದುರ್ಗ ಈಗ 3 ಸುತ್ತಿನ ಕೋಟೆ ಹೊಂದಿದೆ. 5 ಕಿಲೋ ಮೀಟರ್ ನಡಿಗೆಯ ಮೂಲಕ ಕೋಟೆಯನ್ನು ತಲುಪಬಹುದು. ಪ್ರತಿ ಸುತ್ತಿನಲ್ಲಿ ಮಹಾದ್ವಾರ, ರಕ್ಷಣಾ ಕೊಠಡಿ, ಆರಂಭದಲ್ಲಿ ಕಾಶಿ ವಿಶ್ವನಾಥ ಮತ್ತು ಲಕ್ಷ್ಮೀ ನಾರಾಯಣ ದೇಗುಲ, ಮಧ್ಯಭಾಗದಲ್ಲಿ ಹಾನಿಗೊಳಗಾದ ಅರಮನೆ, ಮೇಲ್ಭಾಗದಲ್ಲಿ ಶಿಖರೇಶ್ವರ ದೇವಸ್ಥಾನ ನೋಡಬಹುದಾಗಿದೆ.
ಅಧಿಕ ಮಳೆ, ನಿರ್ವಹಣೆ ಕೊರತೆಯಿಂದ ಕೋಟೆ ನಿರಂತರ ಹಾನಿಯಾಗುತ್ತಿದೆ. ಶಿಖರದ ಮೇಲ್ಭಾಗದಲ್ಲಿರುವ ಶಿಖರೇಶ್ವರ ದೇವಸ್ಥಾನದ ಚಾವಣಿ ಉದುರುವ ಹಂತದಲ್ಲಿದ್ದು, ಶಿವಲಿಂಗ ಮಣ್ಣಿನೊಳಗೆ ಕುಸಿಯುತ್ತಿದೆ. ಕೋಟೆಯ ಎರಡನೇ ಸುತ್ತಿನಲ್ಲಿರುವ ಕಲ್ಲಿನ ಗೋಡೆಯೂ ಕುಸಿಯುತ್ತಿದ್ದು, ದುರಸ್ತಿಯಾಗಿಲ್ಲ.
ಉದ್ಘಾಟನೆಯಾಗದ ಶೌಚಾಲಯ: ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಶಿವಮೊಗ್ಗ ನಿರ್ಮಿತಿ ಕೇಂದ್ರದಿಂದ 2021ನೇ ಸಾಲಿನಲ್ಲಿ ₹ 25 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ಕೋಟೆಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕೆ ನಿರ್ಮಿಸಿದ್ದ ಈ ಶೌಚಾಲಯ ನಿರ್ಮಾಣಗೊಂಡು 2 ವರ್ಷ ಕಳೆದಿದ್ದರು ಇಂದಿಗೂ ಉದ್ಘಾಟನೆಯಾಗಿಲ್ಲ. ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕವಲೇದುರ್ಗ ಕೋಟೆಯ ಬಗ್ಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿಶೇಷ ಸಮಿತಿ ರಚಿಸುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಅವಕಾಶ ಇದೆ. ಶಿಖರದವರೆಗೆ ಚಾರಣಕ್ಕೆ ಅವಕಾಶ ನೀಡದಿದ್ದರೆ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗಲಿದೆ.ಅಶ್ವಲ್ ಗೌಡ ಸ್ಥಳೀಯ ಯುವ ಮುಖಂಡ
ಶಿಖರ ಭಾಗದಲ್ಲಿ ಗುಡ್ಡ ಜರುಗಿದೆ. ಜೂನ್ ತಿಂಗಳಿನಲ್ಲಿ ಅನುದಾನ ಬಂದಿದ್ದು ಮಳೆ ಬಿಟ್ಟ ನಂತರ ದುರಸ್ತಿ ಕಾಮಗಾರಿ ಆರಂಭಿಸಲಾಗುತ್ತದೆ ಗೌತಮ್ ಕೆ.ಸಹಾಯಕ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪ ವಿಭಾಗ ಪುರಾತತ್ವ ಇಲಾಖೆ
ಹಿಂದಿನ ಗುರುಗಳು ಕವಲೇದುರ್ಗ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಸ್ಥಾಪಿಸಿದ್ದರು. ಔಷಧವನ ಗೋಶಾಲೆ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ₹ 50 ಲಕ್ಷ ಅನುದಾನ ಕೋರಿದ್ದರು. ಆದರೆ ಬಂದಿಲ್ಲಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಕವಲೇದುರ್ಗ ಕೆಳದಿ ರಾಜಗುರು ಮಹಾಮತ್ತಿನ ಸಂಸ್ಥಾನ ಮಠ
ಶತಮಾನಗಳ ಇತಿಹಾಸ 9ನೇ ಶತಮಾನದಲ್ಲಿ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೇಗಾರು ಇಲ್ಲಿ ಆಳ್ವಿಕೆ ನಡೆಸಿದ್ದರು. ಮಲ್ಲವ ಅರಸರು ದಾಳಿ ನಡೆಸಿ ಕೋಟೆ ವಶಪಡಿಸಿಕೊಂಡ ನಂತರ ಭುವನಗಿರಿ ದುರ್ಗವಾಗಿ ಇದು ಮಾರ್ಪಡುತ್ತದೆ. ವಿಜಯನಗರ ಸಾಮಾಜ್ಯದ ಸಾಮಂತ ರಾಜ್ಯವಾಗಿದ್ದ ಭುವನಗಿರಿಯನ್ನು 14ನೇ ಶತಮಾನದಲ್ಲಿ ಚಲುವರಂಗಪ್ಪ ನವೀಕರಿಸುತ್ತಾನೆ. 15ನೇ ಶತಮಾನದಲ್ಲಿ ಕೆಳದಿಯ ವೆಂಕಟಪ್ಪ ನಾಯಕ ಅರಮನೆ ನಿರ್ಮಿಸಿ ಕೋಟೆಯನ್ನು ಭದ್ರಪಡಿಸುತ್ತಾನೆ. ಕೆಳದಿ ಸಂಸ್ಥಾನದ ಕಾಲದಲ್ಲಿ ಗಿರಿದುರ್ಗವೆಂದು ಕರೆಯಿಸಿಕೊಂಡ ಇದು ಗುಪ್ತ ರಾಜಧಾನಿಯಾಗಿತ್ತು. ಹೈದರಾಲಿಯು ಕೋಟೆಯನ್ನು ಆಕ್ರಮಿಸಿ ಇದನ್ನು ಕಾವಲ್ ದುರ್ಗ ಎಂದು ಕರೆಯುತ್ತಾನೆ. 17ನೇ ಶತಮಾನದಲ್ಲಿ ಕುತ್ಸಿತ ಶಿವಪ್ಪನಾಯಕ ಕೆಳದಿ ಸಂಸ್ಥಾನದ ಅರಸನಾಗುತ್ತಾನೆ. ಇದರಿಂದ ನೊಂದ ಪತ್ನಿ ಕೆಳದಿ ಚೆನ್ನಮ್ಮ ತನ್ನ ಬೆಂಬಲಿಗರೊಂದಿಗೆ ಕವಲೇದುರ್ಗದಲ್ಲಿ ಪಟ್ಟಾಭಿಷೇಕ ನೆರವೇರಿಸಿಕೊಳ್ಳುತ್ತಾಳೆ. ಕುತ್ಸಿತ ಶಿವಪ್ಪನಾಯಕನ್ನು ಸೋಲಿಸಿ ಬಿದನೂರು ಕೆಳದಿಯನ್ನು ಆಕ್ರಮಿಸಿಕೊಂಡು ಆಳ್ವಿಕೆ ನಡೆಸುತ್ತಾಳೆ. ಗುಪ್ತ ಸ್ಥಳವಾಗಿದ್ದ ಕವಲೇದುರ್ಗ ಮೊದಲ ಬಾರಿಗೆ ಕೆಳದಿ ಚೆನ್ನಮ್ಮನ ಮೂಲಕ ಬಯಲಿಗೆ ಬರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.