ಗುರುವಾರ , ಮಾರ್ಚ್ 30, 2023
21 °C
ಶಾಲೆ ಜಾಗದ ಖಾತೆ ಖಾಸಗಿ ವ್ಯಕ್ತಿ ಹೆಸರಿಗೆ ವರ್ಗಾವಣೆ

ಶತಮಾನದ ಸರ್ಕಾರಿ ಶಾಲೆಗೆ ಕಂಟಕ!

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಆದರೆ ಈ ಮಾತು ಕೇವಲ ಹೇಳಿಕೆಗೆ ಸೀಮಿತವೇ ಎನ್ನುವ ಅನುಮಾನ ಬರುವ ರೀತಿಯಲ್ಲಿ ಕೆಲವು ವಿದ್ಯಮಾನಗಳು ನಡೆಯುತ್ತಿರುತ್ತವೆ.

ತಾಲ್ಲೂಕಿನ ತುಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಈಗ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ಐದು ತಲೆಮಾರಿನ ಜನರಿಗೆ ಅಕ್ಷರ ದೀವಿಗೆ ಹಿಡಿದ ಹೆಗ್ಗಳಿಕೆ ಈ ಶಾಲೆಯದ್ದು. ‘ಮುಳುಗಡೆ’ಯಿಂದಾಗಿ ಬದುಕಿನ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಶಿಕ್ಷಣದ ‘ಬೆಳಕು’ ನೀಡಿದ ಈ ಶಾಲೆಯ ಜಾಗದ ಅಸ್ತಿತ್ವಕ್ಕೆ ಈಗ ಕಂಟಕ ಎದುರಾಗಿದೆ.

1919ರಲ್ಲಿ ದಿವಾನರ ಕಾಲದಲ್ಲಿ ತುಮರಿ ಗ್ರಾಮದ ಸ.ನಂ. 24ರಲ್ಲಿ ಸರ್ಕಾರಿ ಶಾಲೆ ನಿರ್ಮಾಣವಾಗಿತ್ತು. ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ಮೂರು ಎಕರೆ ಪ್ರದೇಶದಲ್ಲಿ
ಆಟದ ಮೈದಾನವಿದೆ. ಇದೇ ಮೈದಾನದಲ್ಲಿ ಪಕ್ಕದ ಪ್ರೌಢಶಾಲೆ ಹಾಗೂ ಕಾಲೇಜಿನ ಕ್ರೀಡಾಕೂಟಗಳು ನಡೆಯುತ್ತ ಬಂದಿದೆ.

2020ರ ಏಪ್ರಿಲ್ ತಿಂಗಳಲ್ಲಿ ಇಲ್ಲಿನ ತಹಶೀಲ್ದಾರ್ ಮಾಡಿರುವ ಆದೇಶದ ಪ್ರಕಾರ ಸರ್ಕಾರಿ ಶಾಲೆಗೆ ಸೇರಿದ ಪ್ರದೇಶದ ಖಾತೆಯನ್ನು ಸ್ಥಳ ಪರಿಶೀಲನೆ ಮಾಡದೆ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಸರ್ಕಾರಿ ಶಾಲೆ ಕಟ್ಟಡ ಹಾಗೂ ಪಕ್ಕದಲ್ಲಿನ ಮೈದಾನದ ಮಾಲೀಕತ್ವ ಖಾಸಗಿಯವರ ಪಾಲಾಗುವ ಅಪಾಯ ಎದುರಾಗಿದೆ.

ನೂರು ವರ್ಷದ ಇತಿಹಾಸವಿರುವ ಸರ್ಕಾರಿ ಶಾಲೆ ಕಟ್ಟಡ ಮತ್ತು ಆಟದ ಮೈದಾನದ ಜಾಗವನ್ನು ಶಾಲೆಗೆ ಮಂಜೂರು ಮಾಡಿ ಎಂದು ಶಾಲಾಭಿವೃದ್ಧಿ ಸಮಿತಿಯವರು ಒಂದು ದಶಕದಿಂದ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿ ಅಲೆಯುತ್ತಲೇ ಇದ್ದಾರೆ. ಈ ನಡುವೆ ಶಾಲೆಯ ಜಾಗದ ಖಾತೆ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ವರ್ಗಾವಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

‘ಖಾತೆ ಬದಲಾವಣೆ ಬೆನ್ನಲ್ಲೇ ಆಟದ ಮೈದಾನದ ಅಭಿವೃದ್ಧಿಗೆ ಉದ್ಯೋಗಖಾತ್ರಿ ಯೋಜನೆಯಡಿ ₹ 5 ಲಕ್ಷ ವೆಚ್ಚದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಕಾಮಗಾರಿಗೆ
ತಮ್ಮ ಹೆಸರಿಗೆ ಖಾತೆ ಬರೆಯಿಸಿಕೊಂಡವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಶತಮಾನೋತ್ಸವ ಆಚರಣೆ ಸಂಭ್ರಮದಲ್ಲಿರುವ ಸರ್ಕಾರಿ ಶಾಲೆ ಇಕ್ಕಟ್ಟಿಗೆ ಸಿಲುಕಿದೆ. ನಾವು ಶಾಲೆಯ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದ್ದೆವು. ಆದರೆ ಈಗ ಶಾಲೆಯ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಶಾಲೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿ ಬಂದಿರುವುದು ಬೇಸರ ತಂದಿದೆ’ ಎನ್ನುತ್ತಾರೆ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಲೋಕಪಾಲ ಜೈನ್.

ತುಮರಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಂದಾಯ ಭೂಮಿಯ ಖಾತೆಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಬರೆಸಿಕೊಂಡು ನಂತರ ಅವುಗಳನ್ನು ಮತ್ತೊಬ್ಬರಿಗೆ
ಮಾರಾಟ ಮಾಡುವುದು ಈಗೀಗ ದಂಧೆಯಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಅಧಿಕಾರಿಗಳು ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತುಮರಿ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಜಾಗದ ಖಾತೆ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ಬದಲಾವಣೆಯಾಗಿರುವ ವಿಷಯ ಗಮನಕ್ಕೆ ಬಂದಿದೆ. ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಶಾಲೆಯ ಕಟ್ಟಡ ಹಾಗೂ ಆಟದ ಮೈದಾನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.

ಚಂದ್ರಶೇಖರ್ ನಾಯ್ಕ್, ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು