ಸೋಮವಾರ, ಜನವರಿ 25, 2021
27 °C
ಅನುದಾನ ಕೊರತೆ: ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಮಾತ್ರ ವೇತನ

ವಿ.ವಿ ಅತಿಥಿ ಉಪನ್ಯಾಸಕರಿಗಿಲ್ಲ ವೇತನ

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮರೆತಿದೆ.

ಕೊರೊನಾ ಕಾರಣದಿಂದ ಕೆಲಸವೂ ಇಲ್ಲದೇ ವೇತನವೂ ಸಿಗದೆ ಕುಟುಂಬ ನಿರ್ವಹಣೆಗೆ ಪರದಾಡಿದ್ದ ಅತಿಥಿ ಉಪನ್ಯಾಸಕರು ವೇತನಕ್ಕಾಗಿ ಸರ್ಕಾರದ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಇವರನ್ನು ಬೆಂಬಲಿಸಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕೂಡ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಇವೆಲ್ಲದರ ಫಲವಾಗಿ ಈಗ ಸರ್ಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡಿದೆ.

ಆದರೆ, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಏ.10ರವರೆಗೆ ಗೌರವಧನ ಪಾವತಿಸಲಾಗಿದೆ. ನಂತರ ನಾಲ್ಕೈದು ತಿಂಗಳು ಗೌರವಧನ ಕೈ ಸೇರಿಲ್ಲ. ಇದು ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಪೆಟ್ಟು ನೀಡಿದೆ. ಕಾಯಂ ನೌಕರರಿಗೆ ಸರಿಸಮನಾಗಿ ಪಾಠ ಪ್ರವಚನ ನೀಡುತ್ತಿರುವ ಅತಿಥಿ ಉಪನ್ಯಾಸಕರು ಇದೀಗ ನಿತ್ಯವೂ ಸಂಕಷ್ಟ ಪಡುವಂತಾಗಿದೆ.

ಸಹ್ಯಾದ್ರಿ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜು, ಕಡೂರು ಹಾಗೂ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಚಿಕ್ಕಮಗಳೂರಿನಲ್ಲಿರುವ ಕಾಲೇಜುಗಳಲ್ಲಿ ಒಟ್ಟು 300 ಮಂದಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಕೊರೊನಾದಿಂದ ಇದೀಗ ಗೌರವಧನವಿಲ್ಲದೆ ಪರದಾಡುವಂತಾಗಿದೆ. ಪಿಎಚ್‍ಡಿ ಮಾಡಿಕೊಂಡರೂ ಅಲ್ಪ ವೇತನಕ್ಕೆ ದುಡಿಯುತ್ತಿದ್ದ ಉಪನ್ಯಾಸಕರ ಬದುಕು ಬೀದಿಗೆ ಬಂದಿದೆ.

ಮನೆ ಬಾಡಿಗೆ ಕಟ್ಟಲು ಬಡ್ಡಿ ಸಾಲ: ಬಹಳಷ್ಟು ಉಪನ್ಯಾಸಕರು ಬಾಡಿಗೆ ಮನೆಗಳನ್ನೇ ಆಶ್ರಯಿಸಿದ್ದಾರೆ. ಎಂಟು ತಿಂಗಳಿಂದ ವೇತನವಿಲ್ಲದೇ ಪರದಾಡುತ್ತಿರುವ ಅತಿಥಿ ಉಪನ್ಯಾಸಕರು ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಮನೆ ತೊರೆದು ಹೋಗಿದ್ದಾರೆ. ಇನ್ನು ಕೆಲವರು ಬಡ್ಡಿಸಾಲ, ಚಿನ್ನಾಭರಣ ಅಡವಿಟ್ಟು ಬಾಡಿಗೆ ಕಟ್ಟಿ ಜೀವನ ನಡೆಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅತಿಥಿ ಉಪನ್ಯಾಸಕರೊಬ್ಬರು ಅಳಲು ತೋಡಿಕೊಂಡರು.

ಸರ್ಕಾರದಿಂದ ಬಾರದ ಅನುದಾನ
ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಯಾವುದೇ ವೇತನ ನೀಡುವುದಿಲ್ಲ. ವಿಶ್ವವಿದ್ಯಾಲಯಕ್ಕೆ ನೀಡುವ ಅನುದಾನದಲ್ಲೇ ಅತಿಥಿ ಉಪನ್ಯಾಸರಿಕರಿಗೆ ವೇತನ ಪಾವತಿ ಮಾಡಬೇಕಿದೆ. ಆದರೆ, ಕೊರೊನಾ ಕಾರಣದಿಂದ ವಿಶ್ವವಿದ್ಯಾಲಯಕ್ಕೆ ನೀಡಬೇಕಾಗಿರುವ ₹ 45 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳು ಪಾವತಿಸುವ ಶುಲ್ಕದಿಂದಲೇ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲಾಗುತ್ತಿತ್ತು. ಇತ್ತ ಕಾಲೇಜು ಆರಂಭವಾಗದೇ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ. ಹೀಗಾಗಿ ವಿವಿಯಲ್ಲಿ ಆದಾಯ ಕೂಡ ಕಡಿಮೆ ಆಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನವೆಂಬರ್ ತಿಂಗಳಿಂದ ಕಾಲೇಜುಗಳು ಆರಂಭವಾಗಿದ್ದು, ಅತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡುತ್ತೇವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು