ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ | ತನಿಖೆ ಸಿಬಿಐಗೆ ವಹಿಸಲು ಈಶ್ವರಪ್ಪ ಆಗ್ರಹ

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ; ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ
Published 31 ಮೇ 2024, 15:21 IST
Last Updated 31 ಮೇ 2024, 15:21 IST
ಅಕ್ಷರ ಗಾತ್ರ

ಶಿವಮೊಗ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು. ಪ್ರಕರಣನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು. 

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಗಮದ ₹ 187 ಕೋಟಿ ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದೆ. ಹೊರ ರಾಜ್ಯದಲ್ಲಿರುವ ಖಾತೆಗಳಿಗೂ ಹೋಗಿದೆ. ಸುಮಾರು ₹ 85 ಕೋಟಿ ಹಣ ಅವ್ಯವಹಾರ ಆಗಿದೆ ಎಂದು ಸ್ವತಃ ಅಧಿಕಾರಿಯೇ ಡೆತ್‌ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಇದೆ’ ಎಂದರು.

‘ಸಚಿವರ ಮೌಖಿಕ ಆದೇಶದ ಮೇಲೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಇದು ಬಿ. ನಾಗೇಂದ್ರ ಅವರು ಹೇಳಿದಂತೆ ಅಲ್ಲವೇ? ಸಚಿವರು ಎಂದರೇ ಯಾರು. ಅವರ ಖಾತೆಯಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಲು ಆಗುತ್ತದೆಯೇ? ನನ್ನ ಪ್ರಕರಣ ಬೇರೆ ಈ ಪ್ರಕರಣ ಬೇರೆ ಎನ್ನುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಪರಿಜ್ಞಾನವಿದೆಯೇ’ ಎಂದು ಪ್ರಶ್ನಿಸಿದರು. 

‘ಚಂದ್ರಶೇಖರನ್ ಕುಟುಂಬಸ್ಥರಿಗೆ ಸರ್ಕಾರ ₹ 50 ಲಕ್ಷ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಶಿವಮೊಗ್ಗದ ದಾನಿಗಳ ಮೂಲಕ ಹಣ ಸಂಗ್ರಹ ಮಾಡಿ ಕೊಡಲಾಗುವುದು’ ಎಂದರು. 

ಪೊಲೀಸರು ನೋಡಿಕೊಂಡು ತಿನ್ನಲಿ: ‘ಪೊಲೀಸರು ತಿನ್ನುವುದರಲ್ಲಿ ನೋಡಿ ತಿನ್ನಬೇಕು. ಮಟ್ಕಾ, ಜೂಜಾಟ, ಗಾಂಜಾ ಸೇರಿದಂತೆ ಇನ್ನಿತರ ಅಕ್ರಮ ದಂಧೆ ನಡೆಸುವವರಿಂದ ಹಣ ಪಡೆದು ನಿಮ್ಮ ಮಕ್ಕಳಿಗೆ ಓದಿಸಿದರೇ, ಮನೆ ಮಡದಿ ಮತ್ತು ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿ ಮಾಡಿದರೆ ದೇವರು ಮೆಚ್ಚುವುದಿಲ್ಲ. ಶಾಲಾ ಕಾಲೇಜುಗಳ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಇಂತಹವರ ಬಳಿ ಹಣ ತಿಂದರೇ ಶಾಪ ತಟ್ಟುತ್ತದೆ. ತಿನ್ನುವಂತಹ ಪ್ರಕರಣಗಳಲ್ಲಿ ತಿನ್ನಬೇಕು. ಯಾರು ಸತ್ಯ ಹರಿಶ್ಚಂದ್ರ ಅಲ್ಲ, ಅಕ್ರಮ ದಂಧೆ ನಡೆಸುವವರ ಬಳಿ ಪೊಲೀಸರು ಹಣ ತಿಂದಿಲ್ಲ ಎಂದು ಎಸ್ಪಿ ಹೇಳಿ ಬಿಡಲಿ ನೋಡೋಣ’ ಎಂದು ಈಶ್ವರಪ್ಪ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಶಂಕರ್ ಗನ್ನಿ, ಮಹಾಲಿಂಗ ಶಾಸ್ತ್ರಿ, ಬಾಲು, ಸತ್ಯನಾರಾಯಣ ಇದ್ದರು.

ನೆರವು: ₹ 3 ಲಕ್ಷ ಕೊಟ್ಟ ಈಶ್ವರಪ್ಪ

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಕುಟುಂಬಸ್ಥರಿಗೆ ₹ 3 ಲಕ್ಷದ ಚೆಕ್‌ ನೀಡುವ ಮೂಲಕ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರು ಆರ್ಥಿಕ ಸಹಾಯ ಮಾಡಿದರು.  ಚಂದ್ರಶೇಖರನ್ ಅವರ ಮನೆಗೆ ತೆರಳಿ ಅಧಿಕಾರಿ ಪತ್ನಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು ಚೆಕ್‌ ನೀಡಿದರು. ಪುತ್ರ ಕೆ.ಇ. ಕಾಂತೇಶ್‌ ಇದ್ದರು. ‘ಪ್ರಜಾವಾಣಿ’ಗೆ ಮೆಚ್ಚುಗೆ: ಮಂಗಳೂರಿನ ಕಂಕನವಾಡಿ ರಸ್ತೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಹಾಕಲಾಗಿದೆ ಎಂಬ ಸತ್ಯ ವರದಿಯನ್ನು ‘ಪ್ರಜಾವಾಣಿ’ ಪತ್ರಿಕೆ ವರದಿ ಮಾಡಿದೆ ಎಂದು ಇದೇ ವೇಳೆ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT