ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜವಂಶ ಪರಂಪರೆಯ ಸಮುದಾಯ

ವನ್ನಿಕುಲ ಕ್ಷತ್ರೀಯ ಸಮಾಜದ ಸ್ವಾಭಿಮಾನಿ ಸಮಾವೇಶದಲ್ಲಿ ಸಂಸದ ಬಣ್ಣನೆ
Last Updated 27 ಜೂನ್ 2022, 4:12 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಮತ್ತು ನ್ಯಾಯ ಒದಗಿಸಲು ವನ್ನಿಕುಲ ಮಹಾಸಭಾವನ್ನು 2021ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಆ ಮೂಲಕ ಸಮಾಜದ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಮೀಪದ ಮಾಚೇನಹಳ್ಳಿಯಲ್ಲಿ ಕರುನಾಡು ರಾಜ್ಯ ವನ್ನಿಕುಲ ಕೃತಿಯ ಮಹಾಸಭಾ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವನ್ನಿಕುಲ ಕ್ಷತ್ರಿಯ ಸಮುದಾಯದ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ವನ್ನಿಕುಲ ಪರಂಪರೆಯ ಚೋಳ ವಂಶಸ್ಥರಾದ ಮನ್ನಾ‌ ಮನ್ನನ್‌ ಭಾಗಿಯಾಗಿದ್ದಾರೆ. ಇದು ಈಗಲೂ ಈ ಸಮಾಜದಲ್ಲಿ ರಾಜವಂಶದವರು ಇದ್ದಾರೆ ಎಂಬುದನ್ನು ತಿಳಿಸಿಕೊಟ್ಟಂತಾಗಿದೆ ಎಂದರು.

ರಾಜವಂಶದ ಪರಂಪರೆಯಿಂದ ಬಂದಿರುವ ಇತಿಹಾಸ ಹೊಂದಿದ್ದರೂ ಈಗ ಸಮಾಜ ತುಳಿತಕ್ಕೆ ಒಳಗಾಗಿರುವುದು ವಿಪರ್ಯಾಸ. ಇಂತಹ ಬೃಹತ್‌ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದು ಅವರು ತಿಳಿಸಿದರು.

ಸದ್ಗುರು ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಎಚ್.ಡಿ. ಕುಮಾರಸ್ವಾಮಿ, ವನ್ನಿಕುಲ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂದಕುಮಾರ್ ಗೌಡರ್, ವಿಧಾನ ಪರಿಷತ್
ಸದಸ್ಯರಾದ ಆಯನೂರು ಮಂಜುನಾಥ್, ಅರುಣ್ ಡಿ.ಎಸ್, ಶಾಸಕರಾದ ಅಶೋಕ್ ನಾಯ್ಕ್, ಸಂಗಮೇಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್, ಮುಖಂಡರಾದ ಭಾನುಪ್ರಕಾಶ್, ಜಿ.ಕೆ.ಮಣಿ ಉಪಸ್ಥಿತರಿದ್ದರು.

ಆಗಸ್ಟ್‌ನಿಂದ ಗ್ರಾಮ ವಾಸ್ತವ್ಯ: ಎಚ್‌ಡಿಕೆ

‘ಆಗಸ್ಟ್ ತಿಂಗಳಿಂದ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಬಡವರಿಗೋಸ್ಕರ ನಾನು ಮತ್ತೊಂದು ಬಾರಿ ಅಧಿಕಾರ ಹಿಡಿಯುವ ವಿಶ್ವಾಸ ಇದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಅಂದರೆ ಜನರು ತೀರ್ಮಾನ ಮಾಡಲಿದ್ದಾರೆ’ ಎಂದರು.

‘ಶಿವಸೇನೆಯಲ್ಲಿ 50 ಜನ ಬಿಟ್ಟು ಹೋಗ್ತಿದ್ದಾರೆ. ಏನು ಆ ಪಕ್ಷ ಮುಳುಗಿ ಹೋಗ್ತಿದೆಯಾ. ವೈ.ಎಸ್‌.ವಿ.ದತ್ತ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಎಲ್ಲಾ ಪಡೆದುಕೊಂಡು ಹೋಗ್ತಿನಿ ಅಂದರೆ ಅವರೇ ಯೋಚನೆ ಮಾಡಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪಠ್ಯಪರಿಷ್ಕರಣೆ ವಿಚಾರದಲ್ಲಿ ಈಗಿನ ಹಾಗೂ ಹಿಂದಿನ ಸಮಿತಿಗಳು ಏನೇನು ಬದಲಾವಣೆ ಮಾಡಿವೆ ಎಂಬುದನ್ನು ಸರ್ಕಾರ ಜನರ ಮುಂದೆ ಇಡಲಿ. ಇದನ್ನು ತುರ್ತಾಗಿ ಮಾಡಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT