ಶಿವಮೊಗ್ಗ: ತಾಯಿ ಎದೆಹಾಲು ಅಮೃತಕ್ಕೆ ಸಮಾನ. ಅದರ ಮಹತ್ವ ಮತ್ತು ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಅನುಕೂಲದ ಕುರಿತು ಎಲ್ಲರೂ ತಿಳಿಯಬೇಕು' ಎಂದು ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.
ಇಲ್ಲಿನ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ’ವಿಶ್ವ ಸ್ತನ್ಯಪಾನ ಸಪ್ತಾಹ‘ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
’ತಾಯಿ ಎದೆ ಹಾಲು ಮಗುವಿಗೆ ಪೌಷ್ಟಿಕ ಆಹಾರ. ಪ್ರತಿ ವರ್ಷ ಆ.1ರಿಂದ 7ರವರೆಗೆ ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತದೆ‘ ಎಂದರು.
ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸುನೀತಾ ಮಾತನಾಡಿ, ತಾಯಂದಿರಿಗೆ ಇರುವ ಮಾಹಿತಿಯ ಕೊರತೆ, ಸಮಾಜದಲ್ಲಿರುವ ಮೌಢ್ಯತೆ ಹಾಗೂ ಉದಾಸೀನ ಮನೋಭಾವ, ರೂಢಿ ಸಂಪ್ರದಾಯಗಳು ಎದೆ ಹಾಲುಣಿಸುವುದಕ್ಕೆ ಅಡ್ಡಿಯಾಗಿವೆ. ತಾಯಂದಿರು ಮತ್ತು ಸಮಾಜದ ಎಲಾ ಜವಾಬ್ದಾರಿಯುತ ನಾಗರಿಕರು ಅಂಧ ಶ್ರದ್ಧೆಗಳನ್ನು ತೊಡೆದು ಹಾಕಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಹುಟ್ಟಿದ ಒಂದು ಗಂಟೆಯೊಳಗೆ ತಾಯಿ ಎದೆಹಾಲನ್ನು ನೀಡಬೇಕು. ಇದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ತುಂಬಾ ಮುಖ್ಯ ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ಧನಗೌಡ ಪಾಟೀಲ್ ಮಾತನಾಡಿ, ‘ತಾಯಿ ಎದೆಹಾಲಿಗೆ ಬೆಲೆ ಕಟ್ಟಲಾಗುವುದಿಲ್ಲ. ಎದೆಹಾಲು ಉಂಡ ಮಗು ಆರೋಗ್ಯವಾಗಿರುತ್ತದೆ ಮತ್ತು ಮಾನಸಿಕವಾಗಿ ಸದೃಢವಾಗಿರುತ್ತದೆ. ಆದ್ದರಿಂದ ತಾಯಂದಿರು ಮಗುವಿಗೆ ಯಾವುದೇ ಉದಾಸೀನ ಮಾಡದೇ ದಿನಕ್ಕೆ 8 ಬಾರಿ ಎದೆ ಹಾಲುಣಿಸಿ ಬೆಳೆಸಬೇಕು’ ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಮಕ್ಕಳ ಮರಣಕ್ಕೆ ತಾಯಿ ಸಮರ್ಪಕವಾಗಿ ಎದೆ ಹಾಲು ನೀಡದೇ ಇರುವುದು ಒಂದು ಕಾರಣ. ತಾಯಿಯು ಮಗುವಿಗೆ ಹಾಲುಣಿಸುವಾಗ ಜಾಗೃತಿ ಕ್ರಮ ಅನುಸರಿಸಬೇಕು ಎಂದು ಹೇಳಿದರು.
ವೈದ್ಯಕೀಯ ಅಧಿಕ್ಷಕ ಡಾ.ತಿಮ್ಮಪ್ಪ, ಪಿಡಿಯಾಟ್ರಿಕ್ ವಿಭಾಗದ ಎಚ್ಒಡಿ ಡಾ.ರವೀಂದ್ರ ಬಿ.ಪಾಟೀಲ್ ಒಬಿಜಿ ವಿಭಾಗದ ಎಚ್ಒಡಿ ಡಾ.ಲೇಪಾಕ್ಷಿ, ಮಕ್ಕಳ ತಜ್ಷ ಡಾ.ಮನೋಜ್, ಐಎಪಿ ಅಧ್ಯಕ್ಷ ಡಾ.ವಿರೇಶ್, ಐಎಪಿಯ ಡಾ.ವಿನಾಯಕ್, ಒಬಿಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.