ಕಾರ್ಗಲ್: ಲಿಂಗನಮಕ್ಕಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿರುವ ಕಾರಣ ಒಳಹರಿವು ಏರಿದ್ದು, ಜಲಾಶಯದಿಂದ 32,980 ಕ್ಯುಸೆಕ್ ನೀರನ್ನು 11 ರೇಡಿಯಲ್ ಗೇಟ್‌ಗಳ ಮೂಲಕ ನದಿ ಹರಿಸಲಾಗಿದೆ. ಜಲಾಶಯದ ಒಳಹರಿವು 31,600 ಕ್ಯುಸೆಕ್ ಇದೆ. ಈ ನೀರು ಕಾರ್ಗಲ್ ಮರಳು ಕೋರೆ ಮೂಲಕ ಚೈನಾಗೇಟ್ ಅಣೆಕಟ್ಟೆಯ ಮೇಲಿನಿಂದ ಕೋಡಿ ಹರಿದು ಜೋಗದ ಕಡೆಗೆ ನುಗ್ಗುತ್ತಿದೆ.
ಜೋಗದ ಸೀತಾಕಟ್ಟೆ ಸೇತುವೆಯ ಕೆಳಭಾಗದಲ್ಲಿ ಅತ್ಯಂತ ವೇಗವಾಗಿ ಹರಿಯುತ್ತಿರುವ ಶರಾವತಿ ನದಿ, ಕೂಗಳತೆ ದೂರದಲ್ಲಿರುವ ಜೋಗ ಜಲಪಾತದ ಪ್ರಪಾತಕ್ಕೆ ಧುಮ್ಮಿಕ್ಕುತ್ತಿರುವುದನ್ನು ವೀಕ್ಷಿಸಲು ಪ್ರವಾಸಿಗರು ಮುಂಬಯಿ ಬಂಗಲೆ, ಮೈಸೂರು ಬಂಗಲೆ, ಸೀತಾಕಟ್ಟೆ ಸೇತುವೆ, ಚೈನಾಗೇಟ್ ಬಳಿ ದಾಂಗುಡಿ ಇಡುತ್ತಿದ್ದಾರೆ.
ಮೈಸೂರು ಬಂಗಲೆಯ ಮುಂಭಾಗದಲ್ಲಿ ಕಣಿವೆಯಾಳದಿಂದ ಮೇಲೇಳುತ್ತಿರುವ ಮಂಜು ಜೋಗ ಜಲಪಾತದ ವೀಕ್ಷಣೆಗೆ ಆಗಾಗ ತಡೆಯೊಡ್ಡುತ್ತದೆ. ಪ್ರವಾಸಿಗರು ಬೆಕ್ಕಸಬೆರಗಾಗಿ ಪ್ರಕೃತಿಯ ಈ ವಿಸ್ಮಯವನ್ನು ನೋಡುತ್ತಿದ್ದಾರೆ.
‘ವಾರಾಂತ್ಯವಲ್ಲದ ಕಾರಣ ಜಲಪಾತದ ಸೊಬಗು ವೀಕ್ಷಣೆ ಮಾಡಲು ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ರಜೆಯ ದಿನಗಳಾದಲ್ಲಿ ಇಂತಹ ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಜೋಗದಲ್ಲಿ ಬಿಡಾರ ಹೂಡುತ್ತಿತ್ತು’ ಎಂದು ಪ್ರವಾಸಿ ಗೈಡ್ ನಾಗರಾಜ್ ಹೇಳಿದರು.