ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 23ರಿಂದಲೇ ಭದ್ರಾ ಎಡ, ಬಲ ನಾಲೆಗಳಿಗೆ ನೀರು

ಸದ್ಯಕ್ಕೆ ಮೇಲ್ದಂಡೆಗೆ ನೀರು ಹರಿಸದಿರಲು ನೀರಾವರಿ ಸಲಹಾ ಸಮಿತಿ ನಿರ್ಧಾರ
Last Updated 16 ಜುಲೈ 2021, 4:56 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾ ಜಲಾಶಯದ ಬಲ, ಎಡದಂಡೆ ಹಾಗೂ ಶಾಖಾ ನಾಲೆಗಳಿಗೆ ಜುಲೈ 23ರ ಮಧ್ಯರಾತ್ರಿಯಿಂದ 120 ದಿನಗಳು ನೀರು ಹರಿಸಲು ಮಲವಗೊಪ್ಪದ ‘ಕಾಡಾ’ ಕಚೇರಿಯಲ್ಲಿ ಗುರುವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿಯ ಸರ್ವ ಸದಸ್ಯರು ಹಾಗೂ ರೈತರು ಚರ್ಚೆ ನಡೆಸಿ, ಭದ್ರಾ ಬಲದಂಡೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ನೀರು ಹರಿಸಲು ನಿರ್ಧಾರ ಕೈಗೊಂಡರು.

ಜುಲೈ 14ಕ್ಕೆ ಜಲಾಶಯದಲ್ಲಿ 40.484 ಟಿಎಂಸಿ ಅಡಿ ನೀರು ಸಂಗ್ರಹವಿದೆ. 8.50 ಟಿಎಂಸಿ ಅಡಿ ಬಳಕೆಗೆ ಬರುವುದಿಲ್ಲ (ಡೆಡ್ ಸ್ಟೋರೇಜ್). 26.652 ಟಿಎಂಸಿ ಅಡಿ ಬಳಕೆಗೆ ಬರುವ ನೀರಿನ ಪ್ರಮಾಣ. ಭದ್ರಾ ಬಲದಂಡೆ ಕಾಲುವೆಗೆ ಪ್ರತಿದಿನ ಸರಾಸರಿ 3,050 ಕ್ಯುಸೆಕ್‌ ಮತ್ತು ಭದ್ರಾ ಎಡದಂಡೆ ಕಾಲುವೆಗೆ 490 ಕ್ಯುಸೆಕ್‌ ಸೇರಿ ಒಟ್ಟು 3,540 ಕ್ಯುಸೆಕ್‌ ಬೇಡಿಕೆ ಇದೆ.ಮುಂಗಾರು ಅವಧಿಗೆ 49.13 ಟಿಎಂಸಿ ಅಡಿ ನೀರು ಬೇಕಿದೆ. 22.478 ಟಿಎಂಸಿ ಅಡಿ ಕೊರತೆ ಇದೆ. ಈ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ನಂತರ ಪವಿತ್ರಾ ರಾಮಯ್ಯ ಸಭೆಗೆ ಮಾಹಿತಿ ನೀಡಿದರು.

ಸದ್ಯಕ್ಕೆ ಮೇಲ್ದಂಡೆಗೆ ನೀರು ಹರಿಸದಿರಲು ನಿರ್ಧಾರ: ತ್ಯಾವಣಿಗಿ ಉಪವಿಭಾಗದ ಸದಸ್ಯ ತೇಜಸ್ವಿ ಪಟೇಲ್‌, ‘ಯಾವುದೇ ಯೋಜನೆಗಳಿಗೆ ನೀರು ಹರಿಸಲು ಸಮಿತಿ ತೀರ್ಮಾನವೇ ಅಂತಿಮ. ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಮುನ್ನ ಭದ್ರಾ ಅಚ್ಚುಕಟ್ಟು ಪ್ರದೇಶ ನಿರ್ವಹಣೆಗೆ ಬೇಕಾದ ನೀರಿನ ಪ್ರಮಾಣ ಎಷ್ಟಿದೆ ಎಂಬ ಆಧಾರದಲ್ಲಿ ಚರ್ಚೆ ಆಗಬೇಕು. ನೀರು ಉಳಿದರೆ ಮೇಲ್ದಂಡೆಗೆ ಹರಿಸಲು ಅಭ್ಯಂತರವಿಲ್ಲ’ ಎಂದು ಸಲಹೆ ನೀಡಿದರು.

ರೈತ ಸಂಘದ ಮುಖಂಡ ಎಚ್.ಆರ್.ಬಸವರಾಜಪ್ಪ, ‘2.5 ಲಕ್ಷ ಎಕರೆ ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸಿಲ್ಲ. ಸರ್ಕಾರದ ಆದೇಶ ಬಂದ ನಂತರ ನೀರಾವರಿ ಸಲಹಾ ಸಮಿತಿ ಸಭೆ ಕರೆಯದೇ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ನೀರು ಹರಿಸಿದ್ದು ಸರಿಯಲ್ಲ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ನೀರು ಕೊಡಬಾರದು ಎಂದಲ್ಲ. ಅದಕ್ಕೆ ಒಂದು ರೀತಿ–ನೀತಿ ಇದೆ. ಸೌಹಾರ್ದಯುತವಾಗಿ ಚರ್ಚೆ ಮಾಡಬೇಕು. ನಂತರ ನೀರು ಹರಿಸುವ ನಿರ್ಧಾರ ಆಗಬೇಕು. ಸರ್ವಾಧಿಕಾರಿ ಧೋರಣೆಯಿಂದ ನೀರು ಪಡೆಯುವಂತೆ ಆಗಬಾರದು’ ಎಂದರು.

ಜಲಾಶಯಕ್ಕೆ ತುಂಗಾ ಯೋಜನೆಯ ನೀರು ಹರಿದ ನಂತರ ಭದ್ರಾ ಮೇಲ್ದಂಡೆಗೆ ನೀರು ಹರಿಸಬೇಕು. ಮೂಲ ಅಚ್ಚುಕಟ್ಟುದಾರರು ತೋಟ, ಬೆಳೆ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಅಭಾವ ಆಗುತ್ತದೆ. ತಕ್ಷಣ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಸಭೆ ನಿರ್ಧಾರ ಕೈಗೊಂಡು, ಸರ್ಕಾರಕ್ಕೆ ಕಳುಹಿಸಲು ಸರ್ವ ಸದಸ್ಯರು ಸಮ್ಮತಿಸಿದರು.

ಸದಸ್ಯರಾದ ಷಡಾಕ್ಷರಪ್ಪ, ‘ಜುಲೈ 6ರ ಸರ್ಕಾರಿ ಆದೇಶದ ಪ್ರಕಾರ 7ರಿಂದ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗುತ್ತಿದೆ. ಇದು ಸೂಕ್ತವಲ್ಲ’ ಎಂದು ದೂರಿದರು. ಇತರೆ ಸದಸ್ಯರು ಧ್ವನಿಗೂಡಿಸಿದರು.

ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಆದೇಶ ಹಾಗೂ ಜಲಾಶಯದ ನೀರಿನ ಪ್ರಮಾಣ ಕುರಿತು ಸಂಸದರು, ಶಾಸಕರ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗೆ ರಾಜಕೀಯ ಒತ್ತಡ ತಂದು ಆದೇಶ ಮಾಡಿಸಲಾಗಿದೆ. ಪ್ರಸ್ತುತ ಜಲಾಶಯದ ನೀರಿನ ಪರಿಸ್ಥಿತಿ ಬಗ್ಗೆ ವಿವರಿಸಿರುವೆ. ಭದ್ರಾ ಮೇಲ್ದಂಡೆಗೆ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟುದಾರರಿಗೆ ನೀರಿನ ಕೊರತೆಯಾಗಲಿದೆ. ಅವರು ಪ್ರತಿಭಟನೆ ಮಾಡುವ ಸಂಭವ ಇದೆ. ಹಾಗಾಗಿ, ಮೇಲ್ದಂಡೆಗೆ ಹರಿಸುತ್ತಿರುವ ನೀರು ತಕ್ಷಣ ಸ್ಥಗಿತಗೊಳಿಸುವಂತೆ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆಯಲಾಗಿದೆ’ ಎಂದು ವಿವರ ನೀಡಿದರು.

ನೀರಾವರಿ ಸಲಹಾ ಸಮಿತಿ ಸದಸ್ಯರಾದ ರುದ್ರಮೂರ್ತಿ, ಸದಾಶಿವಪ್ಪ ಗೌಡ, ರಾಜಪ್ಪ, ಹನುಮಂತಪ್ಪ, ದ್ಯಾಮಪ್ಪ, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಯತೀಶ್‌ಚಂದ್ರ, ಆಡಳಿತಾಧಿಕಾರಿ ಕೃಷ್ಣಮೂರ್ತಿ.ಬಿ.ಕುಲಕರ್ಣಿ, ಭದ್ರಾ ಯೋಜನಾ ವೃತ್ತ ಎಂಜಿನಿಯರ್ ಚಂದ್ರಹಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT