ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಮಾಧ್ಯಮಗಳು

ಕಾರ್ಯಾಗಾರದಲ್ಲಿ ಕೆ.ಎಲ್.ಅಶೋಕ್ ಬೇಸರ
Last Updated 6 ಜೂನ್ 2022, 3:04 IST
ಅಕ್ಷರ ಗಾತ್ರ

ಸಾಗರ: ‘ನಾಡಿನಲ್ಲಿ ಹಲವು ಪಲ್ಲಟಗಳಿಗೆ ಕಾರಣವಾಗಿರುವ ಇತಿಹಾಸವನ್ನು ಹೊಂದಿರುವ ಮಾಧ್ಯಮ ಈಗ ದ್ವೇಷ, ಅಪನಂಬಿಕೆ, ಅನುಮಾನ, ಸುಳ್ಳನ್ನು ಉತ್ಪಾದನೆ ಮಾಡಿ ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ದಾರಿ ಹಿಡಿದಿದೆ’ ಎಂದು ಕರ್ನಾಟಕ ರಾಜ್ಯ ಜನಶಕ್ತಿ ಸಂಘಟನೆಯ ಕೆ.ಎಲ್.ಅಶೋಕ್ ಹೇಳಿದರು.

ಇಲ್ಲಿನ ಸಾಹಿತ್ಯ ಭವನದಲ್ಲಿ ಮಾಸ್ ಮೀಡಿಯಾ ಸಂಸ್ಥೆ ಶನಿವಾರ ಏರ್ಪಡಿಸಿದ್ದ ‘ಜನದನಿಯೇ ಮುಖ್ಯವಾಹಿನಿ’ ಎಂಬ ವಿಷಯದ ಕುರಿತ ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನವಿರೋಧಿ ಚಿಂತನೆಗಳ ದಿಗ್ವಿಜಯಕ್ಕೆ ಕೆಲವು ಮಾಧ್ಯಮಗಳು ಕೊಡುಗೆ ನೀಡುತ್ತಿರುವುದು ಆತಂಕಕಾರಿ
ಬೆಳವಣಿಗೆಯಾಗಿದೆ ಎಂದರು.

ಸಾಂಸ್ಕೃತಿಕ, ಸೈದ್ಧಾಂತಿಕ, ರಾಜಕೀಯವಾದ ಭಿನ್ನಮತ, ಭಿನ್ನಧ್ವನಿಗಳನ್ನು ಸಂಭ್ರಮಿಸುವ ಮನೋಧರ್ಮ ಮಾಧ್ಯಮಗಳಿಗೆ ಇರಬೇಕು. ಆದರೆ, ಇಂದಿನ ಹಲವು ಮಾಧ್ಯಮಗಳು ಇದನ್ನು ಸಹಿಸುವ ಸಹನೆಯನ್ನು ತೋರುತ್ತಿಲ್ಲ. ಪ್ರಭುತ್ವದ ಷಡ್ಯಂತ್ರವನ್ನು ಬಯಲು ಮಾಡುವ ಕೆಲವೇ ಮಾಧ್ಯಮ ಉಳಿದಿದ್ದು ಅಂತಹವುಗಳ ಶಕ್ತಿಯನ್ನು ಕೂಡ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಮಾಸ್ ಮೀಡಿಯಾ ಸಂಸ್ಥೆಯ ಡಾ.ಎನ್.ವಿ.ವಾಸು, ‘ಪ್ರಜಾಪ್ರಭುತ್ವ ಉಳಿಯಬೇಕು ಎಂದಾದರೆ ಮಾಧ್ಯಮಗಳು ಉಳಿಯಲೇಬೇಕು. ಆದರೆ, ಇಂದಿನ ಔದ್ಯಮಿಕ ಜಗತ್ತಿನಲ್ಲಿ ಮಾಧ್ಯಮಗಳು ತಮ್ಮ ನೈತಿಕ ಮೌಲ್ಯವನ್ನು ಉಳಿಸಿಕೊಳ್ಳಲು ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ದೃಶ್ಯ ಮಾಧ್ಯಮದ ಕೆಲವು ವಾಹಿನಿಗಳು ಒಂದು ಸಮುದಾಯ, ಪಕ್ಷ, ವ್ಯಕ್ತಿ ವಿರುದ್ಧ ಹಗೆ ಸಾಧಿಸುವ ರೀತಿಯಲ್ಲಿ ಸುದ್ದಿಗಳನ್ನು ನಿರೂಪಿಸುತ್ತಿವೆ. ವೈಚಾರಿಕ ವಿಚಾರವನ್ನು ಬಿತ್ತುವವರ ಕೊಲೆಗೆ ಇಂತಹ ವಾಹಿನಿಗಳೇ ಕುಮ್ಮಕ್ಕು ನೀಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ, ‘ಮಾಧ್ಯಮಗಳು ಸಾಮಾಜಿಕ ಪಲ್ಲಟ, ಶೈಕ್ಷಣಿಕ ಸುದ್ದಿಗಳಿಗೆ ಮಹತ್ವ ನೀಡಬೇಕು. ಆದರೆ, ಈಗ ಭಯ, ಆತಂಕ ಹುಟ್ಟಿಸುವ ಸುದ್ದಿಗಳಿಗೆ ಮಹತ್ವ ನೀಡುತ್ತಿರುವುದು ಬೇಸರದ ಸಂಗತಿಯಾಗಿದೆ’ ಎಂದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು,
ಎಚ್.ಬಿ.ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT