ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಬರು ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚು

ಭದ್ರಾವತಿ: ಜಿಲ್ಲಾ ಪಂಚಾಯಿತಿ ಚುನಾವಣೆ ಕಾವು
Last Updated 9 ಜುಲೈ 2021, 2:38 IST
ಅಕ್ಷರ ಗಾತ್ರ

ಭದ್ರಾವತಿ: ಪಂಚಾಯಿತಿ ಚುನಾವಣೆ ಮೀಸಲು ಪಟ್ಟಿ ಪ್ರಕಟವಾದ ಬೆನ್ನಲ್ಲೇ ಹಲವು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಕಣಕ್ಕಿಳಿಯುವ ಕೆಲಸವನ್ನು ಸದ್ದಿಲ್ಲದೆ ಆರಂಭಿಸಿದ್ದು, ಸಹಜವಾಗಿ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷರಾಗಿ, ಎಐಸಿಸಿ ಸದಸ್ಯರಾಗಿ ರಾಜಕೀಯ ಯಶಸ್ಸಿನ ಮೆಟ್ಟಿಲು ಕಂಡಿರುವ ಬಲ್ಕೀಷ್ ಬಾನು ಅವರು ಕೂಡ್ಲಿಗೆರೆ– ತಡಸ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲು ಸಿದ್ಧತೆ ನಡೆಸಿದ್ದಾರೆ.

ಅವರು ಈ ಹಿಂದೆ ಪ್ರತಿನಿಧಿಸಿದ್ದ ಸಿಂಗನಮನೆ ಕ್ಷೇತ್ರದ ತಡಸ ಗ್ರಾಮ ವಿಂಗಡಣೆ ನಂತರ ತಡಸ–ಕೂಡ್ಲಿಗೆರೆ ಪಂಚಾಯಿತಿ ಬದಲಾಗಿದ್ದು, ಸಹಜವಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಜನತಾಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಅವರು ನಂತರ ಜನತಾ ‍ಪರಿವಾರದ ಜತೆ ಗುರುತಿಸಿಕೊಂಡರು. ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ.

ಇದೇ ಕ್ಷೇತ್ರದಿಂದ ಜೆಡಿಎಸ್ ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್ ಅವರು ತಮ್ಮ ಪತ್ನಿಯನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನ ಕೆಲವರು ಬಸ್ ಮಾಲೀಕರ ಪತ್ನಿಯನ್ನು ಕಣಕ್ಕೆ ತರುವ ಯತ್ನವನ್ನು ಸಹ ನಡೆಸಿದ್ದಾರೆ. ಈ ಬಿಸಿ ವಾತಾವರಣದ ನಡುವೆ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.

ದೊಣಬಘಟ್ಟ– ಸಿಂಗನಮನೆ ಕ್ಷೇತ್ರದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಚಂದ್ರೇಗೌಡ ಅವರು ತಮ್ಮ ಪತ್ನಿಯನ್ನು ಕಣಕ್ಕೆ ಇಳಿಸುವ ಇರಾದೆ ಹೊಂದಿದ್ದರೆ, ಈ ಹಿಂದೆ ಕಾಂಗ್ರೆಸ್‌ನಿಂದ ಗೆಲುವು ಕಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಉಷಾ ಸತೀಶಗೌಡ ಪುನಃ
ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಎರಡು ಬಾರಿ ಸಿಂಗನಮನೆ ಕ್ಷೇತ್ರ ಪ್ರತಿನಿಧಿಸಿದ್ದ ಜೆ.ಪಿ.ಯೋಗೀಶ್ ತಮ್ಮ ಪತ್ನಿಯನ್ನು ಕಣಕ್ಕೆ ಇಳಿಸುವ ಕುರಿತು ಸಮಾಲೋಚನೆ ನಡೆಸಿದ್ದರೆ, ಮತ್ತೊಂದೆಡೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಕುಟುಂಬ ಸದಸ್ಯರಲ್ಲಿ ಒಬ್ಬರು ಕಣಕ್ಕೆ ಇಳಿಯಬಹುದು ಎಂಬ ಮಾತುಗಳು ಜನರ ನಡುವೆ ಹರಿದಾಡುತ್ತಿದೆ.

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಆರ್.ಎಸ್.ಶೋಭಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂಬ ಮಾತುಗಳು ಕೇಳಿಬಂದಿದ್ದು, ಅದನ್ನು ಸ್ವತಃ ಶೋಭಾ ನಿರಾಕರಿಸುವ ಜತೆಗೆ ಪಕ್ಷದ ಸೂಚನೆ ಪಾಲಿಸುವ ಮಾತನ್ನಾಡುತ್ತಿದ್ದಾರೆ.

ಯರೇಹಳ್ಳಿ–ಹಿರಿಯೂರು ಎಸ್ಸಿ, ಮಹಿಳಾ ಮೀಸಲು ಕ್ಷೇತ್ರಕ್ಕೆ ಎಲ್ಲ ಪಕ್ಷಗಳು ಅಭ್ಯರ್ಥಿಗಳ ಕೊರತೆ ಎದುರಿಸುವ ಸ್ಥಿತಿ ಇದ್ದರೂ ಈ ಕ್ಷೇತ್ರವನ್ನು ಸತತವಾಗಿ ಕಾಯ್ದುಕೊಂಡು ಬಂದ ಎಸ್.ಕುಮಾರ್, ಜ್ಯೋತಿ ಎಸ್.ಕುಮಾರ್ ದಂಪತಿ ಯಾರನ್ನು ಕಣಕ್ಕೆ ಇಳಿಸಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬುದೇ ಸದ್ಯಕ್ಕೆ ಬಹು ಚರ್ಚೆಯ ವಿಷಯ.

ಜಿಲ್ಲಾ ಪಂಚಾಯಿತಿಯ ಹಿಂದಿನ ಎಲ್ಲ ನಾಲ್ಕು ಚುನಾವಣೆಯನ್ನು ಎದುರಿಸಿ ಜಯ ಕಂಡಿರುವ ಈ ದಂಪತಿ ಪಾಲಿಗೆ ಈ ಬಾರಿ ಅವರ ಕ್ಷೇತ್ರದ ಮೀಸಲಾತಿ ತಪ್ಪಿದ್ದರೂ ತಡಸ–ಕೂಡ್ಲಿಗೆರೆ ಹಾಗೂ ದೊಣಬಘಟ್ಟ–ಸಿಂಗನಮನೆ ಕ್ಷೇತ್ರದಲ್ಲಿ ಜ್ಯೋತಿ ಎಸ್.ಕುಮಾರ್ ಅವರು ಸ್ಪರ್ಧಿಸುವ ಅವಕಾಶವಿದೆ ಎನ್ನುತ್ತಾರೆ ಅವರ ಬೆಂಬಲಿಗರು.

ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಬಿಜೆಪಿ ಸಂಘಟನೆ ನಡೆಸಿರುವ ದೇವರನರಸೀಪುರ ಚಂದ್ರು ತಮ್ಮ ತಾಯಿಯನ್ನು ಕಣಕ್ಕೆ ಇಳಿಸಲು ಮುಂದಾಗಿದ್ದು, ಅದಕ್ಕೆ ವರಿಷ್ಠರ ಅಂಕಿತ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತವೆ.

ಕಳೆದ ಬಾರಿ ಅಪ್ಪಾಜಿ ನಾಮಬಲದ ಶಕ್ತಿಯಿಂದ ಎಲ್ಲ ಮೂರು ಕ್ಷೇತ್ರಗಳು ಜೆಡಿಎಸ್ ಪಾಲಾಗಿದ್ದರೆ, ಎಲ್ಲೆಡೆ ಕಾಂಗ್ರೆಸ್ ಪೈಪೋಟಿ ನೀಡಿತ್ತು. ಬಿಜೆಪಿ ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿತ್ತು. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರವೇ ಭಿನ್ನವಾಗಿದ್ದು, ಅದರ ಲಾಭ ಯಾರಿಗೆ ಎಂಬುದೇ ಸದ್ಯ ಚರ್ಚಿತ ಸಂಗತಿ.

***

ಪಕ್ಷದ ಮುಖಂಡರು ಒಟ್ಟಾಗಿ ಸೇರಿ ಚರ್ಚೆ ನಡೆಸುತ್ತಿದ್ದು, ಒಗ್ಗಟ್ಟಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಳೆದ ಬಾರಿಯಂತೆ ಮೂರೂ ಕ್ಷೇತ್ರಗಳಲ್ಲಿ ಗೆಲುವು ಕಾಣುತ್ತೇವೆ.

ಆರ್.ಕರುಣಾಮೂರ್ತಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ

***

ಪಕ್ಷದ ಚೌಕಟ್ಟಿನಡಿ ಅಭಿಪ್ರಾಯ ಸಂಗ್ರಹ, ಮಾತುಕತೆ ನಡೆಸಿದ್ದು, ಮೀಸಲಾತಿ ಪಟ್ಟಿ ಕುರಿತಾಗಿ ಆಕ್ಷೇಪಣೆ ಸಹ ಇದೆ. ಎಲ್ಲವನ್ನು ಚರ್ಚಿಸಿ ತೀರ್ಮಾನಿಸುತ್ತೇವೆ.

ಪ್ರಭಾಕರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ

***

ಮೀಸಲಾತಿ ಕುರಿತಾಗಿ ಕಾರ್ಯಕರ್ತರಲ್ಲಿ ಚರ್ಚೆ ಇದೆ. ಸದ್ಯ ಇರುವ ವಸ್ತುಸ್ಥಿತಿಯಲ್ಲಿ ಚುನಾವಣೆ ಎದುರಿಸುವ ಕುರಿತಾಗಿ ಚರ್ಚೆಗಳು ನಡೆದಿವೆ.

ಟಿ.ಚಂದ್ರೇಗೌಡ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT