ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಜೀವಂತ ಮಾಧ್ಯಮ: ಮುಖ್ಯಮಂತ್ರಿಚಂದ್ರು

Last Updated 17 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಶಿವಮೊಗ್ಗ: ರಂಗಭೂಮಿ ಜೀವಂತ ಮಾಧ್ಯಮ, ಸಣ್ಣ-ಪುಟ್ಟ ಏರುಪೇರುಗಳ ನಡುವೆಯೂ ಎಂದಿಗೂ ಸಶಕ್ತವಾಗಿರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಅಭಿಪ್ರಾಯಪಟ್ಟರು.

ಕಲಾಜ್ಯೋತಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಟೆ ಯುವಕ ಸಂಘ ಸಂಯುಕ್ತವಾಗಿ ಕೋಟೆ ಬಯಲು ರಂಗಮಂದಿರದಲ್ಲಿ ಕಲಾಜ್ಯೋತಿಯ 35ನೇ ವರ್ಷದ ಅಂಗವಾಗಿ ಹಮ್ಮಿಕೊಂಡಿರುವ ರಂಗಸಂಭ್ರಮ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣದ ಹಿನ್ನೆಲೆಯಲ್ಲಿ, ಬೇರೆಬೇರೆ ಮಾಧ್ಯಮಗಳ ಭರಾಟೆಯಲ್ಲಿಯೂ ನಾಟಕ ಕಲೆ ಎಂದಿಗೂ ಜೀವಂತವಾಗಿರುತ್ತದೆ ಎಂದರು.

ಸಾಂಸ್ಕೃತಿಕ ಲೋಕದ ಜತೆ ಒಡನಾಟ ಇಟ್ಟುಕೊಂಡ ವ್ಯಕ್ತಿ ಸಮತೋಲನದಿಂದ ಇರುತ್ತಾನೆ. ಈ ಲೋಕದಲ್ಲಿ ತೊಡಗಿಸಿಕೊಂಡರೆ ಮನುಷ್ಯನಲ್ಲಿನ ಅಹಂಮಿಕೆ ಹೋಗುತ್ತದೆ. ನಾನು ಎನ್ನುವುದು ಬರುವುದಿಲ್ಲ. ಇವುಗಳ ಸಂಪರ್ಕದಿಂದ ಮನುಷ್ಯ ಮಾನವನಾಗುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು.

ರಂಗಭೂಮಿಯಲ್ಲಿ ವರ್ಗೀಕರಣ ಸಲ್ಲದು ಎಂದ ಅವರು, ಹೊಟ್ಟೆಪಾಡಿಗೆ ಮಾಡಿದರೆ ಅದು ವೃತ್ತಿ ರಂಗಭೂಮಿ, ಹವ್ಯಾಸಕ್ಕೆ ಮಾಡಿದರೆ ಅದು ಹವ್ಯಾಸ ರಂಗಭೂಮಿ ಎಂದು ವಿಶ್ಲೇಷಿಸಿದರು.

ಕಲಾಜ್ಯೋತಿ 35ರ ಸವಿನೆನಪು ವಸ್ತು ಪ್ರದರ್ಶನ ಉದ್ಘಾಟಿಸಿದ ಮೈಸೂರು ರಂಗಾಯಣ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಮಾತನಾಡಿ, ಹಾಡು ಕಲಿತರೆ ಗಾಯಕರಾಗಬಹುದು, ನೃತ್ಯ ಕಲಿತರೆ ನೃತ್ಯಪಟು ಆಗಬಹುದು. ಆದರೆ, ರಂಗಭೂಮಿ ಬದುಕನ್ನು ಕಲಿಸುತ್ತದೆ ಎಂದರು.

ಯಾವುದೇ ಒಂದು ಊರು ಪರಿಪೂರ್ಣವಾಗಬೇಕಾದರೆ ಅಲ್ಲಿ ಶಾಲೆ, ಆರೋಗ್ಯ ಕೇಂದ್ರ ಹಾಗೂ ಸಾಂಸ್ಕೃತಿಕ ತಾಣಗಳು ಅಗತ್ಯ ಎಂದ ಅವರು, ಶಿವಮೊಗ್ಗದಲ್ಲಿ ಸಾಕಷ್ಟು ಇಂತಹ ಸಾಂಸ್ಕೃತಿಕ ತಾಣಗಳಿವೆ ಎಂದು ಹೇಳಿದರು. 

ಸಮಾರಂಭದಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನಾ. ಸತ್ಯ, ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ, ಕೋಟೆ ಯುವಕ ಸಂಘದ ಅಧ್ಯಕ್ಷ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಸದಸ್ಯ ಹರಿಗೆ ಗೋಪಾಲಸ್ವಾಮಿ ಸ್ವಾಗತಿಸಿದರು. ಸಂಸ್ಥಾಪಕ ಕಾರ್ಯದರ್ಶಿ ರಮೇಶ್ ಜೋಯಿಸ್ ನಿರೂಪಿಸಿದರು.  ನಂತರ ಶಿರಾಳಕೊಪ್ಪ ಸಿರಿಯಾಳ ಕಲಾರಂಗ ತಂಡದಿಂದ `ಪುಣ್ಯಕೋಟಿ~ ನಾಟಕ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT