ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ

Last Updated 9 ಆಗಸ್ಟ್ 2017, 9:11 IST
ಅಕ್ಷರ ಗಾತ್ರ

ಹೊಸನಗರ: ಮಡೆನೂರು ಮತ್ತು ಲಿಂಗನಮಕ್ಕಿ ಜಲ ವಿದ್ಯುತ್ ಯೋಜನೆಗಳಿಂದ ಹೊಸನಗರ ಮತ್ತು ಸಾಗರ ತಾಲ್ಲೂಕಿನ ಅನೇಕ ಗ್ರಾಮಗಳು ಶರಾವತಿ ಹಿನ್ನೀರಿನಿಂದ ಜಲಾವೃತಗೊಂಡು 6 ದಶಕಗಳು ಕಳೆದಿವೆ. ಈಗ ಗ್ರಾಮಗಳ ನಡುವೆ ಸಂಪರ್ಕ ಬೆಸೆಯುವ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ದೊರೆತಿದೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಯತ್ನದ ಫಲವಾಗಿ ಹೊಸನಗರ-–ಸಾಗರ ತಾಲ್ಲೂಕಿನ ಎಂಟು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣ ಆಗುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷ ಉಂಟುಮಾಡಿದೆ.

ಹೊಸನಗರ ತಾಲ್ಲೂಕಿನ ಕೆ.ಬಿ ವೃತ್ತ ಹಾಗೂ ಸಾಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಕಳುವನ್ನು ಸಂಪರ್ಕಿಸುವ ₹ 90 ಕೋಟಿ ಅಂದಾಜು ವೆಚ್ಚದ 1.1 ಕಿ.ಮೀ ಉದ್ದದ ಈ ಸೇತುವೆಗೆ ₹ 30 ಕೋಟಿ ಕಾಮಗಾರಿ ಟೆಂಡರ್ ಕರೆಯಲಾಗಿದೆ.

ಸೇತುವೆ ಕಾಮಗಾರಿಗೆ ಟೆಂಡರ್‌ ಕರೆದಿರುವುದು ಸಂತ್ರಸ್ತರ ಹೋರಾಟಕ್ಕೆ ಸಿಕ್ಕ ಫಲ ಎಂದು ಶರಾವತಿ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯದರ್ಶಿ ಸುರೇಶ ಕೂಡ್ಲುಕೊಪ್ಪ ಸಂತಸ ವ್ಯಕ್ತಪಡಿಸುತ್ತಾರೆ.

‘ಈ ಯೋಜನೆಗಳಿಂದಾಗಿ ಇಲ್ಲಿಯ ರೈತರು ಮತ್ತು ಕೃಷಿ ಕಾರ್ಮಿಕರು ಮನೆ, ಜಮೀನುಗಳನ್ನು ಕಳೆದುಕೊಂಡು ನಾಡಿಗೆ ತ್ಯಾಗ ಮಾಡಿದ್ದರು. ಸರ್ಕಾರ ಪುನರ್ವಸತಿಗಾಗಿ ನೀಡಿದ್ದ ಪುಡಿಗಾಸಿನ ಪರಿಹಾರದಿಂದ ಬದುಕು ಕಟ್ಟಿಕೊಳ್ಳಲು ಕಷ್ಟವಾಗಿತ್ತು. ರಾಜ್ಯಕ್ಕೆ ಬೆಳಕು ನೀಡಿದ್ದರೂ ಮುಳುಗಡೆಯಿಂದ ಅನಾಥರಾಗಿದ್ದೇವೆ ಎಂಬ ಭಾವನೆ ಇತ್ತು. ಈಗ ಈ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದು ಖುಷಿಯಾಗಿದೆ’ ಎಂದು ತಿಳಿಸಿದರು.

ಶರಾವತಿ ಹಿನ್ನೀರಿನಿಂದಾಗಿ ಎಲ್ಲಾ ರಸ್ತೆಗಳು ನಡುವೆ ಸಂಪರ್ಕಗಳು ಇರಲಿಲ್ಲ. ವಾಣಿಜ್ಯ ಕೇಂದ್ರ ಸಾಗರಕ್ಕೆ 20ರಿಂದ 40 ಕಿ.ಮೀ. ಅಂತರದ ಬದಲು 80 ರಿಂದ 90 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದರು.

ಈ ಸೇತುವೆ ನಿರ್ಮಾಣದಿಂದ ಸಾಗರ-–ಕೊಡಚಾದ್ರಿ–-ಕೊಲ್ಲೂರು–-ಬೈಂದೂರು ಸಂಪರ್ಕದ ಅಂತರ 40 ಕಿ.ಮೀ ಕಡಿಮೆಯಾಗಲಿದೆ. ನಿಟ್ಟೂರು, ಸಂಪೆಕಟ್ಟೆ, ಅರಮನೆಕೊಪ್ಪ, ಸಂಕಣ್ಣ ಶ್ಯಾನುಭೋಗ, ಕೊಲ್ಲೂರು, ಬೈಂದೂರು ವ್ಯಾಪ್ತಿಯಲ್ಲಿರುವ 40 ಸಾವಿರ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಅಭಿನಂದನೆ: ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕಿಮ್ಮನೆ ರತ್ನಾಕರ ಅವರನ್ನು ಶರಾವತಿ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ನಿಟ್ಟೂರು-–ನಾಗೋಡಿ ಘಟಕದ ಕಾಂಗ್ರೆಸ್ ಪದಾಧಿಕಾರಿಗಳಾದ ಎ.ಒ.ರಾಮಚಂದ್ರ, ನರಸಿಂಹ ಪೂಜಾರಿ, ವಿಶ್ವನಾಥ ನಾಗೋಡಿ, ಚಂದ್ರಶೇಖರ ಶೆಟ್ಟಿ ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT