ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಪ್ರಧಾನಿಗಳು ಪಾಕ್‌ ಬಗ್ಗು ಬಡಿದಿರಲಿಲ್ಲವೇ?: ಮುಖ್ಯಮಂತ್ರಿ

ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರ ಸಭೆ
Last Updated 30 ಏಪ್ರಿಲ್ 2019, 15:58 IST
ಅಕ್ಷರ ಗಾತ್ರ

ಶಿವಮೊಗ್ಗ:ಬಾಲಕೋಟ್‌ ದಾಳಿಯನ್ನೇ ರಾಜಕೀಯ ದಾಳ ಮಾಡಿಕೊಂಡು ಜನರ ಭಾವನೆಗಳನ್ನು ಪ್ರಚೋದಿಸುವ ಮೋದಿ ಅವರಿಗೆ ಹಿಂದೆ ಪ್ರಧಾನಿಗಳಾಗಿದ್ದ ಇಂದಿರಾಗಾಂಧಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಅಂಥವರು ಯುದ್ಧ ಮಾಡಿ ಗೆದ್ದಿರುವ ಸಂಗತಿ ತಿಳಿದಿಲ್ಲವೇ? ಅಂದಿನ ಸೀಮಿತ ಆರ್ಥಿಕ ಸ್ಥಿತಿಯ ಮಧ್ಯೆಯೂ ದೇಶಕ್ಕೆ ಅವರೆಲ್ಲ ಭದ್ರತೆ ನೀಡಿರಲಿಲ್ಲವೇ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಆನವಟ್ಟಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಕೊಟ್ಟ ಒಂದೂ ಮಾತು ಉಳಿಸಿಕೊಂಡಿಲ್ಲ. ರಾಜ್ಯ ಸರ್ಕಾರ ರೈತರಿಗೆ, ಮಹಿಳೆಯರಿಗೆ, ದುರ್ಬಲರಿಗೆ, ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟರಿಗೆ, ಮುಸ್ಲಿಮರಿಗೆ, ಎಲ್ಲ ವರ್ಗದ ಜನರಿಗೂ ನೆರವಾಗಿದೆ. 44 ಲಕ್ಷ ರೈತ ಕುಟುಂಬಗಳ ₨ 45 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಈಗಾಗಲೇ ₨ 15 ಸಾವಿರ ಕೋಟಿ ನೀಡಲಾಗಿದೆ. ಹಾಲು ಉತ್ಪಾದಕರಿಗೆ ಪ್ರತಿ ವರ್ಷ 2,500 ಕೋಟಿ ಸಹಾಯಧನ ನೀಡುತ್ತಿದೆ. ಅನ್ನಭಾಗ್ಯ ಯೋಜನೆ ಅಡಿ 1.28 ಕೋಟಿ ಕುಟುಂಬಗಳಿಗೆ ₨ 4 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿದೆ. ಚುನಾವಣೆ ನಂತರ ಇಸ್ರೇಲ್‌ ಮಾದರಿ ನೀರಾವರಿಗೆ ಹಣ ಮೀಸಲಿಡಲಾಗುವುದು. ಚುನಾವಣೆ ಸಮಯದಲ್ಲಿ ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಷಕ್ಕೆ ₨ 6 ಸಾವಿರ ನೀಡುವ ಯೋಜನೆ ಜಾರಿಗೆ ತಂದಿತು. ರಾಜ್ಯದಿಂದ 2 ಲಕ್ಷ ರೈತರ ಪಟ್ಟಿ ಕಳುಹಿಸಿದರೂ ಹಣ ಬಿಡುಗಡೆ ಮಾಡಿರುವುದು ಕೇವಲ 6 ರೈತರಿಗೆ ಎಂದು ದೂರಿದರು.

ಬಿಜೆಪಿ ಜಾತಿ ಬಳಸಿಕೊಂಡು ರಾಜಕೀಯ ಮಾಡುತ್ತಿದೆ. ಸಾಲಮನ್ನಾ ಯೋಜನೆಯ ಹೆಚ್ಚಿನ ಫಲ ವೀರಶೈವರಿಗೂ ದೊರೆತಿದೆ. ಆ ಸಮಾಜದ ಜನರು ಪ್ರಬುದ್ಧರು. ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಸುಪ್ರೀಂಕೋರ್ಟ್‌ ನಿರ್ಧಾರ ಆತಂಕ ತಂದಿತ್ತು. ಈ ಕಾಯ್ದೆಗೆ ತಿದ್ದುಪಡಿ ತರುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಬಿಜೆಪಿ ಈ ವಿಚಾರದಲ್ಲೂ ನಾಟಕ ಮಾಡಿತು. ಹೆಚ್ಚಿನ ಸಂಖ್ಯೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಂಸತ್‌ನಲ್ಲಿ ಹೋರಾಟ ಮಾಡಲಾಗುವುದು. ಅದಕ್ಕಾಗಿ ಈ ಕ್ಷೇತ್ರದಿಂದ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಬೇಕು. ಎರಡು ಚುನಾವಣೆಗಳಲ್ಲಿ ಸೋಲು ಕಂಡ ಅವರನ್ನು ಈ ಬಾರಿ ಸೊರಬ ವಿಧಾನಸಭಾ ಕ್ಷೇತ್ರದ ಜನರು 50 ಸಾವಿರ ಮತಗಳ ಮುನ್ನಡೆ ನೀಡಬೇಕು ಎಂದು ಕೋರಿದರು.

ದಿವಂಗತ ಎಸ್‌.ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಇದು ಬಹಮುಖ್ಯ ಚುನಾವಣೆ. ಮಧುಗೆ ಅಗ್ನಿ ಪರೀಕ್ಷೆ. ಉಪ ಚುನಾವಣೆಯಲ್ಲಿ 5 ತಿಂಗಳು ಬೇಡ, ಈಗ 5 ವರ್ಷ ಇರಲಿ ಎಂದು ನೀವು ನಿರ್ಧಿಸಿದ್ದೀರಿ.ತಂದೆ ಬಂಗಾರಪ್ಪ ಅವರ ಹಾದಿಯಲ್ಲೇ ನಡೆಯುತ್ತಿರುವ ಸಹೋದರ ಮಧು ಬಂಗಾರಪ್ಪ ಅವರಿಗೆ ಸೊರಬದ ಜನರು ಭಾರಿ ಮುನ್ನಡೆ ನೀಡಬೇಕು ಎಂದು ಕೋರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಮಾತನಾಡಿ, ಇದು ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿರುವ ಚುನಾವಣೆ. ಸತ್ಯಕ್ಕೆ ಅಂತಿಮ ಜಯ. ಮಧು ಬಂಗಾರಪ್ಪ ಗೆಲುವು ನಿಶ್ಚಿತ ಎಂದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಸೋತಾಗ ಬೇಸರ ಸಹಜ. ಕ್ಷೇತ್ರಕ್ಕೆ ಹೆಚ್ಚಾಗಿ ಬಾರದಿದ್ದರೂ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹಣ ಬಿಡುಗಡೆ ಮಾಡಿಸಿದ್ದೇನೆ. ಕೆಲಸ ಮಾಡಲು ನಾನು. ರಿಬ್ಬನ್‌ ಕತ್ತರಿಸಲು ಬೇರೆಯವರು ಎಂದರೆ ಹೇಗೆ ಎಂದು ಜನರನ್ನು ಪ್ರಶ್ನಿಸಿದರು.

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಿದ್ದರು. ಸಿದ್ದರಾಮಯ್ಯ ಅನ್ನು ಭಾಗ್ಯ ಜಾರಿಗೆ ತಂದರು. ಈಗ ಕುಮಾರಣ್ಣ ಸಾಲ ಮನ್ನಾ ಮಾಡಿದ್ದಾರೆ. ನೀರಾವರಿಗೆ ಹಣ ನೀಡಿದ್ದಾರೆ. ಇನ್ನಷ್ಟು ಉತ್ತಮ ಕೆಲಸ ಮಾಡಲು ಆಶೀರ್ವಾದ ಮಅಡಬೇಕು ಎಂದು ಕೋರಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್‌.ಪಿ.ಶೇಷಾದ್ರಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ, ಮುಖಂಡರಾದ ಶಾಂತವೀರಪ್ಪ ಗೌಡ, ಶ್ರೀಧರ್ ಹುಲ್ತಿಕೊಪ್ಪ, ಶಿವಾನಂದಪ್ಪ, ಗಣಪತಿ, ಕೆ.ಪಿ.ರುದ್ರಗೌಡ, ವೀರೇಶ್ ಕೊಟಗಿ, ಶಿವಲಿಂಗೇಗೌಡ, ತಾರಾ, ಕಲ್ಲಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT