ಭಾನುವಾರ, ಅಕ್ಟೋಬರ್ 20, 2019
28 °C
ಚಿಕ್ಕಸಿಂದಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಕೊಕ್ಕೊ; ರಾಷ್ಟ್ರಮಟ್ಟದಲ್ಲಿ ಹಣಮಂತ ಮಿಂಚು

Published:
Updated:
Prajavani

ಸಿಂದಗಿ: ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ರಾಷ್ಟ್ರಮಟ್ಟದಲ್ಲಿ ಕೊಕ್ಕೊ ಕ್ರೀಡೆಯಲ್ಲಿ ಹೆಸರು ಮಾಡಿದೆ. ಕೊಕ್ಕೊ ಆಟ ಗೊತ್ತಿರದ ವಿದ್ಯಾರ್ಥಿಗಳೇ ಈ ಶಾಲೆಯಲ್ಲಿ ಇಲ್ಲ ಎಂದು ಹೇಳಬಹುದು.

ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕೊಕ್ಕೊ ಚಾಂಪಿಯನ್ ಶಾಲೆ ಎಂದರೆ ಅದು ಚಿಕ್ಕ ಸಿಂದಗಿ ಶಾಲೆಯೇ ಎನ್ನುವ ಹೆಗ್ಗಳಿಕೆ ಈ ಶಾಲೆಯದ್ದು.

‘ಕೊಕ್ಕೊ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರಲು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಬಿರಾದಾರ ಅವರ ಪರಿಶ್ರಮ, ಗ್ರಾಮಸ್ಥರ ಸಹಾಯ-ಸಹಕಾರ, ಪ್ರೊತ್ಸಾಹವೇ ಕಾರಣ. ಕ್ರೀಡಾಪಟುಗಳಿಗೆ ಗ್ರಾಮಸ್ಥರು ದಿನನಿತ್ಯ ಪೌಷ್ಟಿಕ ಆಹಾರ, ಮೊಟ್ಟೆ, ಮಾಂಸಾಹಾರ ನೀಡುವ ಮೂಲಕ ಹುರಿದುಂಬಿಸುತ್ತಿದ್ದಾರೆ. ಕ್ರೀಡಾ ಸಮವಸ್ತ್ರ ನೀಡುತ್ತಾರೆ. ಎಲ್ಲೇ ಕ್ರೀಡಾಕೂಟ ನಡೆದರೂ ತಾವೇ ಸ್ವಂತ ವಾಹನ ಮಾಡಿಕೊಂಡು ಅಲ್ಲಿಗೆ ಹೋಗಿ ಉತ್ತಮ ರೀತಿಯಲ್ಲಿ ಆಟವಾಡಲು ಉತ್ತೇಜನ ನೀಡುತ್ತಾರೆ’ ಎನ್ನುತ್ತಾರೆ ಶಾಲಾ ಸುಧಾರಣಾ ಸಮಿತಿ ಮಾಜಿ ಅಧ್ಯಕ್ಷ ಮಲ್ಲನಗೌಡ ಬಿರಾದಾರ.

2018-19 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜರುಗಿದ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಈ ಶಾಲೆಯ ವಿದ್ಯಾರ್ಥಿ ಹಣಮಂತ ರೂಗಿ ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಬಿರಾದಾರ ತಮ್ಮ ಕರ್ತವ್ಯವನ್ನು ಶಾಲಾ ಅವಧಿಗಷ್ಟೇ ಸೀಮಿತಗೊಳಿಸದೇ ಶಾಲೆ ಪ್ರಾರಂಭಗೊಳ್ಳುವ ಮುನ್ನ ಶಾಲಾ ಅವಧಿ ಮುಗಿದ ನಂತರವೂ ಶಾಲಾ ಮಕ್ಕಳಿಗೆ ತರಬೇತಿ ನೀಡುತ್ತಾರೆ’ ಎಂದು ಮುಖ್ಯಶಿಕ್ಷಕ ಪಿ.ಎಸ್.ಮ್ಯಾಕೇರಿ ಹೇಳುತ್ತಾರೆ.
2018-19ನೇ ಸಾಲಿನಲ್ಲಿ ಆದಿಚುಂಚನಗಿರಿಯಲ್ಲಿ ಜರುಗಿದ ರಾಷ್ಟ್ರಮಟ್ಟದ 64ನೇ ಕೊಕ್ಕೊ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ಪತ್ರ ಪಡೆದುಕೊಂಡ ಈ ಶಾಲೆಯ ಕ್ರೀಡಾಪಟು ಹಣಮಂತ ರೂಗಿ ತನ್ನ ಈ ಸಾಧನೆಗೆ ದೈಹಿಕ ಶಿಕ್ಷಕರೇ ಕಾರಣ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.

ಈ ಶಾಲೆಗೆ ಕೊಕ್ಕೊ ಪ್ರಶಸ್ತಿಗಳ ಸುರಿಮಳೆಯೇ ಸುರಿದಿದೆ. ಶಾಲಾ ಸಿಬ್ಬಂದಿ ಕೋಣೆಯಲ್ಲಿ ಎಲ್ಲಿ ನೋಡಿದಲ್ಲಿ ಕೊಕ್ಕೊ ಚಾಂಪಿಯನ್ ಫಲಕಗಳೇ ರಾರಾಜಿಸುತ್ತವೆ.

ಲವ ಹೊಸಮನಿ, ದಾನಯ್ಯ ಹಿರೇಮಠ, ರಾಹುಲ ಮೇಲಿನಮನಿ, ಸಚಿನ್ ಹೊಸಮನಿ, ಧರಣ್ಣ ತಡಲಗಿ, ಆಕಾಶ ಬಮ್ಮನಹಳ್ಳಿ, ಸೂರಜ ಹೊಸಮನಿ, ಆನಂದ ಮಾಗಣಗೇರಿ ಇವರು ಈ ಶಾಲೆಯ ಕ್ರೀಡಾ ನಕ್ಷತ್ರಗಳು.

Post Comments (+)