ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಲೆಕ್ಕಿಗರಿಗೆ ವಿಶೇಷ ತರಬೇತಿ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

ವಿನೂತನ ಪ್ರಯೋಗ
Last Updated 11 ಡಿಸೆಂಬರ್ 2019, 17:30 IST
ಅಕ್ಷರ ಗಾತ್ರ

ವಿಜಯಪುರ: ಅನುಕಂಪ ಆಧಾರ ಹಾಗೂ ನೇರ ನೇಮಕಗೊಂಡಿರುವ ಜಿಲ್ಲೆಯ ಗ್ರಾಮಲೆಕ್ಕಿಗರು, ಪ್ರಥಮದರ್ಜೆ ಸಹಾಯಕ (ಎಫ್‌ಡಿಎ) ಹಾಗೂ ದ್ವಿತೀಯದರ್ಜೆ ಸಹಾಯಕರಿಗೆ (ಎಸ್‌ಡಿಎ) ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಒಂದು ವಾರ ವಿಶೇಷ ತರಬೇತಿ ಕೊಡಿಸುವ ಮೂಲಕ ಅವರನ್ನು ಸೇವೆಗೆ ಸಜ್ಜುಗೊಳಿಸಿದ್ದಾರೆ.

ಕಂದಾಯ ಇಲಾಖೆಗೆ ನೇಮಕಗೊಂಡಿರುವ ಗ್ರಾಮಲೆಕ್ಕಿಗರು, ಎಫ್‌ಡಿಎ ಮತ್ತು ಎಸ್‌ಡಿಎಗಳಿಗೆ ಇಲಾಖೆಯ ನಡಾವಳಿ, ನಿಭಾಯಿಸಬೇಕಾದ ಕರ್ತವ್ಯಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಇರುವುದಿಲ್ಲ. ಇದರಿಂದ ಅವರು ಆರಂಭದ ದಿನಗಳಲ್ಲಿ ಸಾಕಷ್ಟು ಪ್ರಯಾಸ ಪಡಬೇಕಾಗುತ್ತದೆ ಎಂಬುದನ್ನು ಅರಿತ ಜಿಲ್ಲಾಧಿಕಾರಿ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ (ಡಿಟಿಐ) ಒಂದು ವಾರ ವಿಶೇಷ ತರಬೇತಿ ಕೊಡಿಸಿದ್ದಾರೆ.

‘ಐಎಎಸ್ ಮತ್ತು ಕೆಎಎಸ್‌ ಹುದ್ದೆಗಳಿಗೆ ಆಯ್ಕೆಯಾದವರಿಗೆ ಇಂಥ ತರಬೇತಿಯನ್ನು ಕೊಡುವ ವ್ಯವಸ್ಥೆ ಇದೆ. ಅದೇ ಮಾದರಿಯನ್ನು ಅನುಸರಿಸಿ ಗ್ರಾಮಲೆಕ್ಕಿಗರು, ಎಫ್‌ಡಿಎ ಮತ್ತು ಎಸ್‌ಡಿಎ ಸೇರಿ ಸುಮಾರು 40 ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಅವರನ್ನು ಫೀಲ್ಡ್‌ಗೆ ಕಳುಹಿಸಲಾಗಿದ್ದು, ಈ ಮೊದಲೇ ಅಲ್ಲಿರುವ ಗ್ರಾಮಲೆಕ್ಕಿಗ, ಎಫ್‌ಡಿ ಮತ್ತು ಎಸ್‌ಡಿಎ ಜತೆ ಮೂರೂವರೆ ತಿಂಗಳು ಕೆಲಸ ಮಾಡುತ್ತಾರೆ. ಅದಾದ ಬಳಿಕ ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಅನುವು ಮಾಡಿಕೊಡಲಾಗುವುದು. ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನ ಮಾಡಲಾಗಿದ್ದು, ಇದರ ಯಶಸ್ಸನ್ನು ಆಧರಿಸಿ ಮುಂದಿನ ದಿನಗಳಲ್ಲಿ ಇದನ್ನು ಮುಂದುವರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಎಎಸ್‌ ಮತ್ತು ಕೆಎಸ್‌ಎಸ್ ಅಧಿಕಾರಿಗಳಿಗೆ ತರಬೇತಿ ಬಳಿಕ ಈಗಾಗಲೇ ನಿಯೋಜನೆಯಲ್ಲಿರುವ ಅಧಿಕಾರಿಯೊಂದಿಗೆ ಕೆಲಸ ಮಾಡಲು ಸೂಚಿಸುತ್ತಾರೆ. ಪ್ರೊಬೇಷನರಿ ಅವಧಿ ಮುಗಿದ ಬಳಿಕ ಅವರಿಗೆ ಮತ್ತೆ ಪೋಸ್ಟಿಂಗ್ ಕೊಡಲಾಗುತ್ತದೆ. ಇದು ಆಡಳಿತಾತ್ಮಕ ಕಾರ್ಯಗಳ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಅನುಕೂಲ ಆಗುತ್ತದೆ. ಹೀಗಾಗಿ, ನಮ್ಮಲ್ಲೂ ಈ ಮಾದರಿಯನ್ನು ಪ್ರಾಯೋಗಿಕವಾಗಿ ಅನುಸರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT