ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯ, ನೋಟು ಸಂಗ್ರಹಿಸುವ ಶಿಕ್ಷಕ

ಹಿರೇರೂಗಿ ಶಾಲೆಯ ಸಂತೋಷ ಬಂಡೆ ಹವ್ಯಾಸಕ್ಕೆ ಮೆಚ್ಚುಗೆ
Last Updated 4 ಜನವರಿ 2020, 16:08 IST
ಅಕ್ಷರ ಗಾತ್ರ

ತಾಂಬಾ: ಪ್ರತಿ ದಿನದ ಜಂಜಾಟಗಳ ನಡುವೆ ಒಂದು ಹವ್ಯಾಸವಿದ್ದಿದ್ದೇ ಆದರೆ ಎಷ್ಟೋ ಸಂಕಟಗಳು ಮಾಯವಾಗಿ, ಮನಸ್ಸಿನಲ್ಲಿ ಆಹ್ಲಾದ ಮೂಡುತ್ತದೆ. ನಾಣ್ಯಗಳ ಸಂಗ್ರಹವೂ ಅವುಗಳಲ್ಲೊಂದು.

ನಮ್ಮ ಇಂದಿನ ಜೀವನ ಶೈಲಿಯಲ್ಲಿ ಹವ್ಯಾಸಗಳಿಗೆ ಸ್ವಲ್ಪ ಸಮಯ ಕೊಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರಿ ಚೈತನ್ಯ ತಂದುಕೊಡುತ್ತವೆ.

ಹಳೆಯ ಕಾಲದ ನಾಣ್ಯಗಳು ಕಳೆದುಹೋದ ದಿನಗಳು, ಆ ದಿನಗಳ ಜೀವನಶೈಲಿ, ಹಣದ ಮೌಲ್ಯದ ಬಗ್ಗೆ ಸಾರಿ ಹೇಳುತ್ತವೆ. 1 ನಯಾಪೈಸೆ, 2 ನಯಾ ಪೈಸೆ, 3 ನಯಾ ಪೈಸೆ, 5 ಪೈಸೆ, 10 ಪೈಸೆಯಂತಹ ನಾಣ್ಯಗಳು ಈಗ ಗತಕಾಲ ಸೇರಿವೆ.

15 ವರ್ಷಗಳಿಂದ ಐತಿಹಾಸಿಕ ಮಹತ್ವವುಳ್ಳ ದೇಶ ಮತ್ತು ವಿದೇಶಗಳ ನಾಣ್ಯ, ನೋಟುಗಳ ಸಂಗ್ರಹ ಕಾರ್ಯದಲ್ಲಿ ತೊಡಗಿರುವ ಹಿರೇರೂಗಿ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಇಂಗ್ಲಿಷ್ ಶಿಕ್ಷಕ ಸಂತೋಷ ಬಂಡೆ ಅವರು ವಿಶೇಷವಾಗಿ ಗಮನ ಸೆಳೆಯುತ್ತಾರೆ.

ಇವರು ವಿಜಯಪುರ ತಾಲ್ಲೂಕು ನಾಗಠಾಣ ಗ್ರಾಮದವರು. ತಮ್ಮ ಸಂಗ್ರಹದಲ್ಲಿ ಆದಿಲ್ ಶಾಹಿ ಕಾಲದ ನಾಣ್ಯಗಳು, 1835ರ ಈಸ್ಟ್‌ ಇಂಡಿಯಾ ಕಂಪನಿ ನಾಣ್ಯ, 1886ರ ಭಾರತದ ನಾಣ್ಯ, 1942ರ ಭಾರತದ 2 ಅನ್ನಾ ನಾಣ್ಯ, 1943ರ ತೂತಿನ ನಾಣ್ಯ, 1947ರ ಜಾರ್ಜ್ 6ನೇ ರಾಜನ ನೆನಪಿನ ನಾಣ್ಯ, 1948ರ ಗಾಂಧಿ ನೆನಪಿನ 20 ಪೈಸೆ, 1954ರ ಅರ್ಧ ರೂಪಾಯಿ ನಾಣ್ಯ, ಭಾರತವು ಅಬಿವೃದ್ಧಿ ಪಥದತ್ತ ಸಾಗುತ್ತಿದೆ ಎಂಬರ್ಥದ ವಿಶೇಷಕುದುರೆ ಚಿತ್ರದ ನಾಣ್ಯಗಳ ಜೊತೆಗೆ ಪ್ರಸ್ತುತ ₹1, ₹2, ₹5, ₹10 ನಾಣ್ಯಗಳನ್ನು ಹೊಂದಿದ್ದಾರೆ.

ಕೀನ್ಯಾ, ದುಬೈ, ಯುವಾನ್, ಸಿಂಗಾಪುರ, ನೆದರ್‌ಲ್ಯಾಂಡ್ಸ್, ಭೂತಾನ್‌, ಬಹ್ರೇನ್, ಇಂಗ್ಲೆಂಡ್, ಬುಡಾಪೆಸ್ಟ್‌, ಡಚ್‍ಲ್ಯಾಂಡ್‌, ಫ್ರಾನ್ಸ್‌, ಆಸ್ಟ್ರೇಲಿಯಾ, ಅಮೆರಿಕ, ಸೌದಿ ಅರೇಬಿಯಾ ದೇಶಗಳ ನಾಣ್ಯ, ನೋಟುಗಳನ್ನು ಸಂಗ್ರಹಿಸಿದ್ದಾರೆ. ಮುಂದಿನ ಪೀಳಿಗೆಗೆ ಭಾರತ ದೇಶದ ನಾಣ್ಯಗಳ ಇತಿಹಾಸ ಹಾಗೂ ಭಾರತದ ಅರ್ಥ ವ್ಯವಸ್ಥೆಯ ಕುರಿತಾಗಿ ಸಂದೇಶ ರವಾನಿಸುವುದು ಸಂತೋಷ ಅವರ ಮುಖ್ಯ ಗುರಿ.

ಸಂತೋಷ ಅವರ ಈ ಹವ್ಯಾಸಕ್ಕೆ ಗ್ರಾಮದ ಜನತೆ, ಗೆಳೆಯರು, ಶಿಕ್ಷಕರು, ವಿದ್ಯಾರ್ಥಿಗಳು ಮಾರು ಹೋಗಿ, ಪ್ರೋತ್ಸಾಹಿಸುತ್ತಿದ್ದಾರೆ.

1950ರ ಆಗಸ್ಟ್ 15ರ ನಂತರ ನೋಟು ಮತ್ತು ನಾಣ್ಯಗಳಲ್ಲಿ ಬ್ರಿಟಿಷ್‌ ಆಡಳಿತಗಾರರ ಚಿತ್ರದ ಬದಲಿಗೆ ಅಶೋಕ ಸ್ತಂಭದ ಚಿತ್ರ ಮುದ್ರಿಸುವ ಪದ್ಧತಿ ಜಾರಿಗೆ ಬಂದಿತು. ಈ ಕಾಲದ ಮಹತ್ತರ ನಾಣ್ಯಗಳು ಸಂತೋಷ ಅವರ ಸಂಗ್ರಹದಲ್ಲಿವೆ. ಒಟ್ಟು 200ಕ್ಕೂ ಹೆಚ್ಚು ನಾಣ್ಯಗಳು ಮತ್ತು ನೋಟುಗಳು ಸಂತೋಷ ಅವರು ಸಂಗ್ರಹದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT