ಬುಧವಾರ, ನವೆಂಬರ್ 20, 2019
26 °C

ತಲಾಖ್ ವಿರೋಧಿಸಿ ಮಹಿಳೆಯ ಪ್ರತಿಭಟನೆ

Published:
Updated:
Prajavani

ಶಿವಮೊಗ್ಗ: ‘ಪ್ರೀತಿಸಿ ಮದುವೆಯಾದ ಪತಿ ವಾಟ್ಸ್‌ಆ್ಯಪ್‌ನಲ್ಲೇ ತಲಾಖ್ ನೀಡಿದ್ದಾರೆ. ದೇಶದಲ್ಲಿ ತಲಾಖ್ ರದ್ದಾದರೂ ಧರ್ಮದ ಮುಖಂಡರು, ತವರು, ಪತಿ ಮನೆಯವರು ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಆಯೇಷಾ ಸಿದ್ದಿಕಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

‘ಮುಸ್ಲಿಂ ಹೆಣ್ಣುಮಕ್ಕಳ ಗೋಳು ಯಾರೂ ಕೇಳುತ್ತಿಲ್ಲ. ಸಂಘ–ಸಂಸ್ಥೆಗಳು, ಸಂಘಟನೆಗಳು, ಪೊಲೀಸರು ನೆರವಾಗುತ್ತಿಲ್ಲ. ಮಗಳ ಪೋಷಣೆಯೂ ಕಷ್ಟವಾಗಿದೆ. 20 ವರ್ಷಗಳ ಕಾಲ ಜತೆಗಿದ್ದ ಪತಿ ಒಮ್ಮೆಯೇ ದೂರವಾದರೆ ಹೇಗೆ ಬದುಕು ನಡೆಸಬೇಕು? ₹ 5 ಲಕ್ಷ ಪರಿಹಾರ ಪಡೆದರೆ ಮಗಳಿಗೆ ತಂದೆ ಸಿಗುತ್ತಾರೆಯೇ ಎಂದು ಪ್ರಶ್ನಿಸಿದರು.

ನಗರದ ಮುಸ್ತಾಫಾ ಬೇಗ್ ಅವರನ್ನು ಪ್ರೀತಿಸಿದ್ದೆ. ದೊಡ್ಡವರ ಇಚ್ಛೆಯಂತೆ ಮದುವೆಯಾದೆ. ಎಂದೂ ಕಷ್ಟದ ಬದುಕು ಕಂಡಿಲ್ಲ. ಈಗ ದಿಢೀರ್ ಎಂದು ದುಬೈನಿಂದ ತಲಾಖ್ ಹೇಳಿ ಬೀದಿಗೆ ತಳ್ಳಿದ್ದಾರೆ. ಇದು ಅವಮಾನೀಯ ಕೃತ್ಯ. ಇದಕ್ಕೆ ನನ್ನ ಸಹಮತವಿಲ್ಲ’ ಎಂದರು.

ಧರಣಿ ಸ್ಥಳದಲ್ಲಿ ಜೀವನ ನಡೆಸಲು ಧನ ಸಹಾಯ ಮಾಡುವಂತೆ ಕೋರಿ ಡಬ್ಬಿ ಇಡಲಾಗಿತ್ತು. ಹಲವರು ಮಹಿಳೆಯ ಕಷ್ಟಕ್ಕೆ ಮರುಗಿ ಧನ ಸಹಾಯ ಮಾಡಿದರು.

ಪ್ರತಿಕ್ರಿಯಿಸಿ (+)